Advertisement

ಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋತ್ಸವ ವೈಭವ

09:14 PM Oct 13, 2019 | Lakshmi GovindaRaju |

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಮುಂಜಾನೆ ನಡೆದ ಚಾಮುಂಡೇಶ್ವರಿ ರಥೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ದೇವಿ ದರ್ಶನ ಪಡೆದು, ರಥಕ್ಕೆ ಹಣ್ಣು ಧವನ ಎಸೆದು ಭಕ್ತಿ ಸಮರ್ಪಿಸಿದರು.

Advertisement

ಆಶ್ವಯುಜ ಶುಕ್ಲ ಪೂರ್ಣಮಿ, ಉತ್ತರಭಾದ್ರ ನಕ್ಷತ್ರದಲ್ಲಿ ಬೆಳಗ್ಗೆ 6.48 ರಿಂದ 7.18ಗಂಟೆಯಲ್ಲಿ ಸಲ್ಲುವ ಶುಭ ತುಲಾ ಲಗ್ನದಲ್ಲಿ ಮಹಾ ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ರಥದ ಹಗ್ಗೆ ಎಳೆಯುವ ಮೂಲಕ ಚಾಲನೆ ನೀಡಿದರು. ಇವರಿಗೆ ಮೇಯರ್‌ ಪುಷ್ಪಲತಾ ಜಗನ್ನಾಥ್‌, ಶಾಸಕ ಜಿ.ಟಿ.ದೇವೇಗೌಡ, ಪ್ರಮೋದಾದೇವಿ ಒಡೆಯರ್‌, ತ್ರಿಷಿಕಾಕುಮಾರಿ ಸೇರಿದಂತೆ ಇತರರು ಸಾಥ್‌ ನೀಡಿದರು. ಈ ವೇಳೆ ಸಿಡಿಮದ್ದು ಸಿಡಿಸಲಾಯಿತು.

ಚಾಮುಂಡೇಶ್ವರಿ ದೇವಾಲಯದ ಮುಂಭಾಗದಿಂದ 7.10ಕ್ಕೆ ಆರಂಭಗೊಂಡ ರಥೋತ್ಸವ, ಮಹಾಬಲೇಶ್ವರ ದೇವಾಲಯದ ಮೂಲಕ ಸಾಗಿ ದೇವಸ್ಥಾನವನ್ನು ಒಂದು ಸುತ್ತು ಹಾಕಿ ಮರಳಿ ಮುಖ್ಯದ್ವಾರದ ಬಳಿ ಬಂದು ಅಂತ್ಯಗೊಂಡಿತು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆಯೇ ಚಾಮುಂಡೇಶ್ವರಿ, ಮೈಸೂರು ರಾಜರಿಗೆ ಜಯಘೋಷಣೆ ಮೊಳಗಿತು.

ಪ್ರದಕ್ಷಿಣೆ: ರಥೋತ್ಸವಕ್ಕೂ ಮುನ್ನಾ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲಾಯಿತು. ಮಂಗಳವಾದ್ಯದೊಂದಿಗೆ ನಡೆದ ಉತ್ಸವ ಮೂರ್ತಿಯ ಪ್ರದಕ್ಷಿಣೆಯಲ್ಲಿ ಯಧುವೀರ ಕೂಡಾ ಪಾಲ್ಗೊಂಡಿದ್ದರು. ರಾಜಪರಿವಾರಕ್ಕಾಗಿಯೇ ರಥ ಸಾಗುವ ಮಾರ್ಗದಲ್ಲಿ ನಿರ್ಮಿಸಿರುವ ಮಂಟಪದ ಬಳಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಕುಳಿತ ಪ್ರಮೋದಾದೇವಿ ಒಡೆಯರ್‌, ಯಧುವೀರ, ತ್ರಿಷಿಕಾಕುಮಾರಿ ಅವರು ರಥ ಬಂದಾಗ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.

