Advertisement

ಚಾಮುಂಡೇಶ್ವರಿ: ಜಿಟಿಡಿಗೆ ಕಾಂಗ್ರೆಸ್‌ನಲ್ಲಿ ಎದುರಾಳಿ ಯಾರು?

12:10 AM Feb 23, 2023 | Team Udayavani |

ಮೈಸೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಐದು ಬಾರಿ ಪ್ರತಿನಿಧಿಸಿದ್ದ ಕ್ಷೇತ್ರವಿದು. ಆದರೆ ಈ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಗಳಿಗೆ ಕೊರತೆ. ಬಿಜೆಪಿ ಆಡಳಿತದಲ್ಲಿದ್ದರೂ ಪ್ರಬಲ ಅಭ್ಯರ್ಥಿಗಳಿಗೆ ಅಭಾವ. ಅದು ಮೈಸೂರು ನಗರದ ಸುತ್ತಲೂ ಚಾಚಿಕೊಂಡಿರುವ ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರ.

Advertisement

ಜೆಡಿಎಸ್‌ ಅಭ್ಯರ್ಥಿಯಾಗಿ ಶಾಸಕ ಜಿ.ಟಿ.ದೇವೇಗೌಡರಿಗೆ ಟಿಕೆಟ್‌ ಘೋಷಣೆಯಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ  ಆಕಾಂಕ್ಷಿಗಳ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಬಿರುಸಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ   ಶಾಸಕ ಜಿ.ಟಿ.ದೇವೇಗೌಡ ಅವರನ್ನು ಅಖಾಡದಲ್ಲಿ ಎದುರಿಸುವ ವಿಚಾರದಲ್ಲಿ ದುರ್ಬಲರಾಗಿಯೇ ಕಾಣುತ್ತಾರೆ. ಚಾಮುಂಡೇಶ್ವರಿ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆ. ಈ ಕೋಟೆಯನ್ನು ಭೇದಿಸಿದ್ದು ಜನತಾ ಪರಿವಾರ. ಅದರಲ್ಲೂ ಆಗ ಜನತಾ ಪರಿವಾರದಲ್ಲಿದ್ದ ಸಿದ್ದರಾಮಯ್ಯ ಅವರ ಶಕ್ತಿಶಾಲಿ ನಾಯಕತ್ವ. ಅದೇ  ಸಿದ್ದರಾಮಯ್ಯ ಅವರಿಗೆ ಕಳೆದ ಎರಡು ಚುನಾವಣೆಗಳಿಂದ  ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲುವಿನ ದಡಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿಯಾಗಿ ಸ್ವತಃ ಅವರೇ ಸ್ಪರ್ಧಿಸಿ ಸೋತು ಮುಖಭಂಗ ಅನುಭವಿಸಿದರು. ಜೆಡಿಎಸ್‌ ಇಲ್ಲಿ ಗಟ್ಟಿಯಾಗಿ ನೆಲೆಯೂರಲು ಕಾರಣ  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನಾಯಕತ್ವ, ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರ ಪ್ರಾಬಲ್ಯ.

