Advertisement

ಕರಾವಳಿಯಾದ್ಯಂತ ಶ್ರದ್ಧಾ ಭಕ್ತಿಯ ಚಂಪಾ ಷಷ್ಠಿ ಆಚರಣೆ

01:05 AM Dec 21, 2020 | mahesh |

ಮಂಗಳೂರು/ ಉಡುಪಿ/ಕಾಸರಗೋಡು: ಕರಾವಳಿಯ ಸುಬ್ರಹ್ಮಣ್ಯ, ಕುಡುಪು ಸಹಿತ ನಾಗನ ದೇವಸ್ಥಾನಗಳಲ್ಲಿ ರವಿವಾರ ಷಷ್ಠಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನ, ಸಜೀಪಮುನ್ನೂನು ಮುಗಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವರ ಗುಡಿ ಸೇರಿದಂತೆ ವಿವಿಧ ದೇವಳಗಳಲ್ಲಿ ಷಷ್ಠಿ ಮಹೋತ್ಸವ ಜರಗಿತು.

Advertisement

ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜೆ ಪುನಸ್ಕಾರಗಳು ಜರಗಿದವು. ಕೇದಗೆ, ಹಿಂಗಾರ, ಬೆಳ್ಳಿ, ಚಿನ್ನದ ಹರಕೆಗಳನ್ನು ಒಪ್ಪಿಸಿದರು. ತಂಬಿಲ, ವಿಶೇಷ ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಹರಿವಾಣ ನೈವೇದ್ಯ, ಸೇವೆ ಜರಗಿ ಮಧ್ಯಾಹ್ನ ಶ್ರೀ ಅನಂತ ಪದ್ಮನಾಭ ದೇವರಿಗೆ ಷಷ್ಠಿಯ ಮಹಾಪೂಜೆ ನಡೆಯಿತು. ಅನಂತರ ಬ್ರಹ್ಮರಥೋತ್ಸವ ಜರಗಿತು. 20 ಸಾವಿರಕ್ಕೂ ಹೆಚ್ಚು ಅನ್ನಪ್ರಸಾದ ಸ್ವೀಕರಿಸಿದರು.

ಶ್ರೀಕೃಷ್ಣ ಮಠದಲ್ಲಿ ವಾದಿರಾಜಸ್ವಾಮಿ ಗಳು ಪ್ರತಿಷ್ಠಾಪಿಸಿದ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದಲ್ಲಿ ಅದಮಾರು, ಪೇಜಾವರ ಶ್ರೀಗಳು ಪಾಲ್ಗೊಂಡರು. ಸುಬ್ರಹ್ಮಣ್ಯ ದೇವರ ಗುಡಿಯ ಎದುರು ಬೆಳಗ್ಗೆ 4 ಗಂಟೆಯಿಂದ 7 ಗಂಟೆ ವರೆಗೆ ಕೇವಲ ನೆಲದಲ್ಲಿ ಸುಮಾರು 60 ಮಂದಿ ಉರುಳು ಸೇವೆ ನಡೆಸಿದರು. ಉಡುಪಿ ಸುತ್ತಲಿನ ನಾಲ್ಕು ನಾಗಾಲಯಗಳಾದ ಮುಚ್ಚಲಕೋಡು, ಮಾಂಗೋಡು, ತಾಂಗೋಡು, ಅರಿತೋಡು, ಪಡುಬಿದ್ರಿ ಪಾದೆಬೆಟ್ಟು, ಸಾಂತೂರು, ನೀಲಾವರದ ಪಂಚಮಿಕಾನ, ಕುಂದಾಪುರದ‌ ಕಾಳಾವರ, ಉಳೂ¤ರು, ತೆಕ್ಕಟ್ಟೆ, ಅಮಾಸೆಬೈಲಿನ ಕಡವಾಸೆ, ಕಾರ್ಕಳ ಸೂಡ ದೇವಸ್ಥಾನಗಳಲ್ಲಿಯೂ ಪೂಜೆ, ರಥೋತ್ಸವ ಜರಗಿತು.

