Advertisement

2 ಲಕ್ಷ ರೂ.ಗಳ ವರೆಗೆ ಬಹುಮಾನ ಗೆಲ್ಲಲು ಅವಕಾಶ

05:05 AM May 25, 2018 | Team Udayavani |

ಮಹಾನಗರ: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಹಯೋಗದೊಂದಿಗೆ ಪ್ರಧಾನ ಮಂತ್ರಿಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಸ್ವಚ್ಛ ಭಾರತ ಬೇಸಗೆ ಪ್ರಾಯೋಜಿತ ಸ್ವಚ್ಛತಾ ಕಾರ್ಯಕ್ರಮವನ್ನು ಯುವಜನರ ಮೂಲಕ ಮಾಡಿಸಲು ಸರಕಾರ ನಿರ್ಧರಿಸಿದೆ. ಕಾರ್ಯಕ್ರಮವು ಮೇ1ರಿಂದ ಆರಂಭಗೊಂಡಿದ್ದು, ಜು. 31ರ ವರೆಗೆ ದಿನವೊಂದಕ್ಕೆ 1 ಗಂಟೆಯಂತೆ 100 ಗಂಟೆಗಳ ಕಾಲ ನಡೆಯಲಿದ್ದು, ನೆಹರೂ ಯುವ ಕೇಂದ್ರದಲ್ಲಿ ಸಂಯೋಜನೆಗೊಂಡಿರುವ ಯುವ ಮಂಡಳಿ ಸದಸ್ಯರು ಪಾಲ್ಗೊಳಬಹುದಾಗಿದೆ. ಭಾಗವಹಿಸುವವರು ಜೂ. 15ರ ಒಳಗಾಗಿ ನೋಂದಣಿ ಮಾಡಿಕೊಳ್ಳಬಹುದು. 

Advertisement

ಗ್ರಾಮೀಣ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ತರಬೇತಿಗಳನ್ನು ಹಮ್ಮಿಕೊಳ್ಳಲಾಗುವುದು. ಆರೋಗ್ಯದ ದೃಷ್ಟಿಯಿಂದ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಗೆ ಬಗ್ಗೆ ಮಾಹಿತಿ ನೀಡುವುದು, ಸ್ವಚ್ಛತೆ ಅರಿವು ಮೂಡಿಸುವ ಬೀದಿ ನಾಟಕ, ರ್ಯಾಲಿ, ಸಾಂಸ್ಕೃತಿಕ ಕಾರ್ಯಕ್ರಮ, ನೈರ್ಮಲ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿಸುವ ಶೌಚಾಲಯ, ಕೈ ತೊಳೆಯುವಿಕೆ, ನೈರ್ಮಲ್ಯದ ಅರಿವು ಇತ್ಯಾದಿಗಳನ್ನು ಬಳಸಿಕೊಂಡು ಉತ್ತಮ ನೈರ್ಮಲ್ಯ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವುದು, ನೈರ್ಮಲ್ಯದ ಬಗ್ಗೆ ಮನೆ ಮನೆಗೆ ತೆರಳಿ ತಿಳುವಳಿಕೆ ಮೂಡಿಸುವುದು, ಘನ ತ್ಯಾಜ್ಯ ನಿರ್ವಹಣೆ ಸಂಬಂಧಿತ ಚಟುವಟಿಕೆಗಳು, ತ್ಯಾಜ್ಯ ಸಂಗ್ರಹಣೆ- ಪ್ರತ್ಯೇಕತೆ-ವಿಲೇವಾರಿ ಮತ್ತು ಮುಕ್ತ ಸ್ವಚ್ಛ ವಾತಾವರಣದ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು, ಹಳ್ಳಿಗಳಲ್ಲಿ ಬಯಲು ಮಲ ವಿಸರ್ಜನೆ ನಿಲ್ಲಿಸಲು ನಿಗಾ ಸಮಿತಿಗಳನ್ನು ರಚಿಸುವುದು, ಶೌಚಾಲಯ ನಿರ್ಮಿಸುವುದು ಅಥವಾ ನಿರ್ಮಿಸುವಲ್ಲಿ ಸಹಾಯ ಮಾಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಬೇಕು. ಮೇ 1ರಿಂದ ಜುಲೈ 31ರ ವರೆಗೆ 100 ಗಂಟೆಗಳ ಕಾರ್ಯಕ್ರಮ ಮಾಡಿ, ಅದಕ್ಕೆ ಸಂಬಂಧಪಟ್ಟಂತೆ ಇರುವ ಕಾರ್ಯ ಕ್ರಮಗಳ ವರದಿ, ಫೋಟೋ, ಪೇಪರ್‌ ಕಟ್ಟಿಂಗ್‌, ವೀಡಿಯೋ, ಕ್ಲಿಪಿಂಗ್‌ಗಳನ್ನು sbsi.mygov.in ವೆಬ್‌ ಸೈಟ್‌ ನಲ್ಲಿ ಲಾಗ್‌ ಇನ್‌ ಆಗಿ  ಆಯಾ ದಿನದ ಕಾರ್ಯಕ್ರಮಗಳ ವರದಿಯನ್ನು ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ನೆಹರೂ ಯುವ ಕೇಂದ್ರ, ಕಂದಾಯ ಭವನ, ಜಿಲ್ಲಾಧಿಕಾರಿ ಕಚೇರಿ ಅವರಣ ಸಂಪರ್ಕಿಸಬಹುದು.

ಬಹುಮಾನ
ಉತ್ತಮ ಕೆಲಸ ನಿರ್ವಹಿಸಿದವರಿಗೆ ಸ್ವಚ್ಛ ಭಾರತ ಬೇಸಗೆ ಪ್ರಾಯೋಜಿತ ಕಾರ್ಯಕ್ರಮದ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಅಲ್ಲದೆ ಜಿಲ್ಲಾ ಮಟ್ಟದಲ್ಲಿ 30,000  ರೂ. (ಪ್ರ), 20,000 ರೂ. (ದ್ವಿ.), 10,000 ರೂ. (ತೃ.) ಬಹುಮಾನಗಳನ್ನು ನೀಡಲಾಗುವುದು. ರಾಜ್ಯ ಮಟ್ಟಕ್ಕೆ 50,000 ರೂ. (ಪ್ರ.), 30,000 ರೂ. (ದ್ವಿ.), 20,000 ರೂ. (ತೃ.) ಬಹಮಾನ, ರಾಷ್ಟ್ರ ಮಟ್ಟಕ್ಕೆ 2,00,000 ರೂ. (ಪ್ರ.), 1,00,000 ರೂ. (ದ್ವಿ.) 50,000 ರೂ. (ತೃ.) ಬಹುಮಾನಗಳನ್ನು ನೀಡಲಾಗುವುದು ಎಂದು  ನೆಹರೂ ಯುವಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next