ಮೈಸೂರು: ಎರಡು ವರ್ಷಗಳ ಬಳಿಕ ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ಚಾಮುಂಡೇಶ್ವರಿ ದೇವಿಯ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯಿತು.
ಮಂಗಳವಾರ ರಾತ್ರಿ ನಡೆದ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಮಹಾಮಾರಿ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳ ಕಾಲ ಸರಳವಾಗಿ ನಡೆದಿದ್ದ ತೆಪ್ಪೋತ್ಸವ ಈ ಬಾರಿ ವೈಭವದಿಂದ ಜರುಗಿತು. ಮಂಗಳವಾರ ತೆಪ್ಪೋತ್ಸವಕ್ಕೆ ಮುನ್ನ ಅಧಿದೇವತೆ ಚಾಮುಂಡಿದೇವಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ಬೆಳಗ್ಗೆ ದೇವಿಯ ತೀರ್ಥಸ್ನಾನ, ನೈವೇದ್ಯ ಕಾರ್ಯಕ್ರಮ ನೆರವೇರಿತು. ಸಂಜೆ ದೇವಿಕೆರೆಯಲ್ಲಿ ಪ್ರಾರಂಭವಾದ ತೆಪ್ಪೋತ್ಸವದಲ್ಲಿ ದೇವಿಯ ಉತ್ಸವಮೂರ್ತಿಯನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸ್ವಸ್ಥಾನಕ್ಕೆ ತರಲಾಯಿತು. ಬಳಿಕ ಅಧಿದೇವತೆಗೆ ಮಹಾಮಂಗಳಾರತಿ ಸಲ್ಲಿಸಲಾಯಿತು.
ಈ ವೇಳೆ ದೇವಿಕೆರೆಯ ಸುತ್ತಲು ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ದೇವಿಗೆ ಜೈಕಾರ ಹಾಕಿ ಪ್ರಾರ್ಥಿಸುವ ಮೂಲಕ ಭಕ್ತಿಭಾವ ಮೆರೆದರು. ನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ವಿವಿಧ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲಾಯಿತು. ಈ ಕಾರ್ಯದ ಅಂಗವಾಗಿ ಬೆಟ್ಟದಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಕಳೆದಭಾನುವಾರ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ರಥೋತ್ಸವ ವೈಭವದಿಂದ ಜರುಗಿತು. ತೆಪ್ಪೋತ್ಸವದ ಮೂಲಕ ದೇವಿಯ ರಥೋತ್ಸವ ಮುಕ್ತಾಯಗೊಳ್ಳುವುದು ಸಂಪ್ರದಾಯ. ಅದರಂತೆ ರಾತ್ರಿ ತೆಪ್ಪೋತ್ಸವ ವಿಧಿವತ್ತಾಗಿ ನಡೆಯಿತು.
ಕುಶಾಲತೋಪು ಗೌರವ: ತೆಪ್ಪೋತ್ಸವ ಸಂದರ್ಭ ನಗರ ಪೊಲೀಸರು ಮೂರು ಸುತ್ತು ಗಾಳಿಯಲ್ಲಿಗುಂಡು ಹಾರಿಸುವ ಮೂಲಕ ತಾಯಿ ಚಾಮುಂಡೇಶ್ವರಿಗೆ ಗೌರವ ಸಲ್ಲಿಸಿದರು.ದೇವಿಕೆರೆಯಲ್ಲಿ ಒಟ್ಟು ಮೂರು ಸುತ್ತು ಪ್ರದಕ್ಷಿಣೆಹಾಕಲಾಯಿತು. ಪ್ರತಿ ಸುತ್ತಿನ ಸಂದರ್ಭ ಕೂಡ ಕುಶಾಲತೋಪು ಸಿಡಿಸಲಾಯಿತು.
ಹೂಗಳಿಂದ ಸಿಂಗಾರ: ತೆಪ್ಪೋತ್ಸವ ಅಂಗವಾಗಿ ದೇವಿ ಉತ್ಸವಮೂರ್ತಿಗೆ ವಿವಿಧ ಆಭರಣಗಳು, ಹೂಗಳಿಂದ ಶೃಂಗರಿಸಲಾಗಿತ್ತು. ಈ ಸಂಭ್ರಮದ ಕ್ಷಣವನ್ನು ಸಾಕಷ್ಟು ಭಕ್ತರು ಕಣ್ತುಂಬಿಕೊಂಡರು.ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಎಡೀಸಿ ಮಂಜುನಾಥ ಸ್ವಾಮಿ ಸೇರಿ ಇತರರು ಭಾಗಿಯಾಗಿದ್ದರು. ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ತೆಪ್ಪೋತ್ಸವದ ಎಲ್ಲಾ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.