ಶೃಂಗೇರಿ: ಧಾರ್ಮಿಕ ಕ್ಷೇತ್ರ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಕುಟುಂಬದವರು ಗುರುವಾರ ಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯಾಗ ಕೈಗೊಂಡಿದ್ದು, ಕುತೂಹಲ ಮೂಡಿಸಿ ದ್ದರೂ ಇದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂದು ಗೌಡರ ಕುಟುಂಬದವರು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸಂಜೆಯೇ ಮಾಜಿ ಪ್ರಧಾನಿ ದೇವೇಗೌಡ, ಪತ್ನಿ ಚನ್ನಮ್ಮ, ಸಿಎಂ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರ ಸ್ವಾಮಿ, ನಿಖೀಲ್‌ಗೌಡ ಶೃಂಗೇರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಶ್ರೀ ಶಾರದಾ ಪೀಠಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಶ್ರೀಮಠದ ಯಾಗ ಶಾಲೆಯಲ್ಲಿ ನಡೆದ ಚಂಡಿಕಾಯಾಗ, ಸುಹಾಸಿನಿ ಪೂಜೆಯಲ್ಲಿ ಪಾಲ್ಗೊಂಡರು. ನಂತರ ಯಾಗಕ್ಕೆ ಪೂರ್ಣಾಹುತಿ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು. ಶ್ರೀಮಠದ ನರಸಿಂಹವನಕ್ಕೆ ತೆರಳಿ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮಂಡ್ಯದಲ್ಲಿ ನಿಖೀಲ್ ಸ್ಪರ್ಧಿಸೋದಕ್ಕೂ ಇಲ್ಲಿ ಪೂಜೆ ಮಾಡಿದ್ದಕ್ಕೂ ಯಾವುದೇ ಸಂಬಂಧವಿಲ್ಲ. ಮಂಡ್ಯ ಜನ ನಿಖೀಲ್ ಗೌಡ ಅಭ್ಯರ್ಥಿಯಾಗಬೇಕು ಎಂದು
ಬಯಸಿದ್ದಾರೆ. “ಗೋಬ್ಯಾಕ್ ನಿಖೀಲ್’ವಿಚಾರವಾಗಿ ನಾನು ಪ್ರತಿಕ್ರಿಯಿಸೋದಿಲ್ಲ ಎಂದರು.
ಶಾರದಾಂಬೆ ಹಾಗೂ ಜಗದ್ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೇವೆ. ದೇವಿ ಆಶೀರ್ವಾದದಿಂದ ತಂದೆ ಮುಖ್ಯಮಂತ್ರಿ ಯಾಗಿದ್ದಾರೆ. ಮಂಡ್ಯ ಜನತೆಯ ನಾಡಿ ಮಿಡಿತ ಅರ್ಥ ಮಾಡಿ ಕೊಂಡಿರುವುದಕ್ಕೆ ಪಕ್ಷ ಟಿಕೆಟ್ ನೀಡುತ್ತಿದೆ. ಮಂಡ್ಯ ಜನತೆಯ ಸೇವೆ ಮಾಡಲು ಸಿದ್ಧ . ● ನಿಖೀಲ್ ಕುಮಾರಸ್ವಾಮಿ