ಪೇಜಾವರ ಮಠದ ಆಡಳಿತದ ಮುಚ್ಚಲಕೋಡು ದೇವಸ್ಥಾನದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದದ ಬದಲು ಸುಮಾರು 3,000 ಜನರಿಗೆ ಪ್ರಸಾದ ರೂಪವಾಗಿ ಅವಲಕ್ಕಿಯ ಬಿಸಿಬೇಳೆ ಬಾತ್‌, ಲಡ್ಡು, ವಡೆಯನ್ನು ಪ್ಯಾಕೇಟ್‌ ಮಾಡಿಸಿ ವಿತರಿಸಲಾಯಿತು. ದೇವರಿಗೆ ನಿವೇದಿಸಿದ ಪ್ರಸಾದದ ಮೇಲೆ ಆರು ಮಂದಿ ಎಡೆ ಸ್ನಾನ ಮಾಡಿದರು.  ಮಂಜೇಶ್ವರದ ಶ್ರೀಮತ್‌ ಅನಂತೇಶ್ವರ ದೇವಸ್ಥಾನ, ಕುಂಬಳೆ ಸಮೀಪದ ಕುಮಾರಮಂಗಲ, ಕಾಟುಕುಕ್ಕೆ, ಮುಗು ಶ್ರೀ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಷಷ್ಠಿ ಮಹೋತ್ಸವ ಜರಗಿತು.

ದೇವಸ್ಥಾನಗಳಲ್ಲಿ ಪೂಜೆ
ನಾಗ ಸಾನ್ನಿಧ್ಯವಿರುವ ಇತರ ದೇವ ಸ್ಥಾನಗಳಲ್ಲಿಯೂ ಷಷ್ಠಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನಾಗನ ಕಟ್ಟೆಯಲ್ಲಿ ಪೂಜೆ ಜರಗಿತು. ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಬೆಳಗ್ಗೆ ನಾಗ ದೇವರಿಗೆ ಪೂಜೆ, ಮಧ್ಯಾಹ್ನ ಮಹಾಪೂಜೆ ಜರಗಿತು.

Advertisement

ಕುಕ್ಕೆ ಚಂಪಾಷಷ್ಠಿ ವಾರ್ಷಿಕ ರಥೋತ್ಸವ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರವಿವಾರ ಬೆಳಗ್ಗೆ 7.25ರ ಧನುರ್‌ಲಗ್ನದ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಚಂಪಾಷಷ್ಠಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಬ್ರಹ್ಮರಥೋತ್ಸವ ಸೇವೆಗೆ 40 ಭಕ್ತರು ನೋಂದಾಯಿಸಿದ್ದರು.

ದೇವಸ್ಥಾನದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿದ ಬಳಿಕ ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು. ಬಳಿಕ ಸುವರ್ಣ ವೃಷ್ಟಿಯಾಗಿ, ಚಿಕ್ಕ ರಥೋತ್ಸವ ನೆರವೇರಿತು. ಅನಂತರ ಚಂಪಾಷಷ್ಠಿ ಮಹಾರಥೋತ್ಸವ ಜರಗಿತು. ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ರಥೋತ್ಸವದ ಬಳಿಕ ಉಮಾಮಹೇಶ್ವರ ಹಾಗೂ ಸುಬ್ರಹ್ಮಣ್ಯ ದೇವರಿಗೆ ಷಷ್ಠಿ ಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿತು. ದೇವರು ಗರ್ಭಗುಡಿ ಪ್ರವೇಶಿಸಿದ ಅನಂತರ ಪ್ರಧಾನ ಅರ್ಚಕರು ಮೂಲ ಮೃತ್ತಿಕಾಪ್ರಸಾದ ವಿತರಿಸಿದರು.

ದೇವಸ್ಥಾನದ ಆಡಳಿತಾಧಿಕಾರಿ ಡಾ| ಯತೀಶ್‌ ಉಳ್ಳಾಲ್‌, ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್‌. ಅಂಗಾರ, ಹೈಕೋರ್ಟ್‌ ನ್ಯಾಯಾಧೀಶ ನ್ಯಾ| ಸತ್ಯನಾರಾಯಣ, ಮಂಗಳೂರಿನ ಸಹಾಯಕ ಆಯುಕ್ತ ಮದನಮೋಹನ್‌, ನ್ಯಾಯಾಧೀಶರಾದ ರಾಜೇಂದ್ರ, ಪುರುಷೋತ್ತಮ, ಯಶವಂತ, ಅಭಿವೃದ್ಧಿ ಸಮಿತಿ ಸದಸ್ಯರಾದ ಪಿ.ಜಿ.ಎಸ್‌. ಪ್ರಸಾದ್‌, ಪ್ರಸನ್ನ ದಭೆì, ಎಸ್‌.ಮೋಹನರಾಮ, ಎ.ಬಿ. ಮನೋಹರ್‌ ರೈ, ವನಜಾ ವಿ. ಭಟ್‌, ಇಒ ರವೀಂದ್ರ ಎಂ.ಎಚ್‌., ಎಇಒ ಪುಷ್ಪಲತಾ ಉಪಸ್ಥಿತರಿದ್ದರು.

ದೇವಸ್ಥಾನದ ಒಳಾಂಗಣದಲ್ಲಿ ನಡೆಯುವ ಎಡೆಸ್ನಾನವನ್ನು ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next