Advertisement

ಚಾಮರಾಜನಗರ: ಜಿಲ್ಲೆಯ 63 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ!

12:53 PM Feb 22, 2024 | Team Udayavani |

ಉದಯವಾಣಿ ಸಮಾಚಾರ
ಚಾಮರಾಜನಗರ: ಬೇಸಿಗೆ ಕಾಲಿಡುತ್ತಿದ್ದು, ಜಿಲ್ಲೆಯ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕುಗಳಲ್ಲಿ ನದಿ ಮೂಲದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿರುವುದರಿಂದ ಅಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದಿಲ್ಲ. ಇನ್ನುಳಿದ ತಾಲೂಕುಗಳಲ್ಲಿ ಅಂತರ್ಜಲ ಆಧಾರಿತ ನೀರಿನ ಪೂರೈಕೆಯಿದೆ. ಜಿಲ್ಲೆಯ 63 ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗ ಬಹುದೆಂದು ಗುರುತಿಸಲಾಗಿದೆ.

Advertisement

ಮುಂದಿನ ಮಾರ್ಚ್‌ -ಏಪ್ರಿಲ್‌ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಜಿಲ್ಲೆಯ 63 ಹಳ್ಳಿಗಳನ್ನು ಗುರುತಿಸಲಾಗಿದೆ. ಈ ಪೈಕಿ ಹನೂರು ತಾಲೂಕಿನ 20 ಹಳ್ಳಿಗಳಿವೆ. ಈ ಭಾಗದಲ್ಲೇ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದನ್ನು ಅಂದಾಜು ಮಾಡಲಾಗಿದ್ದು, ಅದನ್ನು ಹೇಗೆ ಎದುರಿಸಬೇಕು ಎಂಬುದಕ್ಕೂ ಕ್ರಿಯಾ ಯೋಜನೆ ಸಿದ್ದಗೊಂಡಿದೆ.

ಜಿಲ್ಲೆಯಲ್ಲಿ ಯಾವುದೇ ನದಿ ಮೂಲವಿಲ್ಲ: ಜಿಲ್ಲೆ ಯಲ್ಲಿ ಯಾವುದೇ ನದಿ ಮೂಲವಿಲ್ಲ. ಕುಡಿಯುವ ನೀರಿಗೆ ಜಿಲ್ಲೆಯು ಕಾವೇರಿ ಹಾಗೂ ಕಬಿನಿ ನದಿಯ ಮೂಲಕ ನೀರು ಸರಬರಾಜಾಗುತ್ತಿದೆ. ಆದರೆ, ನದಿ ಮೂಲದಿಂದ ನೀರು ದೊರೆಯದ ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಕುಸಿದರೆ ಏನು ಮಾಡಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಕ್ರಿಯಾ ಯೋಜನೆ ತಯಾರಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕಿನ ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನದಿ ಮೂಲದಿಂದ ಮನೆ ಮನೆಗಳಿಗೆ ನೀರು ಕೊಡುವ ಯೋಜನೆ ಇದೆ. ಅಲ್ಲದೇ, ಚಾಮರಾಜನಗರ, ಗುಂಡ್ಲು ಪೇಟೆ, ಕೊಳ್ಳೇಗಾಲ ಪಟ್ಟಣಗಳಿಗೆ ಕಾವೇರಿ – ಕಬಿನಿ ನದಿಯಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ.ಗ್ರಾಮೀಣ ಪ್ರದೇಶಗಳಿಗೆ ಪ್ರತಿನಿತ್ಯ ಅಥವಾ ಎರಡು ದಿನಕ್ಕೊಮ್ಮೆ ನಲ್ಲಿಗಳಲ್ಲಿ ನೀರು ದೊರಕುತ್ತಿದೆ.

ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಪಟ್ಟಣಗಳಲ್ಲಿ ವಾರದಲ್ಲಿ ಎರಡು ಅಥವಾ ಮೂರು ದಿನ ನದಿ ನೀರು ಬಿಡಲಾಗುತ್ತಿದೆ. ಆದರೆ ಈ ಪಟ್ಟಣ ಗಳಲ್ಲೂ ಬಹುತೇಕ ಎಲ್ಲ ವಾರ್ಡುಗಳಲ್ಲೂ ಬೋರ್‌ ವೆಲ್‌ ಮೂಲಕವೂ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ.

