Advertisement
2015-16ನೇ ಸಾಲಿನಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕೆರೆ ಒತ್ತುವರಿ ತಡೆಗಟ್ಟಲು ಪೋಷಕ ಕಾಲುವೆ ಮತ್ತು ರಾಜ ಕಾಲುವೆಗಳ ದುರಸ್ತಿ ಮಾಡಲು ಸರ್ಕಾರ 2015ರ ನವೆಂಬರ್‌ನಲ್ಲಿ ಅನುಮೋದನೆ ನೀಡಿತ್ತು. ಇದರನ್ವಯ ರಾಜ್ಯದ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ 3677 ಕೆರೆಗಳ ಪೈಕಿ ಒತ್ತುವರಿಯಾದ 3300ಕ್ಕೂ ಹೆಚ್ಚು ಕೆರೆಗಳನ್ನು ಮರಳಿ ಸ್ವಾಧೀನ ಪಡಿಸಿಕೊಂಡು ಆ ಭೂಮಿಗೆ ಟ್ರೆಂಚ್ ಹೊಡೆದು ಕೆರೆಯ ಅಂಚುಗಳನ್ನು ಗುರುತಿಸಬೇಕಾಗಿತ್ತು.
ರಾಜ್ಯದಲ್ಲಿ ಸಣ್ಣ ನೀರಾವರಿಗೆ ಬಳಕೆಯಾಗುವ 3677 ಕೆರೆಗಳಿದ್ದು, ಈ ಪೈಕಿ ಶೇ. 67ರಷ್ಟು ಕೆರೆಗಳ ಕೆಲವಷ್ಟು ಭಾಗ ಅತಿಕ್ರಮಣಕ್ಕೆ ಒಳಗಾಗಿತ್ತು. ಕೆಲವಷ್ಟು ಕೆರೆಗಳು 3 ಗುಂಟೆಯಿಂದ 10-15 ಎಕರೆ ವರೆಗೂ ಒತ್ತುವರಿಯಾಗಿವೆ. ಬೆಂಗಳೂರು ಸಣ್ಣ ನೀರಾವರಿ ವೃತ್ತದ ವ್ಯಾಪ್ತಿಯಲ್ಲಿ ಒಟ್ಟು 1613 ಕೆರೆಗಳಿದ್ದು, ಈ ಪೈಕಿ 692 ಕೆರೆಗಳು ಅತಿಕ್ರಮಣಕ್ಕೆ ಒಳಗಾಗಿವೆ.
Related Articles
Advertisement
ಧಾರವಾಡ ಜಿಲ್ಲೆಯಲ್ಲಿ 111 ಕೆರೆಗಳು ಒತ್ತುವರಿಯಾಗಿದ್ದರೆ, ಹಾವೇರಿ ಜಿಲ್ಲೆಯಲ್ಲಿ 259, ಬಾಗಲಕೋಟೆ 62, ಉತ್ತರ ಕನ್ನಡ 90, ವಿಜಯಪುರ 147 ಹಾಗೂ ಬೆಳಗಾವಿ ಜಿಲ್ಲೆಯ 270 ಕೆರೆಗಳು ಒತ್ತುವರಿಯಾಗಿವೆ. ಈ ಜಿಲ್ಲೆಗಳಲ್ಲಿ 60 ಎಕರೆ ಮಾತ್ರ ಅತಿಕ್ರಮಣಕ್ಕೆ ಒಳಗಾಗಿದ್ದು, ಅದನ್ನೂ ತೆರವುಗೊಳಿಸಿದ್ದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಬೆಳಗಾವಿ ವಿಭಾಗದಲ್ಲಿ 560 ಎಕರೆಗೂ ಹೆಚ್ಚು ಸಣ್ಣ ನೀರಾವರಿ ಕೆರೆಗಳ ಭೂಮಿ ಅತಿಕ್ರಮಣಕ್ಕೆ ಒಳಗಾಗಿದೆ ಎನ್ನಲಾಗಿದೆ.
ಕಲಬುರ್ಗಿ ವಿಭಾಗದ ಸಣ್ಣ ನೀರಾವರಿ ಕೆರೆಗಳ ಸಂಖ್ಯೆ 768 ಆಗಿದ್ದು, ಈ ಪೈಕಿ 413 ಎಕರೆ ಕೆರೆಯ ಭೂಮಿ ನುಂಗಣ್ಣರ ಪಾಲಾಗಿದೆ. ಇದನ್ನು ಕೆರೆಯಂಗಳಕ್ಕೆ ಮರಳಿ ಸೇರಿಸಿಕೊಂಡಿದ್ದಾಗಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದು, ವಾಸ್ತವವಾಗಿ ವಶಕ್ಕೆ ಪಡೆದ ಭೂಮಿಯಲ್ಲಿ ಮತ್ತೆ 200 ಎಕರೆ ಭೂಮಿ ಅತಿಕ್ರಮಣಕ್ಕೆ ಒಳಗಾಗಿದೆ.
ಸರ್ಕಾರದ ಕಾಗದ ಪತ್ರಗಳಲ್ಲಿ ಮಾತ್ರ ಕೆರೆ ಒತ್ತುವರಿ ತೆರವುಗೊಂಡಿದೆ. ಸ್ಥಳಕ್ಕೆ ತೆರಳಿ, ಕೆರೆಗಳ ಅಂಚು ಗುರುತಿಸಿ, ಗಟ್ಟಿಯಾದ ಕಲ್ಲು ಅಥವಾ ಟ್ರೆಂಚ್ ಹೊಡೆಸಿ, ಕೆರೆಯಂಗಳ ಅನ್ಯರ ಪಾಲಾಗದಂತೆ ನೋಡಿಕೊಳ್ಳುವ ಕೆಲಸ ಇಲಾಖೆಯಿಂದ ಇನ್ನಷ್ಟು ಚುರುಕಾಗಿ ಆಗಬೇಕಾಗಿದೆ ಎನ್ನುತ್ತಾರೆ ನೀರಾವರಿ ಮತ್ತು ಪರಿಸರ ತಜ್ಞರು.
ಕೆರೆಗಳ ಅತಿಕ್ರಮಣ ತೆರವು ಕಾರ್ಯವನ್ನು ಸರ್ಕಾರ ಮಾಡುತ್ತಿದ್ದು, 1ನೇ ಹಂತದಲ್ಲಿ ನಿಗದಿಪಡಿಸಿದ ಕೆರೆಗಳ ಅತಿಕ್ರಮಣ ತೆರವುಗೊಳಿಸಿದ್ದೇವೆ. ಮರು ಅತಿಕ್ರಮಣವಾಗಿದ್ದರೆ ಅಥವಾ ಇನ್ನೂ ತೆರವು ಮಾಡುವುದು ಉಳಿದಿದ್ದರೆ, ಅಂತಹ ಕೆರೆಗಳ ಅತಿಕ್ರಮಣಗೊಂಡ ಭೂಮಿಯನ್ನು ಮರಳಿ ಕೆರೆಯಂಗಳಕ್ಕೆ ಜೋಡಿಸುತ್ತೇವೆ.-ಟಿ.ಬಿ.ಜಯಚಂದ್ರ, ಸಣ್ಣ ನೀರಾವರಿ ಸಚಿವ – ಬಸವರಾಜ ಹೊಂಗಲ್