Advertisement

Karnataka: ಕಾವೇರಿಗಾಗಿ ಒಂದಾಯಿತು ಚಂದನವನ

12:32 AM Sep 30, 2023 | Team Udayavani |

ಪ್ರತಿಭಟನೆಯಲ್ಲಿ ಶಿವಣ್ಣ, ದರ್ಶನ್‌, ಉಪೇಂದ್ರ, ಧ್ರುವ, ವಿಜಯ್‌ ಸೇರಿ ಸ್ಟಾರ್‌ ಸಮಾಗಮ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ (ಸೆ.29) ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ನಲ್ಲಿ ಕನ್ನಡ ಚಿತ್ರೋದ್ಯಮವೂ ಭಾಗಿಯಾಗಿ ತನ್ನ ಬದ್ಧತೆಯನ್ನು ಪ್ರದರ್ಶಿಸಿತು. ನಟ ಶಿವರಾಜಕುಮಾರ್‌ ನೇತೃತ್ವದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಚಿತ್ರರಂಗದ ಪರವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಕನ್ನಡ ಚಿತ್ರರಂಗದ ನೂರಾರು ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರೂ  ಉಪಸ್ಥಿತರಿದ್ದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ  ಶಿವರಾಜ ಕುಮಾರ್‌, “ಕಾವೇರಿ ಸಮಸ್ಯೆ ಮೊದಲಿನಿಂದಲೂ ಇದೆ. ಆಗಿನಿಂದಲೂ ನಾವು ಹೋರಾಟದಲ್ಲಿ ಭಾಗಿಯಾಗುತ್ತಿದ್ದೇವೆ, ಇದನ್ನು ನೋಡಿದರೆ ಕಾವೇರಿಗೆ ಎಷ್ಟು ನೋವಾಗುತ್ತಿರಬಹುದು ಅಲ್ವೇ? ಇಲ್ಲಿಯೂ ಇರಬೇಕು, ಅಲ್ಲಿಯೂ ಹೋಗಬೇಕು. ನೀರಿಲ್ಲ ಅಂದ್ರೆ ಅಳಬೇಕು. ಆದರೆ ತಾಯಿ ಪವರ್‌ ಅಂಥದ್ದು, ಎಲ್ಲ ನೋವನ್ನು ಅವಳು ತಗೊಳ್ಳುತ್ತಾಳೆ. ಸಮಸ್ಯೆಗಳು ಬಂದಾಗ ಕಲಾವಿದರು ಬರುವುದಿಲ್ಲ ಅಂತ ಹೇಳಲಾಗುತ್ತದೆ. ನಾವು ಬಂದು ಏನು ಮಾಡಬೇಕು ಅಂತ ಹೇಳಿ? ಸಿನೆಮಾದವರು ಬಂದು 5 ನಿಮಿಷ ಮಾತನಾಡಿದರೆ  ಸಮಸ್ಯೆ ಬಗೆಹರಿಯುತ್ತಾ?’ ಎಂದು ಪ್ರಶ್ನಿಸಿದರು. “ನಮ್ಮ ರೈತರು ಬೇರೆ ಅಲ್ಲ. ತಮಿಳುನಾಡು ರೈತರು ಬೇರೆ ಅಲ್ಲ.  ಎಲ್ಲರೂ ರೈತರು ಅಷ್ಟೇ.  ಕಲಾವಿದ ರಾದ ನಾವು ಎಲ್ಲ ಭಾಷೆಯನ್ನು ಪ್ರೀತಿಸುತ್ತೇವೆ.  ತಮಿಳುನಾಡು ಮತ್ತು  ಕರ್ನಾಟಕ ಸರಕಾರ ಕುಳಿತು ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.

ಸಿದ್ಧಾರ್ಥ್ ಕ್ಷಮೆ ಕೋರಿದ ಶಿವಣ್ಣ

ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ನಡೆಯುತ್ತಿದ್ದ ತಮಿಳು ನಟ ಸಿದ್ಧಾರ್ಥ್ ಅವರ ಸುದ್ದಿಗೋಷ್ಠಿಯನ್ನು ಕಾವೇರಿ ಪರ ಹೋರಾಟದ ಹೆಸರಿನಲ್ಲಿ ನಿಲ್ಲಿಸಲಾಗಿತ್ತು. ಈ ವಿಷಯವನ್ನೂ ಪ್ರಸ್ತಾಪಿಸಿದ   ಶಿವರಾಜಕುಮಾರ್‌, “ಬಸ್‌ಗಳನ್ನು ಹಾಳು ಮಾಡಿದ್ರೆ ಹೋರಾಟ ಆಗುತ್ತದಾ? ಬೇರೆ ಭಾಷೆಯ ನಟರ ಸುದ್ದಿಗೋಷ್ಠಿಯನ್ನು ನಿಲ್ಲಿಸಿದರೆ ಹೋರಾಟವಾಗುತ್ತದೆಯಾ?   ಸಮಸ್ಯೆಯನ್ನು ನಾವು ಎದುರಿ ಸಬೇಕು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ನಾವು ಈ ರೀತಿ ಸಮಸ್ಯೆಯಿಂದ ಪ್ರಯೋಜನ ಪಡೆದು ಕೊಳ್ಳಬಾರದು.  ಸಿ¨ªಾರ್ಥ್ಗೆ ನಮ್ಮಿಂದ ಬೇಸರ ಆಗಿದೆ, ಕನ್ನಡ ಚಿತ್ರರಂಗದ ಪರವಾಗಿ ಅವರಿಂದ ನಾವು ಕ್ಷಮೆ ಕೇಳುತ್ತೇವೆ ಎಂದರು.

