ಈಗಾಗಲೇ ಟ್ರೈಲರ್ ಮೂಲಕ ಬಹುನಿರೀಕ್ಷೆ ಹುಟ್ಟಿಸಿರುವ ಕನ್ನಡ ಚಿತ್ರ ‘ಚಂಬಲ್’. ನೀನಾಸಂ ಸತೀಶ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿರುವ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಗೊಂಡು ಸೆಸ್ಸೇಷನ್ ಹುಟ್ಟುಹಾಕಿತ್ತು.
ಇದೀಗ ಚಿತ್ರತಂಡವು ‘ಚಂಬಲ್’ನ ಹಾಡನ್ನು ಬಿಡುಗಡೆ ಮಾಡಿದ್ದು ಜಯಂತ್ ಕಾಯ್ಕಣಿ ಅವರ ಸಾಹಿತ್ಯ ಗಮನ ಸೆಳೆಯುವಂತಿದೆ. ಒಂದೊಂದು ಸಾಲುಗಳೂ ಅರ್ಥಪೂರ್ಣವಾಗಿ ಮೂಡಿಬಂದಿರುವುದು ಈ ಹಾಡಿನ ವಿಶೇಷತೆಯಾಗಿದೆ.
‘ಕಳೆದೇ ಹೋದೆ ನಾನು ಅರಸುತ್ತ ನನ್ನನ್ನೇ ಹಿಡಿದ ದಾರಿಯೊಂದು ಮರೆತಂತೆ ಊರನ್ನೇ’ ಎಂಬ ಸಾಲುಗಳಿಂದ ಪ್ರಾರಂಭಗೊಳ್ಳುವ ಈ ಹಾಡಿನ ಉಳಿದ ಸಾಲುಗಳೂ ಸಹ ಅರ್ಥಪೂರ್ಣವಾಗಿವೆ.
‘ಬೀಸೋ ಗಾಳಿಯೇ ಹೇಳು ಯಾರ ಸಾಕ್ಷಿ ನೀನು’,
‘ಪ್ರತಿಯೊಂದು ಮುಂಜಾವು ನನ್ನನ್ನು ಮೀರೋಕೆ ಹೊಸದಾಗಿ ಸಿಕ್ಕಂತಹ ಅವಕಾಶವೇ’, ‘ಮನಸ್ಸಲ್ಲಿ ಕೂತಂತ ಮತಬೇಧದ ಕಸವ ಗುಡಿಸೋದೆ ನಿಜವಾದ ಅಧ್ಯಾತ್ಮವೇ’ ಅನ್ನುವಂತಹ ಅರ್ಥಪೂರ್ಣ ಸಾಲುಗಳು ಈ ಪದ್ಯ ಪೂರ್ತಿ ನಿಮಗೆ ಸಿಗುತ್ತದೆ.
ಜಯಂತ್ ಕಾಯ್ಕಿಣಿಯವರ ಸಾಹಿತ್ಯಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಕೇಳುಗರಿಗೆ ಹಿತ ನೀಡುತ್ತದೆ. ಉದಿತ್ ಹರಿತಾಸ್ ಧ್ವನಿ ಮೋಡಿ ಮಾಡುತ್ತದೆ. ಜಾಕೊಬ್ ವರ್ಗೀಸ್ ಅವರು ಈ ಚಿತ್ರಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ದಿನೇಶ್ ರಾಜ್ ಕುಮಾರ್ ಮತ್ತು ಮ್ಯಾಥ್ಯೂವರ್ಗೀಸ್ ಅವರು ‘ಚಂಬಲ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.