ವರಮಹಾಲಕ್ಷ್ಮಿ ಹಬ್ಬಕ್ಕೆ ಗುಡ್‍ನ್ಯೂಸ್ ಕೊಡುವುದಾಗಿ ಹೇಳಿದ್ದ ರ್ಯಾಪರ್ ಚಂದನ್ ಶೆಟ್ಟಿ ಮಾತುಕೊಟ್ಟಂತೆ ಸಿಹಿಸುದ್ದಿ ಕೊಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾದ ಟೈಟಲ್ ರಿವೀಲ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಪ್ಲಸ್ ಸಿನಿಮಾ ಪ್ರೇಮಿಗಳಿಗೆ ಸರ್ಪೈಸ್ ಕೊಟ್ಟಿದ್ದಾರೆ. ನಿರ್ದೇಶಕ ಅರುಣ್ ಅಮುಕ್ತ ಜೊತೆಗೂಡಿ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಘೋಷಣೆ ಮಾಡಿದ್ದಾರೆ. ವಿಶೇಷವೆಂದರೆ ಚಂದನ್ ಶೆಟ್ಟಿ ಅಭಿಮಾನಿಗಳು ಸೇರಿದಂತೆ ಕಾಲೇಜುಗಳ ವಿದ್ಯಾರ್ಥಿಗಳು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಟೈಟಲ್ ಬಿಡುಗಡೆಗೊಳಿಸಿ ರ್ಯಾಪರ್ ಸಿನಿಮಾಗೆ ಶುಭಹಾರೈಸಿದ್ದಾರೆ.
‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಟೀನೇಜ್ ಡ್ರಾಮಾವುಳ್ಳ ಕಥೆಯಾಗಿದ್ದು ಅರುಣ್ ಅಮುಕ್ತ ಡೈರೆಕ್ಟ್ ಮಾಡ್ತಿದ್ದಾರೆ. ಈ ಹಿಂದೆ, ರೋರಿಂಗ್ ಸ್ಟಾರ್ ಶ್ರೀಮುರುಳಿಯವರಿಗೆ ‘ಲೂಸ್‍ಗಳು’ ಸಿನಿಮಾ ನಿರ್ದೇಶನ ಮಾಡಿದ್ದ ಅವರು ಈಗ ಚಂದನ್ ಶೆಟ್ಟಿಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಆಗ್ತಿದ್ದಾರೆ. ರ್ಯಾಪ್ ಸಾಂಗ್‍ಗಳ ಮೂಲಕ ಯಂಗ್ ಜನರೇಷನ್‍ನ ಹುಚ್ಚೆಬ್ಬಿಸಿರುವ ಶೆಟ್ರನ್ನು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರಕ್ಕೆ ಹೀರೋ ಮಾಡಿದ್ದಾರೆ.
ಅಷ್ಟಕ್ಕೂ, ಶೆಟ್ರಿಗೆ ಇದೇನು ಮೊದಲ ಸಿನಿಮಾ ಅಲ್ಲ. ಈಗಾಗಲೇ ‘ಎಲ್ರ ಕಾಲೆಳಿಯುತ್ತೆ ಕಾಲ’ ಹಾಗೂ ಸೂತ್ರಧಾರಿ ಸಿನಿಮಾಗೆ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಹೀರೋ ಆಗಿ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಹೀಗಿರುವಾಗಲೇ ರ್ಯಾಪರ್ ಚಂದನ್ ಶೆಟ್ಟಿಗೆ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದಲ್ಲಿ ನಾಯಕನಾಗುವ ಅವಕಾಶ ಸಿಕ್ಕಿದೆ. ರ್ಯಾಪರ್ ಹಾರ್ಡ್‍ವರ್ಕ್‍ಗೆ ಪ್ಲಸ್ ಪ್ರತಿಭೆಗೆ ಅದೃಷ್ಟ ಕೈ ಹಿಡಿಯುತ್ತಿದೆ.
ಅಂದಹಾಗೆ, ಶೆಟ್ರು ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದು ಗೀತೆರಚನೆಕಾರನಾಗಿ. ಅಲೆಮಾರಿ ಚಿತ್ರದಿಂದ ಅಸಿಸ್ಟೆಂಟ್ ಮ್ಯೂಸಿಕ್ ಡೈರೆಕ್ಟರ್ ಆಗಿ ವೃತ್ತಿ ಆರಂಭಿಸಿದ ಶೆಟ್ರು, ಇವತ್ತು ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ, ಬರಹಗಾರನಾಗಿ ಗುರ್ತಿಸಿಕೊಂಡಿದ್ದಾರೆ. ಸೂಪರ್ ಹಿಟ್ ಆಲ್ಬಂಗಳ ಮೂಲಕ ಸೈ ಎನಿಸಿಕೊಂಡು ಯಶಸ್ವಿ ರ್ಯಾಪರ್ ಆಗಿದ್ದಾರೆ. ಬಿಗ್‍ಬಾಸ್ ಮನೆಗೆ ಹೋಗಿಬಂದಮೇಲೆ ಮತ್ತಷ್ಟು-ಮಗದಷ್ಟು ಖ್ಯಾತಿ ಪಡೆದಿರುವ ಶೆಟ್ರು, ಟೆಲಿವಿಷನ್ ಶೋಗಳಲ್ಲಿ ಜಡ್ಜ್ ಆಗಿ ಕೂತಿದ್ದಾರೆ. ಗಂಧದಗುಡಿಯ ಸೂಪರ್ ಸ್ಟಾರ್ ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುವುದರ ಜೊತೆಗೆ ಬೆಳ್ಳಿಭೂಮಿ ಮೇಲೆ ತಾವು ನಾಯಕನಟನಾಗಿ ಮೆರವಣಿಗೆ ಹೊರಡಲು ಸಿದ್ದರಾಗಿದ್ದಾರೆ. ಬಿಗ್‍ಸ್ಕ್ರೀನ್ ಮೇಲೆ ತಮ್ಮ ಹೀರೋನ ನೋಡೋದಕ್ಕೆ ಅವರ ಅಭಿಮಾನಿಗಳು ಕೂಡ ಅಷ್ಟೇ ಕಾತುರರಾಗಿದ್ದಾರೆ.
ಇನ್ನೂ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ವೆರೈಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡರು ಬಂಡವಾಳ ಹೂಡುತ್ತಿದ್ದಾರೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭಣವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಮಾಡಲಿದ್ದಾರೆ.