ಪರಿಹಾರ ಸಿಗದಿರೋ ಸಮಸ್ಯೆ

Advertisement

ನಟ ಉಪೇಂದ್ರ ಮಾತನಾಡಿ, “ಬಹುಶಃ ನಾನು ಚಿತ್ರರಂಗಕ್ಕೆ ಬಂದಮೇಲೆ ಇದು 20ನೇ ಹೋರಾಟ ಆಗಿರಬೇಕು. ಪರಿಹಾರ ಸಿಗದಿರೋ ಸಮಸ್ಯೆ ಅಂದರೆ ಇದೇ ಇರಬೇಕು. ಪ್ರತಿ ವರ್ಷ ನಾವು ಕಾವೇರಿ ನಮಗೆ ಬೇಕು ಅಂತ ಹೋರಾಟ ಮಾಡುತ್ತೇವೆ. ತಮಿಳುನಾಡಿನವರು ನೀರು ಕೊಡಿ ಅಂತಾರೆ, ನಾವು ಬಿಡಲ್ಲ ಅಂತೇವೆ. ನಿಜಕ್ಕೂ ತಮಿಳುನಾಡಿನವರು ನೀರು ಬೇಕು ಅಂತ ಹೋರಾಟ ಮಾಡಬೇಕು, ಆದರೆ ನಾವು ಬಿಡೋದಿಲ್ಲ ಅಂತ ಹೋರಾಟ ಮಾಡುತ್ತಿರೋದು ಆಶ್ಚರ್ಯ ಮೂಡಿಸಿದೆ. ನಾವು ವಿಚಾರವಂತರಾಗಬೇಕು ಎಂದರು.

ಸಾಥ್‌ ನೀಡಿದ ಕಲಾವಿದರು

ಪ್ರತಿಭಟನಾ ಮೆರವಣಿಗೆಯಲ್ಲಿ ಹಿರಿಯ ನಟರಾದ ಶ್ರೀನಾಥ್‌, ಶ್ರೀನಿವಾಸಮೂರ್ತಿ, ಸುಂದರ್‌ ರಾಜ್‌, ಉಪೇಂದ್ರ, ದರ್ಶನ್‌, ಶ್ರೀಮುರಳಿ, ವಿಜಯ್‌ ರಾಘವೇಂದ್ರ, ವಿಜಯ್‌, ಧ್ರುವ ಸರ್ಜಾ, ಸತೀಶ ನೀನಾಸಂ, ಅನಿರುದ್ಧ್ ಜತ್ಕರ್‌, ಪೂಜಾ ಗಾಂಧಿ, ಅನು ಪ್ರಭಾಕರ್‌, ರಘು ಮುಖರ್ಜಿ, ಉಮಾಶ್ರೀ, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ಹಿರಿಯ ನಟಿ ಗಿರಿಜಾ ಲೋಕೇಶ್‌, ನವೀನ್‌ ಕೃಷ್ಣ,  ಪ್ರಮೀಳಾ ಜೋಶಾಯ, ಮಿತ್ರ, ರೂಪಿಕಾ, ಪದ್ಮಾ ವಾಸಂತಿ, ಧರ್ಮ ಕೀರ್ತಿರಾಜ್‌, ಚಿಕ್ಕಣ್ಣ ಮುಂತಾದವರು  ಭಾಗಿಯಾಗಿದ್ದರು. ಮಂಡಳಿ ಅಧ್ಯಕ್ಷರಾದ ಎನ್‌.ಎಂ.ಸುರೇಶ್‌ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಾವು ಮನುಷ್ಯರು. ನಮಗೆ ಸ್ಟಾರ್‌ಡಂ ಕೊಟ್ಟಿರೋದು ನೀವು, ಬೇಕಿದ್ದರೆ ಅದನ್ನು ಕಿತ್ತುಕೊಳ್ಳಿ.  ಟ್ವೀಟ್‌ ಮಾಡಿದರೆ ಮಾತ್ರ ಕಾವೇರಿ ಮೇಲೆ ನಮ್ಮ ಪ್ರೀತಿ ಎಂದರ್ಥವಲ್ಲ; ನಮ್ಮ ಪ್ರೀತಿ ಸದಾ ಇರುತ್ತದೆ.-ಶಿವರಾಜ್‌ ಕುಮಾರ್‌,  ನಟ

 

Advertisement

Udayavani is now on Telegram. Click here to join our channel and stay updated with the latest news.

Next