ಸಿದ್ದರಾಮಯ್ಯ ಅವರು 2006ರಲ್ಲಿ  ಜೆಡಿಎಸ್‌ನಿಂದ ಉಚ್ಛಾಟನೆಯಾದ ಬಳಿಕ‌ ಕಾಂಗ್ರೆಸ್‌ ಸೇರಿದ ಮೇಲೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತೆ ಚಿಗುರಿತ್ತು. 2008ರ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ಗೆದ್ದಿತ್ತು.  ಆದರೆ ಕಳೆದ 2 ಅಸೆಂಬ್ಲಿ ಚುನಾವಣೆಗಳಲ್ಲಿ ಜೆಡಿಎಸ್‌ ಈ ಕ್ಷೇತ್ರವನ್ನು ಹಿಡಿದಿಟ್ಟುಕೊಂಡಿದೆ.  ಕಳೆದ ಬಾರಿ ಜೆಡಿಎಸ್‌ನಲ್ಲಿದ್ದು ಜಿ.ಟಿ.ದೇವೇಗೌಡರ ಗೆಲುವಿಗೆ ಶ್ರಮಿಸಿದ ಕೆಲವು ಮುಖಂಡರು ಈ ಬಾರಿ ಅವರ ವಿರುದ್ಧ ತಿರುಗಿ ಬಿದ್ದು ಇತ್ತೀಚೆಗೆ ಕಾಂಗ್ರೆಸ್‌ ಸೇರಿದ್ದಾರೆ.  ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಜಿ.ಪಂ. ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ ಇವರಲ್ಲಿ ಪ್ರಮುಖರು. ಈ ಇಬ್ಬರೂ ಈಗ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ| ಬಿ.ಜೆ. ವಿಜಯಕುಮಾರ್‌, ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಜಿಪಂ ಮಾಜಿ ಅಧ್ಯಕ್ಷ ಮರೀಗೌಡ, ಕೂರ್ಗಳ್ಳಿ ಮಹದೇವ್‌, ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ರಾಕೇಶ್‌ ಪಾಪಣ್ಣ, ಅರುಣ್‌ಕುಮಾರ್‌, ಮುಖಂಡರಾದ ಎಚ್‌.ಸಿ. ಕೃಷ್ಣಕುಮಾರ್‌ ಸಾಗರ್‌, ಮೆಲ್ಲಹಳ್ಳಿ ಮಹದೇವಸ್ವಾಮಿ, ಲೇಖಾ ವೆಂಕಟೇಶ್‌, ಜೆ.ಜೆ.ಆನಂದ್‌ ಅವರು ಟಿಕೆಟ್‌ ಆಕಾಂಕ್ಷಿಗಳು.

ಬಿಜೆಪಿಯಲ್ಲಿ ಅರುಣಕುಮಾರ್‌ ಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ. ಹೇಮಂತಕುಮಾರ್‌ ಗೌಡ, ಗೆಜ್ಜಗಳ್ಳಿ ಮಹೇಶ್‌, ಕವೀಶ್‌ಗೌಡ ಅವರ ಮಧ್ಯೆ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆದಿದೆ. ಅರುಣ್‌ಕುಮಾರ್‌ ಗೌಡ, ಹೇಮಂತಕುಮಾರ ಗೌಡ ಹಾಗೂ ಕವೀಶ್‌ ಗೌಡ ಅವರು ಒಕ್ಕಲಿಗ ಸಮಾಜದವರು. ಗೆಜ್ಜಗಳ್ಳಿ ಮಹೇಶ್‌ ವೀರಶೈವ-ಲಿಂಗಾಯತ ಸಮಾಜದವರು. ಹೇಮಂತಕುಮಾರ್‌ ಗೌಡ ಅವರು ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದರು. ಈ ಹಿಂದೆ 2013ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಕಾಂಗ್ರೆಸ್‌ನಲ್ಲಿ ತಂದೆಗೆ, ಬಿಜೆಪಿಯಲ್ಲಿ ಮಗನಿಗೆ ಟಿಕೆಟ್‌?
ಮೈಸೂರು: ಮೈಸೂರು ನಗರದ ಚಾಮರಾಜ ಕ್ಷೇತ್ರ ಹಾಗೂ ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ತಂದೆ-ಮಗ ಕಣಕ್ಕಿಳಿಯುವ ಸಾಧ್ಯತೆ ಇದೆ. ಚಾಮರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ವಾಸು ಅವರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ. ವಾಸು 2013ರಲ್ಲಿ ಇಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಕಣಕ್ಕಿಳಿದು ಸೋತರು. ವಾಸು ಅವರು ಈ ಬಾರಿಯೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.  ವಾಸು ಅವರ ಪುತ್ರ ಕವೀಶ್‌ ಗೌಡ ಇತ್ತೀಚೆಗೆ ಬಿಜೆಪಿ ಸೇರಿದ್ದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟಿಕೆಟ್‌ ಬಯಸಿದ್ದಾರೆ.  ವಾಸು ಅವರಿಗೆ ಕಾಂಗ್ರೆಸ್‌, ಕವೀಶ್‌ ಗೌಡ ಅವರಿಗೆ ಬಿಜೆಪಿಯಲ್ಲಿ ಟಿಕೆಟ್‌ ದೊರೆತರೆ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಅಪ್ಪ-ಮಗ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಾಗಿ ಅಖಾಡದಲ್ಲಿ ಕುತೂಹಲ ಮೂಡಿಸಲಿದ್ದಾರೆ.

Advertisement

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next