Advertisement

ಚಾಂಪಿಯನ್ಸ್‌ ಟ್ರೋಫಿ: ಇಂದು ಬಾಂಗ್ಲಾ ಬೇಟೆಗೆ ಭಾರತ ರೆಡಿ

03:45 AM Jun 15, 2017 | |

ಬರ್ಮಿಂಗಂ: ಹಾಲಿ ಚಾಂಪಿಯನ್‌ ಭಾರತವು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಕೂಟದ ಗುರುವಾರ  ನಡೆಯುವ ದ್ವಿತೀಯ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

Advertisement

ತನ್ನ ನೆರೆಯ ಬಾಂಗ್ಲಾ ವಿರುದ್ಧದ ಈ ಸಮರದಲ್ಲಿ ಭಾರತವೇ ಗೆಲ್ಲುವ ಫೇವರಿಟ್‌ ತಂಡವಾಗಿದ್ದರೂ ಕ್ರಿಕೆಟ್‌ನಲ್ಲಿ ಯಾವುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಈ ಹಿಂದೆ ಬಾಂಗ್ಲಾವು ಕೆಲವೊಂದು ಅಚ್ಚರಿಯ ಫ‌ಲಿತಾಂಶ ದಾಖಲಿಸಿರುವುದು ಇದಕ್ಕೆ ಕಾರಣವಾಗಿದೆ. ಯಾವುದೇ ಹಂತದಲ್ಲೂ  ಬಾಂಗ್ಲಾವನ್ನು ಲಘುವಾಗಿ ಕಾಣುವ ಸಾಧ್ಯತೆಯಿಲ್ಲ. ಈ ಎಚ್ಚರಿಕೆಯಿಂದ ಆಡಿದರೆ ಭಾರತ ಗೆಲುವಿನೊಂದಿಗೆ ಫೈನಲಿಗೇರಬಹುದು.
ನ್ಯೂಜಿಲ್ಯಾಂಡ್‌ ವಿರುದ್ಧ ಪ್ರಚಂಡ ಗೆಲುವು ದಾಖಲಿಸಿದ ಬಾಂಗ್ಲಾದೇಶವು ಸೆಮಿಫೈನಲಿಗೇರಿದ ಸಾಧನೆ ಮಾಡಿತು. ಇದೇ ವೇಳೆ ಶ್ರೀಲಂಕಾ ವಿರುದ್ಧ ಸೋತಿದ್ದರೂ ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಲ್‌ರೌಂಡ್‌ ಆಟ ಪ್ರದರ್ಶಿಸಿದ್ದ ಭಾರತ ಸೆಮಿಫೈನಲ್‌ಗೇರಿತ್ತು. ಗುರುವಾರ ನಡೆಯುವ ಸೆಮಿಫೈನಲ್‌ನಲ್ಲೂ ಇದೇ ರೀತಿಯ ನಿರ್ವಹಣೆ ನೀಡಲು ಭಾರತ ಬಯಸಿದೆ.

ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದಾರೆ, ಬೌಲರ್‌ಗಳು ಗುರಿ ಇಟ್ಟು ಬೌಲಿಂಗ್‌ ನಡೆಸುತ್ತಿದ್ದಾರೆ ಮತ್ತು ಫೀಲ್ಡಿಂಗ್‌ ಅತ್ಯದ್ಭುತವಾಗಿದೆ. ಈ ಮೂಲಕ ವಿರಾಟ್‌ ಕೊಹ್ಲಿ ನೇತೃತ್ವದ ಟೀಮ್‌ ಇಂಡಿಯಾ ಬಾಂಗ್ಲಾ ಬೇಟೆಗೆ ಸಿದ್ಧವಾಗಿದೆ. ಅಚ್ಚರಿಯ ರೀತಿಯಲ್ಲಿ ಸೆಮಿಫೈನಲಿಗೇರಿದ ಮುಶ್ರಫೆ ಮೊರ್ತಜ ನಾಯಕತ್ವದ ಬಾಂಗ್ಲಾದೇಶವು ಎಜ್‌ಬಾಸ್ಟನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯುವ ಈ ಸಮರದಲ್ಲಿ ಏನಾದರೂ ವಿಶೇಷ ಸಾಧನೆಗೈದರೆ ಗೆಲುವಿನ ಕ್ಷಣ ಸವಿಯಬಹುದಾಗಿದೆ.

