Advertisement

ಮೂರು ಮಾದರಿಯಲ್ಲೂ ಚಾಂಪಿಯನ್‌: ಭಾರತಕ್ಕೆ ಗರಿ

01:22 AM Mar 30, 2021 | Team Udayavani |

ಇಂಗ್ಲೆಂಡ್‌ ತಂಡವನ್ನು ಮೂರೂ ಮಾದರಿಯಲ್ಲಿ ಸೋಲಿಸಿ ಗೆದ್ದು ಬೀಗಿದೆ ವಿರಾಟ್‌ ಕೊಹ್ಲಿ ನೇತೃತ್ವದ ಭಾರತೀಯ ತಂಡ. ಶ್ರೀಲಂಕಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಗೆದ್ದು ಭಾರತಕ್ಕೆ ಬಂದಿದ್ದ ಇಂಗ್ಲೆಂಡ್‌ ತನ್ನ ಗೆಲುವಿನ ಸರಣಿಯನ್ನು ಮುಂದುವರಿಸುತ್ತೇನೆಂಬ ಉಮೇದಿನ ಲ್ಲಿತ್ತು. ಆದರೆ ಕೋಹ್ಲಿ ಪಡೆ ಇಂಗ್ಲೆಂಡ್‌ಗೆ ಮತ್ತೂಮ್ಮೆ ಮುಖಭಂಗ ಮಾಡಿದೆ. ಈ ಹಿಂದೆ ಅಂದರೆ 2016-2017ರ ಪ್ರವಾಸದಲ್ಲಿ ಭಾರತ ಇಂಗ್ಲೆಂಡ್‌ ಅನ್ನು ಎಲ್ಲ ಮೂರೂ ಮಾದರಿಯಲ್ಲೂ ಸೋಲಿಸಿತ್ತು.

Advertisement

ಗಮನಾರ್ಹ ಸಂಗತಿಯೆಂದರೆ, ಈ ಬಾರಿ ಇಂಗ್ಲೆಂಡ್‌ ಕೇವಲ ಕ್ರಿಕೆಟ್‌ ತಂಡವಾಗಿ ಅಷ್ಟೇ ಅಲ್ಲದೇ ವಿಶ್ವಚಾಂಪಿಯನ್ನರು ಎಂಬ ಕಿರೀಟವನ್ನೂ ತಲೆಯ ಮೇಲೆ ಹೊತ್ತು ಬಂದಿತ್ತು. ಬ್ರಿಟನ್‌ನ ಕ್ರಿಕೆಟ್‌ ಪಂಡಿತರು, ಮಾಜಿ ಕ್ರಿಕೆಟರ್‌ಗಳೆಲ್ಲರೂ ಭಾರತವನ್ನು ಇಂಗ್ಲೆಂಡ್‌ ಬಗ್ಗುಬಡಿಯಲಿದೆ ಎನ್ನುತ್ತಲೇ ಬಂದಿದ್ದರು. ಆದರೆ ಭಾರತವೂ ಚಾಂಪಿಯನ್‌ ತಂಡವೇ. ಅದರಲ್ಲೂ ಕೆಲವು ತಿಂಗಳುಗಳ ಹಿಂದೆ ನಡೆದ ಆಸ್ಟ್ರೇಲಿಯಾದ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಹಲವು ಖ್ಯಾತನಾಮ ಆಟಗಾರ ಅನುಪಸ್ಥಿತಿಯಲ್ಲೇ ಹೊಸ ಆಟಗಾರರೊಂದಿಗೆ ಗಾಬ್ಟಾದಲ್ಲಿ ಗೆಲುವಿನ ಬಾವುಟ ಊರಿ ಬಂದದ್ದನ್ನು ಪರಿಗಣಿಸಿದಾಗ, ಭಾರತವೇ ಮೇಲುಗೈ ಸಾಧಿಸಲಿದೆ ಎನ್ನುವುದು ಖಾತ್ರಿಯಾಗಿತ್ತು.

