ಬೆಂಗಳೂರು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಕಾಂಗ್ರೆಸ್‌ಗೆ ಮರಳಿ ಬರುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಮಾಜಿ ಸಚಿವ ಚೆಲುವರಾಯ ಸ್ವಾಮಿ “ಬಾಂಬ್’ ಸಿಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ, ಬೈರತಿ ಬಸವರಾಜ್ ಪ್ರತಿನಿಧಿಸುವ ಕೆ.ಆರ್.ಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಆಗಿಲ್ಲ. ಈ ಬೆನ್ನಲ್ಲೇ ಚೆಲುವರಾಯಸ್ವಾಮಿಯವರ ಮಾತು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪರಿಷತ್ ಸದಸ್ಯರಾದ ಪುಟ್ಟಣ್ಣ, ಬಾಬೂರಾವ್ ಚಿಂಚನಸೂರ್, ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ ಘೋಷಿಸಿದ್ದಾರೆ. ಮತ್ತೂಬ್ಬ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರೂ ರಾಜೀನಾಮೆಗೆ ಮುಂದಾಗಿದ್ದಾರೆ. ಮತ್ತಷ್ಟು ಹಾಲಿ ಶಾಸಕರು, ಪರಿಷತ್ ಸದಸ್ಯರು ಕಾಂಗ್ರೆಸ್ ಸೇರ್ಪಡೆಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನೆಲೆ ಕುತೂಹಲ ಮೂಡಿಸಿದೆ.
ಯೋಗೇಶ್ವರ್ ಮಾತು ನಿಜ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿತ್ತು ಎಂಬ ಮಾಜಿ ಸಚಿವ ಯೋಗೇಶ್ವರ್‌ರ ಮಾತು ನಿಜ. ಅವರು ಸತ್ಯ ಒಪ್ಪಿಕೊಂಡಿದ್ದಾರೆ. ಯೋಗೇಶ್ವರ್‌ರಿಗೆ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದ್ದು ನಮ್ಮ ಸಿದ್ಧಾಂತ ಒಪ್ಪಿ ಬರುವುದಾದರೆ ಕಾಂಗ್ರೆಸ್‌ಗೆ ಸ್ವಾಗತ ಎಂದು ಹೇಳಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿತ್ತು ಎಂದು ಸಿ.ಪಿ. ಯೋಗೇಶ್ವರ್ ಅವರು ಸತ್ಯ ಹೇಳಿದ್ದಾರೆ. ಅವರಿಗೆ ಧನ್ಯವಾದ.
– ಸಿದ್ದರಾಮಯ್ಯ, ಮಾಜಿ ಸಿಎಂ