Advertisement

ಜೈಕಾರದೊಂದಿಗೆ ಚಾಮುಂಡೇಶ್ವರಿ ಮಹಾ ರಥೋತ್ಸವ 

12:30 PM Oct 06, 2017 | |

ಮೈಸೂರು: ಸಾವಿರಾರು ಜನ ಭಕ್ತರ ಜೈಕಾರದ ನಡುವೆ ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ಮಹಾ ರಥೋತ್ಸವ ನಡೆಯಿತು.
ಗುರುವಾರ ಬೆಳಗ್ಗೆ 8.05 ರಿಂದ 8.45ರೊಳಗಿನ ಉತ್ತರಭಾದ್ರ ನಕ್ಷತ್ರ, ತುಲಾ ಲಗ್ನದಲ್ಲಿ ಜರುಗಿದ ಮಹಾ ರಥೋತ್ಸವಕ್ಕೆ ಮೈಸೂರು ಜಿಲ್ಲೆ ಸೇರಿದಂತೆ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಶ್ರದ್ಧಾ, ಭಕ್ತಿಯಿಂದ ರಥೋತ್ಸವವನ್ನು ಕಣ್ತುಂಬಿಕೊಂಡರು.

Advertisement

ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಶಾಸಕ ಜಿ.ಟಿ.ದೇವೇಗೌಡ ಮತ್ತಿತರರು ಭಾಗವಹಿಸಿದ್ದರು. ಮಹಾ ರಥೋತ್ಸವ ಅಂಗವಾಗಿ ಗುರುವಾರ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಆಭರಣಗಳಿಂದ ಅಲಂಕರಿಸಿ, ಅಡ್ಡಪಲ್ಲಕ್ಕಿಯಲ್ಲಿಟ್ಟು ಮಂಗಳವಾದ್ಯದೊಂದಿಗೆ ದೇವಾಲಯ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮಂಗಳಾರತಿ ಬೆಳಗಿದ ನಂತರ ಯದುವೀರ್‌, ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ರಂದೀಪ್‌ ಮತ್ತಿತರರು ರಥ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ದೊರೆಯಿತು.

ಇದೇ ವೇಳೆ ಪೊಲೀಸ್‌ ಸಮೂಹ ವಾದ್ಯ ವೃಂದವರು ಕಾಯೋ ಸಿರಿಗೌರಿ ಗೀತೆ ಮೊಳಗಿಸಿದ ನಂತರ ಕುಶಾಲ ತೋಪು ಹಾರಿಸಲಾಯಿತು. ಈ ವೇಳೆ ಭಕ್ತರು ಜಯಘೋಷದೊಂದಿಗೆ ರಥ ಎಳೆದರು. ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಆಗಮಿಕ ಶಶಿಶೇಖರ ದೀಕ್ಷಿತ್‌ ದೇವಿಗೆ ಮಂಗಳಾರತಿ ಮಾಡಿ, ಪ್ರಸಾದ ನೀಡಿದರು.

ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದಿಂದ ಹೊರಟ ರಥ, ಮಹಾಬಲೇಶ್ವರ ದೇವಸ್ಥಾನ, ಲಕ್ಷಿನಾರಾಯಣ ದೇವಸ್ಥಾನದ ಮೂಲಕ ಮತ್ತೆ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ಕೊನೆಗೊಂಡಿತು. ಭಕ್ತರು ರಥಕ್ಕೆ ಹಣ್ಣು-ಧವನ ಎಸೆದು ಕೃತಾರ್ಥರಾದರು.

Advertisement

ಸಿಎಂ ಪತ್ನಿ ಪೂಜೆ: ನವರಾತ್ರಿ ಆರಂಭದಿಂದಲೂ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಅವರು ರಥೋತ್ಸವದ ದಿನವಾದ ಗುರುವಾರವೂ ಬೆಟ್ಟಕ್ಕೆ ಬಂದು ದೇವಿ ದರ್ಶನ ಪಡೆದರು. ರಥೋತ್ಸವ ಆರಂಭಕ್ಕೂ ಮುನ್ನ ಬೆಟ್ಟಕ್ಕೆ ಬಂದು ದೇವಿ ದರ್ಶನದ ಬಳಿಕ, ಉತ್ಸವ ಮೂರ್ತಿಗೂ ಪೂಜೆ ಸಲ್ಲಿಸಿ, ಉತ್ತನಹಳ್ಳಿಗೆ ತೆರಳಿದರು. 

ಆತಂಕ ಸೃಷ್ಟಿಸಿದ ಗೂಳಿ: ರಥೋತ್ಸವ ಆರಂಭಕ್ಕೂ ಮುನ್ನ ಗೂಳಿಯೊಂದು ಜನರ ಮಧ್ಯೆ ನುಗ್ಗಿ ಆತಂಕ ಸೃಷ್ಟಿಸಿತ್ತು. ಈ ವೇಳೆ ಜನರ ನೂಕುನುಗ್ಗಲಿಂದಾಗಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಯಿತು. ಸ್ಥಳದಲ್ಲಿದ್ದ ಪೊಲೀಸರು ಬ್ಯಾರಿಕೇಡ್‌ ಸರಿಸಿ ಗೂಳಿಯನ್ನು ಹೊರ ಕಳುಹಿಸಿದರು.

ರಾಜ್ಯದಲ್ಲಿ ಉತ್ತಮವಾಗಿ ಮಳೆ-ಬೆಳೆಯಾಗಿ, ಜನರು ಸುಭಿಕ್ಷೆಯಿಂದ ಜೀವನ ನಡೆಸುವಂತಾಗಲಿ ಎಂದು ದೇವಿಯನ್ನು ಪ್ರಾರ್ಥಿಸಿದ್ದೇವೆ.
-ಪ್ರಮೋದಾದೇವಿ ಒಡೆಯರ್‌, ರಾಜವಂಶಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next