ಹಾಲಿ ಚಾಂಪಿಯನ್‌ ಪಟ್ಟ ಉಳಿಸಿಕೊಳ್ಳಬೇಕಾದರೆ ಭಾರತ ಪ್ರಶಸ್ತಿ ಸುತ್ತಿಗೇರುವುದು ಅಗತ್ಯವಾಗಿದೆ. ಹಾಗಾಗಿ ಸೋಲುವ ಮಾತಿಲ್ಲದೇ ಆಡುವುದು ಭಾರತದ ದೃಷ್ಟಿಯಾಗಿದೆ. ಐಸಿಸಿ ಕೂಟದಲ್ಲಿ ಆಡುತ್ತಿರುವ ಬಾಂಗ್ಲಾದೇಶ ಒಂದು ವೇಳೆ ಮತ್ತೆ ಅಚ್ಚರಿಯ ಫ‌ಲಿತಾಂಶ ದಾಖಲಿಸಲು ಯಶಸ್ವಿಯಾದರೆ ಅದು ಬಾಂಗ್ಲಾ ಕ್ರಿಕೆಟ್‌ ಇತಿಹಾಸದ ಮಹೋನ್ನತ ಕ್ಷಣವಾಗಲಿದೆ.

ಭಾರತ ಈ ಸಮರದಲ್ಲಿ ಜಯ ಪಡೆದರೆ ಇದೊಂದು ಸುಲಭ ಜಯವೆಂದು ಹೇಳಬಹುದಷ್ಟೇ. ಯಾಕೆಂದರೆ ಎದುರಾಳಿ ಬಾಂಗ್ಲಾ ಕಾರಣ. ಈ ಹಂತದಲ್ಲಿ ಆಸ್ಟ್ರೇಲಿಯ,  ದಕ್ಷಿಣ ಆಫ್ರಿಕಾ ಅಥವಾ ಇಂಗ್ಲೆಂಡ್‌ ವಿರುದ್ಧ ಜಯ ಪಡೆದರೆ ಭಾರತದ ಸಾಹಸದ ಬಗ್ಗೆ ಮಾತನಾಡಿದಷ್ಟು ಬಾಂಗ್ಲಾ ವಿರುದ್ಧ ಗೆದ್ದಾಗ ಮಾತನಾಡುವ ಸಾಧ್ಯತೆಯಿಲ್ಲ. ಒಂದು ವೇಳೆ ಸೋಲನ್ನು ಕಂಡರೆ ಎಲ್ಲ ಕಡೆಯಿಂದಲೂ ಟೀಕೆಗಳ ಸುರಿಮಳೆ ಸುರಿಯುವ ಸಾಧ್ಯತೆಯಿದೆ. ಇದರಿಂದಾಗಿ ಕೊಹ್ಲಿ ಪಡೆ ಈ ಪಂದ್ಯವನ್ನು ಅತ್ಯಂತ ಎಚ್ಚರಿಕೆಯಿಂದ ಆಡಬೇಕಾಗಿದೆ.

