Advertisement

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

02:15 AM Nov 08, 2024 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಸಮೃದ್ಧ ಮಳೆಯಾಗಿ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಮುಂದಿನ ಮುಂಗಾರು ವರೆಗೂ ಜಲವಿದ್ಯುತ್‌ ಉತ್ಪಾದನೆಗೆ ಸಮಸ್ಯೆ ಇಲ್ಲವೆನ್ನಲಾಗುತ್ತಿದೆ. ಆದಾಗ್ಯೂ ಈ ಬಾರಿಯೂ ಗ್ರಾಹಕರ ಮೇಲೆ “ವಿದ್ಯುತ್‌ ದರ ಏರಿಕೆ ಬರೆ’ ಮಾತ್ರ ತಪ್ಪದು!

Advertisement

ಈಗಾಗಲೇ ಬೆಸ್ಕಾಂ ಸೇರಿದಂತೆ ಎಲ್ಲ ವಿದ್ಯುತ್‌ ಸರಬರಾಜು ಕಂಪೆನಿಗಳು ದರ ಹೆಚ್ಚಳಕ್ಕೆ ಸಿದ್ಧತೆ ನಡೆಸಿದ್ದು, ಮಾಸಾಂತ್ಯಕ್ಕೆ ಈ ಪ್ರಸ್ತಾವನೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಸಲ್ಲಿಕೆಯಾಗಲಿದೆ.

ರಾಜ್ಯದಲ್ಲಿ ಜಲ ವಿದ್ಯುದಾಗಾರಗಳ ಪೈಕಿ ಗರಿಷ್ಠ ಕೊಡುಗೆ ನೀಡುತ್ತಿರುವ ಲಿಂಗನಮಕ್ಕಿ ಸೇರಿದಂತೆ ಸೂಪಾ, ಮಾಣಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟದ ಅಂಕಿ-ಅಂಶಗಳ ಪ್ರಕಾರವೇ ಮುಂದಿನ ಜೂನ್‌ವರೆಗೂ ವಿದ್ಯುತ್‌ ಉತ್ಪಾದನೆಗೆ ಯಾವುದೇ ಕೊರತೆ ಇಲ್ಲ. ಸ್ವತಃ ಇಂಧನ ಇಲಾಖೆ ಹೇಳುವಂತೆ ಜಲವಿದ್ಯುತ್‌ ಉತ್ಪಾದನೆ ವೆಚ್ಚ ಉಳಿದ ಮೂಲಗಳಿಗೆ ಹೋಲಿಸಿದರೆ, ಅತ್ಯಂತ ಕಡಿಮೆ ಆಗಿದೆ. ಪ್ರತೀ ಯೂನಿಟ್‌ಗೆ ಸರಾಸರಿ 2.05 ರೂ. ಆಗುತ್ತದೆ. ಆದರೂ ಬೇಸಗೆಯಲ್ಲಿ ಹೆಚ್ಚಾಗಬಹುದಾದ ವಿದ್ಯುತ್‌ ಬೇಡಿಕೆ ಪೂರೈಸಲು ಖರೀದಿ ಅನಿವಾರ್ಯ ಆಗಲಿದ್ದು, ಅದನ್ನು ದರ ಹೆಚ್ಚಳ ರೂಪದಲ್ಲಿ ಗ್ರಾಹಕರ ಮೇಲೆ ಹಾಕುವುದು ಖಚಿತ ಎಂದು ಮೂಲಗಳು ತಿಳಿಸಿವೆ.