ಗಮನಾರ್ಹ ಸಂಗತಿಯೆಂದರೆ, 2011ರ ವಿಶ್ವಕಪ್‌ ಗೆಲುವಿನ ಅನಂತರ ಭಾರತ ಇಂಗ್ಲೆಂಡಿನ ಎದುರು ಅನುಭವಿಸಿದ್ದ, ಮುಖ ಭಂಗವನ್ನು ಈಗ 2019ರ ವಿಶ್ವಚಾಂಪಿಯನ್‌ ಇಂಗ್ಲೆಂಡ್‌ ಭಾರತದೆದುರು ಅನುಭವಿಸಿದೆ. ಅಂದು ವಿಶ್ವ ಚಾಂಪಿಯನ್‌ ಆಗಿದ್ದ ಭಾರತ, ಅದೇ ವರ್ಷ ಇಂಗ್ಲೆಂಡ್‌ನ‌ಲ್ಲಿ ನಡೆದ ಏಕದಿನ, ಟಿ20 ಮತ್ತು ಟೆಸ್ಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ತೆರಳಿದಾಗ, ಭಾರತ ಸುಲಭ ಗೆಲುವು ತನ್ನದಾಗಿಸಿಕೊಳ್ಳಲಿದೆ ಎಂದೇ ಕ್ರಿಕೆಟ್‌ ಪಂಡಿತರು ಭಾವಿಸಿದ್ದರು. ಆದರೆ ಎರಡು ತಿಂಗಳುಗಳ ವರೆಗೆ ನಡೆದ ಈ ಮೂರೂ ಮಾದರಿಯ ಪಂದ್ಯಗಳಲ್ಲೂ ಭಾರತ ಸೋಲುಕಂಡಿತ್ತು. ಸರಿಯಾಗಿ 10 ವರ್ಷಗಳ ಅನಂತರ ಭಾರತ ಸೇಡು ತೀರಿಸಿಕೊಂಡಂತಾಗಿದೆ.

ಈ ಬಾರಿ ಟೆಸ್ಟ್‌ ಸರಣಿ ಆರಂಭವಾಗಿ, ಭಾರತ ಜೈತ್ರಯಾತ್ರೆ ಆರಂಭಿಸುತ್ತಿದ್ದಂತೆಯೇ ಭಾರತದ ಪಿಚ್‌ ಸರಿಯಾಗಿಲ್ಲ ಎನ್ನುವ ತಗಾದೆ ಆರಂಭವಾಯಿತು. ಈ ಬಗ್ಗೆ ಇಂಗ್ಲೆಂಡ್‌ ಆಟಗಾರರೇನೂ ದೂರಲಿಲ್ಲವಾದರೂ, ಅಲ್ಲಿನ ಮಾಧ್ಯಮಗಳು ಮಾಜಿ ಕ್ರಿಕೆಟರ್‌ಗಳು ಈ ಸಂಗತಿಯೇ ತಮ್ಮ ತಂಡದ ಸೋಲಿಗೆ ಕಾರಣ ಎನ್ನುವಂತೆ ವಾದಿಸುತ್ತಾ ಬಂದರು. ಆದರೆ ಟೆಸ್ಟ್‌ ಸರಣಿಯಲ್ಲಿ ಭಾರತದ ಸ್ಪಿನ್ನರ್‌ಗಳು, ಟಿ20, ಏಕದಿನದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು-ಬೌಲರ್‌ಗಳು ಪಾರಮ್ಯ ಮೆರೆದದ್ದೇ ಭಾರತದ ಗೆಲುವಿಗೆ ಕಾರಣ. ಆದರೂ, ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್‌ ತಿರುಗಿ ಬಿದ್ದು, ಕೊನೆಯ ಹಂತದವರೆಗೂ ಹೋರಾಡಿದ ರೀತಿ ಶ್ಲಾಘನೀಯ ವಾದದ್ದು. ಎರಡು ಪ್ರಬಲ ತಂಡಗಳ ನಡುವೆ ಪೈಪೋಟಿ ಹೀಗೆಯೇ ಇರಬೇಕು. ಭಾರತ ಇದೇ ಆಗಸ್ಟ್‌ ತಿಂಗಳಲ್ಲಿ 5
ಪಂದ್ಯಗಳ ಟೆಸ್ಟ್‌ ಸರಣಿ ಎದುರಿಸಲು ಯುಕೆ ಪ್ರವಾಸ ಕೈಗೊಳ್ಳುತ್ತಿದ್ದು, ನಿಸ್ಸಂಶಯವಾಗಿಯೂ ಆ ಸರಣಿಯೂ ರೋಚಕವಾಗಿಯೇ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next