Advertisement

ಬಾಂಗ್ಲಾ ವಿರುದ್ಧದ ಈ ಹೋರಾಟಕ್ಕೆ ಭಾರತ ಆರ್‌. ಅಶ್ವಿ‌ನ್‌ ಮತ್ತು ಉಮೇಶ್‌ ಯಾದವ್‌ ಅವರನ್ನು ಉಳಿಸಿಕೊಳ್ಳಲಿದೆಯೇ ಎಂಬುದು ಆಸಕ್ತಿಯ ವಿಷಯವಾಗಿದೆ. ಯಾಕೆಂದರೆ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಜಯ ಸಾಧಿಸಲು ಅಶ್ವಿ‌ನ್‌ ಮತ್ತು ಉಮೇಶ್‌ ಯಾದವ್‌ ಕಾರಣರಾಗಿದ್ದರು.

ಪೋರ್ಟ್‌ ಆಫ್ ಸ್ಪೇನ್‌ನಲ್ಲಿ 2007ರಲ್ಲಿ ನಡೆದ ವಿಶ್ವಕಪ್‌ನ ಆರಂಭಿಕ ಪಂದ್ಯ ಪುನರಾವರ್ತನೆಗೈಯಲು ಬಾಂಗ್ಲಾ ಯೋಜನೆ ಹಾಕಿಕೊಂಡಿದೆ. ಭಾರತವನ್ನು ಕೆಡಹಿದ ಆ ದಿನ ಬಾಂಗ್ಲಾ ಕ್ರಿಕೆಟ್‌ ಇತಿಹಾಸದಲ್ಲಿ ಕೆಂಪು ಅಕ್ಷರದಲ್ಲಿ ಬರೆದಿಡಬಹುದಾದ ದಿನವಾಗಿದೆ. ಆ ಪಂದ್ಯದಲ್ಲಿ ಆಡಿದ ನಾಯಕ ಮುಶ್ರಫೆ ಮೊರ್ತಜ, ಶಕಿಬ್‌ ಅಲ್‌ ಹಸನ್‌, ಮುಶ್ಫಿಕರ್‌ ರಹೀಮ್‌ ಮತ್ತು ತಮಿಮ್‌ ಇಕ್ಬಾಲ್‌ ಈ ತಂಡದಲ್ಲೂ ಇದ್ದಾರೆ. ಉಭಯ ತಂಡಗಳ ಬಲಾಬಲವನ್ನು ಗಮನಿಸಿದರೆ ಭಾರತವೇ ಬಾಂಗ್ಲಾಕ್ಕಿಂತ ಬಲಿಷ್ಠವಾಗಿದೆ. 

ಬ್ಯಾಟಿಂಗ್‌, ಬೌಲಿಂಗ್‌ನಲ್ಲಿಯೂ ಟೀಮ್‌ ಇಂಡಿಯಾ ಪಡೆಯಲ್ಲಿ ವಿಶ್ವ ದರ್ಜೆಯ ಆಟಗಾರರಿದ್ದಾರೆ. ಆರಂಭಿಕರಾದ ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮ ಅವರು ತಮಿಮ್‌ ಇಕ್ಬಾಲ್‌ ಅಥವಾ ಸೌಮ್ಯ ಸರ್ಕಾರ್‌ ಅವರಿಗಿಂತ ಉತ್ತಮ ಫಾರ್ಮ್ನಲ್ಲಿದ್ದಾರೆ. ಆದರೆ ತಮಿಮ್‌ ಸದ್ಯ ಉತ್ತಮ ಫಾರ್ಮ್ನಲ್ಲಿರುವಂತೆ ಕಾಣುತ್ತಿದ್ದಾರೆ.