ಹಿಂದಿನ ಮತ್ತು ಈಗಿನ ವಿದ್ಯುತ್‌ ಬೇಡಿಕೆ ಹಾಗೂ ಪೂರೈಕೆ, ಕಳೆದ ಬೇಸಗೆಯಲ್ಲಿ ಮಳೆ ಕೈಕೊಟ್ಟಿದ್ದರಿಂದ ಹಿಂದೆಂದಿಗಿಂತ ಗರಿಷ್ಠ ಬೇಡಿಕೆ ಕಂಡುಬಂದಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಬರುವ ಬೇಸಗೆಯಲ್ಲಿ ಆಗಬಹುದಾದ ವಿದ್ಯುತ್‌ ಬೇಡಿಕೆ ಪ್ರಮಾಣ ಲೆಕ್ಕಹಾಕಿ ಪರಿಷ್ಕರಣೆಗೆ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಜತೆಯಲ್ಲೇ ಖರೀದಿಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಪ್ರತೀ ಯೂನಿಟ್‌ಗೆ ಎಷ್ಟು ಪೈಸೆ ಹೆಚ್ಚಳದ ಬೇಡಿಕೆ ಇಡಲಾಗುತ್ತದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಉತ್ತಮ ಮಳೆಯಿಂದ ಅಂತರ್ಜಲಮಟ್ಟ ಏರಿಕೆಯಾಗಿದ್ದರೂ ಬೋರ್‌ವೆಲ್‌ಗ‌ಳ ಬಳಕೆ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಲಿದೆ. ಕೈಗಾರಿಕೆಗಳು, ಕೃಷಿ ವಿಸ್ತರಣೆ ಮತ್ತಿತರ ಕಾರಣಗಳಿಂದ ವಾರ್ಷಿಕ ವಿದ್ಯುತ್‌ ಬೇಡಿಕೆ ಶೇ. 6-10ರಷ್ಟು ಏರಿಕೆ ಆಗುತ್ತಿದೆ. ಇದನ್ನು ನೀಗಿಸಲು ಈಗ ಲಭ್ಯವಿರುವ ರಾಜ್ಯದ ವಿದ್ಯುತ್‌ ಉತ್ಪಾದನೆ ಮೂಲಗಳ ಜತೆಗೆ ಖಾಸಗಿ ಉತ್ಪಾದಕರಿಂದಲೂ ಖರೀದಿಸಬೇಕಾಗುತ್ತದೆ.

Advertisement

ಇದು ದುಬಾರಿಯಾಗಿದ್ದು, ಮುಂಚಿತವಾಗಿಯೇ ಒಪ್ಪಂದ ಮಾಡಿಕೊಂಡರೆ ಅದು ತುಸು ಕಡಿಮೆ ದರದಲ್ಲಿ ಸಿಗುತ್ತದೆ. ಎಲ್ಲೆಡೆ ಬೇಡಿಕೆ ಇದ್ದಾಗ, ಮಾರುಕಟ್ಟೆ ಪ್ರವೇಶಿಸಿದರೆ ಮತ್ತಷ್ಟು ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಹಜವಾಗಿ ಈಗಿನಿಂದಲೇ ಖರೀದಿಗೂ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಜಲವಿದ್ಯುತ್‌ ಉತ್ಪಾದನೆ ಅಗ್ಗ ಮಾತ್ರವಲ್ಲ ಪೀಕ್‌ ಅವರ್‌ (ಗರಿಷ್ಠ ಬೇಡಿಕೆ ಅವಧಿ) ಒತ್ತಡ ಕೂಡ ತಗ್ಗಿಸಬಹುದಾದ ಸಾಮರ್ಥ್ಯ ಹೊಂದಿವೆ. ಆದರೆ ಸಂಪೂರ್ಣವಾಗಿ ಇವುಗಳ ಮೇಲೆಯೇ ಅವಲಂಬನೆ ಆಗಲು ಸಾಧ್ಯವಿಲ್ಲ. ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳು ಕೂಡ ಮುಖ್ಯವಾಗುತ್ತವೆ. ಇವುಗಳ ದರ ಪ್ರತೀ ಯೂನಿಟ್‌ಗೆ ಸರಾಸರಿ 7.88 ರೂ. ಇದಕ್ಕೆ ಅಗತ್ಯವಿರುವ ಕಲ್ಲಿದ್ದಲು ಹೊರರಾಜ್ಯದಿಂದ ಬರಬೇಕು. ಆಗ ಪ್ರಸರಣ ವೆಚ್ಚ ಕೂಡ ಸೇರುವುದರಿಂದ ಅದು ಪ್ರತೀ ಯೂನಿಟ್‌ಗೆ ಇನ್ನೂ ಹೆಚ್ಚಾಗುತ್ತದೆ. ಅಲ್ಲದೆ ಕೇಂದ್ರ ಸರಕಾರ ಈಗ ಕಲ್ಲಿದ್ದಲು ಆಧರಿತ ವಿದ್ಯುತ್‌ ಯೋಜನೆಗಳಿಗೆ ಉತ್ತೇಜನ ನೀಡುತ್ತಿಲ್ಲ. ಕೇಂದ್ರೀಯ ವಿದ್ಯುತ್‌ ಜಾಲದಿಂದ ಬರುವ ವಿದ್ಯುತ್‌ಗೆ ಪ್ರತೀ ಯೂನಿಟ್‌ಗೆ ಸರಾಸರಿ 5.03 ರೂ. ಆಗುತ್ತದೆ.


– ವಿಜಯ ಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next