ಚಾಮುಂಡೇಶ್ವರಿ ರಥ ಸಾಗುವ ಮಾರ್ಗದಲ್ಲಿ ಮರಳನ್ನು ಹಾಕಲಾಗಿತ್ತು. ರಥೋತ್ಸವ ನಡೆಯುವಾಗ ಜನರು ಹಗ್ಗವನ್ನು ಎಳೆಯುವಾಗ ರಥ ಈ ಹಿಂದೆ ನಿಯಂತ್ರಣಕ್ಕೆ ಸಿಗದೆ ಚಲಿಸಿದ್ದ ನಿದರ್ಶನ ಇತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ರಸ್ತೆಯಲ್ಲಿ ಮರಳು ಹಾಕಿ ರಥ ನಿಯಂತ್ರಣ ತಪ್ಪಿ ವೇಗವಾಗಿ ಹೋಗದಂತೆ ಮಾಡಲಾಗಿತ್ತು.

Advertisement

ಸಿಡಿಮದ್ದು: ರಥೋತ್ಸವದಂದು ರಥ ಸಾಗುವ ಮಾರ್ಗದ ಉದ್ದಕ್ಕೂ ಸಿಡಿಮದ್ದು ಸಿಡಿಸುವುದು ವಾಡಿಕೆ. ಅದರಂತೆ ರಥ ಸಾಗುತ್ತಿದ್ದಾಗ ಅಲ್ಲಲ್ಲಿ ಸಿಡಿ ಮದ್ದು ಸಿಡಿಸಲಾಗುತ್ತು. ಸುತ್ತ ಹಾಕಿ ರಥ ದೇವಾಲಯದ ಬಳಿ ಬರುತ್ತಿದ್ದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್‌ ಅವರು ತಾವೇ ಸ್ವತಃ ಸಿಡಿಮದ್ದು ಸಿಡಿಸಿದರು.

ವಿಶೇಷ ಬಸ್‌ ವ್ಯವಸ್ಥೆ: ರಥೋತ್ಸವದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಮುಂಜಾನೆಯಿಂದಲೇ ಭಕ್ತ ಸಮೂಹ ಹರಿದು ಬಂದಿತ್ತು. ಹೆಚ್ಚಿನ ಭಕ್ತರು ಆಗಮಿಸಿದ್ದರಿಂದ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ನಗರ ಸಾರಿಗೆ ಬಸ್‌ಗಳನ್ನು ಹೊರತು ಪಡಿಸಿ ಉಳಿದ ಎಲ್ಲಾÉ ವಾಹನಗಳನ್ನು ತಾವರೆಕಟ್ಟೆ ಬಳಿಯೇ ತಡೆದ ಪೊಲೀಸರು, ಪ್ರತ್ಯೇಕವಾಗಿ ನಿರ್ಮಿಸಿದ್ದ ವಾಹನ ನಿಲುಗಡೆ, ನೂತನವಾಗಿ ನಿರ್ಮಾಣವಾಗಿರುವ ಬಹುಮಹಡಿ ಪಾರ್ಕಿಂಗ್‌ ಕಟ್ಟಡಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು.

ಪ್ರಸಾದಕ್ಕೆ ಮುಗಿಬಿದ್ದ ಭಕ್ತರು: ರಥೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರಿಂದ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಲು ಜನರು ಮುಗಿ ಬಿದ್ದರು. ದಾಸೋಹ ಭವನದ ಬಳಿ ಜನಜಂಗುಳಿ ಜೋರಾಗಿತ್ತು. ಭಕ್ತರಿಗೆ ಪೊಂಗಲ್‌, ಕೇಸರಿ ಬಾತ್‌ ವಿತರಿಸಲಾಯಿತು.

ಅಲ್ಲದೇ ಹರಕೆಯೊತ್ತ ಭಕ್ತರು ವಾಹನಗಳಲ್ಲಿ ಟೊಮೆಟೋ ಬಾತ್‌ ಅನ್ನು ಭಕ್ತರಿಗೆ ವಿತರಿಸಿದ್ದು, ಪ್ರಸಾದ ಪಡೆಯಲು ಜನರು ಮುಗಿ ಬಿದ್ದಿದ್ದರು. ರಥೋತ್ಸವ ಮುಗಿದ ಬಳಿಕವೂ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಹೀಗಾಗಿ ದೇವರ ದರ್ಶನ ಪಡೆಯಲು ಉದ್ದನೆಯೇ ಸಾಲು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next