ವಿರಾಟ್‌ ಕೊಹ್ಲಿ ಅವರ ಆಕರ್ಷಕ ಆಟಕ್ಕೆ ಇಮ್ರುಲ್‌ ಕಯಿಸ್‌ ಅಥವಾ ಶಬ್ಬೀರ್‌ ರೆಹಮಾನ್‌ ಅವರ ಜತೆ ಕನಸಿನಲ್ಲಿಯೂ ಹೋಲಿಸಲು ಸಾಧ್ಯವಿಲ್ಲ. ಎಂಎಸ್‌ ಧೋನಿ 50 ಓವರ್‌ಗಳ ಕ್ರಿಕೆಟ್‌ನ ಲೆಜೆಂಡ್‌ ಆಗಿದ್ದರೆ ಮುಶ್ಫಿಕರ್‌ ರಹೀಮ್‌ ಇನ್ನೂ ಅಸ್ಥಿರ ನಿರ್ವಹಣೆ ನೀಡುತ್ತಿದ್ದಾರೆ. ಮಹಮುದುಲ್ಲ ರಿಯಾದ್‌ ಪಂದ್ಯ ಗೆಲ್ಲಿಸಿಕೊಡಬಲ್ಲ ಸಮರ್ಥ ಆಟಗಾರರಾಗಿದ್ದರೂ ಯುವರಾಜ್‌ ಸಿಂಗ್‌ ವಿವಿಧ ಕ್ರಿಕೆಟ್‌ ಲೀಗ್‌ಗಳಲ್ಲಿ 300ನೇ ಏಕದಿನ ಪಂದ್ಯ ಆಡುತ್ತಿರುವ ಅನುಭವಿ ಆಟಗಾರರಾಗಿದ್ದಾರೆ.

ಮುಶ್ರಫೆ, ಟಸ್ಕಿನ್‌, ರುಬೆಲ್‌ ಮತ್ತು ಮುಸ್ತಾಫಿಜುರ್‌ ಉತ್ತಮ ದಾಳಿ ಸಂಘಟಿಸಬಲ್ಲರು ಮತ್ತು ಗೆಲುವಿನ ನಿರೀಕ್ಷೆಯನ್ನೂ ಮಾಡಬಹುದು. ಆದರೆ ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಹಾರ್ದಿಕ್‌ ಅವರಿಗಿಂತಲೂ ಉತ್ತಮ ಗುಣಮಟ್ಟದ ಬೌಲರ್‌ಗಳಾಗಿದ್ದಾರೆ.

ಉಭಯ ತಂಡಗಳು:
ಭಾರತ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ಯುವರಾಜ್‌ ಸಿಂಗ್‌, ಎಂಎಸ್‌ ಧೋನಿ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಅಜಿಂಕ್ಯ ರಹಾನೆ, ಆರ್‌. ಅಶ್ವಿ‌ನ್‌, ದಿನೇಶ್‌ ಕಾರ್ತಿಕ್‌, ಮೊಹಮ್ಮದ್‌ ಶಮಿ.

ಬಾಂಗ್ಲಾದೇಶ: ಮುಶ್ರಫೆ ಮೊರ್ತಜ (ನಾಯಕ), ತಮಿಮ್‌ ಇಕ್ಬಾಲ್‌, ಇಮ್ರುಲ್‌ ಕಯೀಸ್‌, ಸೌಮ್ಯ ಸರ್ಕಾರ್‌, ಶಬ್ಬೀರ್‌ ರೆಹಮಾನ್‌, ಮಹಮುದುಲ್ಲ ರಿಯಾದ್‌, ಶಕಿಬ್‌ ಅಲ್‌ ಹಸನ್‌, ಮುಶ್ಫಿàಕರ್‌ ರಹೀಮ್‌, ರುಬೆಲ್‌ ಹೊಸೇನ್‌, ಮುಸ್ತಾಫಿಜುರ್‌ ರೆಹಮಾನ್‌, ಟಸ್ಕಿನ್‌ ಅಹ್ಮದ್‌, ಮೆಹೆದಿ ಹೊಸೇನ್‌ ಮಿರಾಜ್‌, ಮೊಸಾಡೆಕ್‌ ಹೊಸೇನ್‌, ಸುನಾjಮುಲ್‌ ಇಸ್ಲಾಮ್‌, ಶಫೀಯುಲ್ಲ ಇಸ್ಲಾಮ್‌.

Advertisement

Udayavani is now on Telegram. Click here to join our channel and stay updated with the latest news.

Next