Advertisement

ಬಹುಗ್ರಾಮ ಯೋಜನೆ ಪೂರ್ಣಗೊಂಡಿಲ್ಲ:
ಆದರೆ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಬಹುತೇಕ ಗ್ರಾಮಗಳಿಗೆ ಇನ್ನು ಬಹುಗ್ರಾಮ ಯೋಜನೆ ಪೂರ್ಣಗೊಂಡಿಲ್ಲ. ಇಲ್ಲಿ ಅಂತರ್ಜಲ ಆಧಾರಿತ ಬೋರ್‌ವೆಲ್‌ ಮೂಲಕವೇ ನೀರು ಸರಬರಾಜಾಗಬೇಕು. ಬೇಸಿಗೆ ಬಂದಾಗ
ಅಂತರ್ಜಲ ಮಟ್ಟ ಕುಸಿಯುತ್ತದೆ. ಹಾಗಾಗಿ ಸದ್ಯ ಅಂತರ್ಜಲ ಮಟ್ಟ ಕುಸಿದಿರುವ ಗ್ರಾಮಗಳ ಹೆಸರನ್ನು ಪಟ್ಟಿ ಮಾಡಲಾಗಿದೆ. ಆ ಪ್ರಕಾರ ಜಿಲ್ಲೆಯ 63 ಗ್ರಾಮಗಳಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

1 ಕೋಟಿ ರೂ. ಬಿಡುಗಡೆ: ಇಂಥ ಗ್ರಾಮಗಳಲ್ಲಿ ಮಾರ್ಚ್‌ – ಏಪ್ರಿಲ್‌ನಲ್ಲಿ ಎದುರಾಗಬಹುದಾದ  ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲೆಗೆ ರಾಜ್ಯ ಸರ್ಕಾರ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅನುದಾನ ಸದ್ಬಳಕೆ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಕ್ರಿಯಾಯೋಜನೆ ಸಹ ಸಿದ್ಧಗೊಂಡಿದೆ. ಸಮಸ್ಯೆ ಎದುರಾದರೆ ಏನೆಲ್ಲಾ ಕಾಮಗಾರಿ ಮಾಡಬೇಕು. ತುರ್ತು ಕಾಮಗಾರಿಗಳೇನು ಎಂಬುದು ಸೇರಿದಂತೆ
ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿ ಯನ್ನು ಸಹ ಸಿದ್ಧಗೊಳಿಸಲಾಗಿದೆ. ಕ್ರಿಯಾಯೋಜನೆಯನ್ನೂ ತಯಾರಿಸಲಾಗಿದೆ.  ಸದ್ಯ ಕುಡಿಯುವ ನೀರಿನ ಸಮಸ್ಯೆ ಎದುರಾಗ ಬಹುದಾದ 63 ಗ್ರಾಮಗಳ ಪೈಕಿ ಹನೂರು ಭಾಗದ 20 ಗ್ರಾಮಗಳು ಸೇರಿವೆ ಎಂಬುದು ಗಮನಾರ್ಹ. ಹನೂರು ತಾಲೂಕಿನಲ್ಲಿ ಕಾಡಂಚಿನ ಗ್ರಾಮಗಳೇ ಹೆಚ್ಚು. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಾಗ ಎದುರಾಗುತ್ತಲೇ ಇರುತ್ತದೆ. ಹನೂರು ತಾಲೂಕಿನ ಒಟ್ಟು 210 ಜನ ವಸತಿ ಇರುವ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಚಾಲ್ತಿಯಲ್ಲಿದ್ದು, ಸದ್ಯ ಅಲ್ಲಿನ 20 ಗ್ರಾಮಗಳಿಗಷ್ಟೇ ಯೋಜನೆಯಡಿ ನೀರು ಒದಗಿಸಲಾಗುತ್ತಿದೆ.

ಸಮಸ್ಯೆ ಎದುರಾಗುವ ಪಟ್ಟಿಯಲ್ಲಿರುವ ಗ್ರಾಮ ಗಳಲ್ಲಿ ಆರ್‌ಒ ಪ್ಲಾಂಟ್‌ಗಳನ್ನು ಸುಸ್ಥಿತಿಯಲ್ಲಿ ಇಟ್ಟು ಕೊಳ್ಳಬೇಕು. ಖಾಸಗಿ ಬೋರ್‌ವೆಲ್‌ಗ‌ಳಲ್ಲಿ ಅಂತ ರ್ಜಲ ಕುಸಿದಿದ್ದರೆ (ರೀಬೋರಿಂಗ್‌) ರೀಚಾರ್ಜ್‌ ಕ್ರಮ ವಹಿಸಬೇಕು ಎಂಬುದಾಗಿ ಜಿಲ್ಲಾಧಿಕಾರಿ ಯವರು ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಬೇಸಿಗೆ ಕಾಲಿಟ್ಟಿದೆ. ಮಾರ್ಚ್‌-ಏಪ್ರಿಲ್‌ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕೆಲವು ಗ್ರಾಮಗಳಲ್ಲಿ ಎದುರಾಗಬಹುದು. ಇದನ್ನು ಪರಿಹರಿಸಲು ರಾಜ್ಯ ಸರ್ಕಾರ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದಕ್ಕಾಗಿ
ಕ್ರಿಯಾಯೋಜನೆ ಸಹ ಸಿದ್ಧವಾಗಿದೆ.
●ಎ.ಎನ್‌.ಮಧುಸೂದನ್‌,
ಕಾರ್ಯಪಾಲಕ ಎಂಜಿನಿಯರ್‌, ನೀರು ನೈರ್ಮಲ್ಯ ಇಲಾಖೆ

●ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next