Advertisement
ಗಣೇಶೋತ್ಸವ ಹಿನ್ನೆಲೆಯಲ್ಲಿ ಜನ ಐದಾರು ಅಡಿಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಆದರೆ, ಕಲ್ಯಾಣಿಗಳಲ್ಲಿ ಅವುಗಳನ್ನು ಸಮರ್ಪಕವಾಗಿ ವಿಸರ್ಜಿಸಲು ಸಾಧ್ಯವಾಗದು. ಇದರಿಂದಾಗಿ ವಿಸರ್ಜನೆಯ “ಶಾಸ್ತ್ರ’ ಮುಗಿಸಿ ನಂತರ ಪಕ್ಕಕ್ಕೆ ಇಡಲಾಗುತ್ತದೆ. ಈ ವೇಳೆ ಮೂರ್ತಿಯ ಕೈ-ಕಾಲು, ಕಿವಿ, ಶಿರಕ್ಕೆ ಹಾನಿಯಾಗಿ ವಿರೂಪವಾಗುತ್ತಿದ್ದು, ಕೆಲವು ಕೆರೆಗಳಲ್ಲಿ ಸಮರ್ಪಕವಾಗಿ ಮುಳುಗದೆ ತೇಲಾಡುತ್ತಿರುತ್ತವೆ.
Related Articles
Advertisement
ವಾರ್ಷಿಕ 8 ಲಕ್ಷ ಮೂರ್ತಿಗಳ ಆರಾಧನೆ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಅದರಂತೆ ವಾರ್ಷಿಕ 8 ಲಕ್ಷಕ್ಕೂ ಹೆಚ್ಚಿನ ಗಣೇಶ ಮೂರ್ತಿಗಳು ನಗರದಲ್ಲಿ ಪ್ರತಿಷ್ಠಾಪನೆಯಾಗುತ್ತಿವೆ. ಆ ಪೈಕಿ 3 ಲಕ್ಷ ಮೂರ್ತಿಗಳನ್ನು ಮನೆ ಆವರಣ, ಬಾವಿ ಇತರೆಡೆ ವಿಸರ್ಜಿಸಲಾಗುತ್ತಿದೆ. ಉಳಿದ 5 ಲಕ್ಷ ಮೂರ್ತಿಗಳನ್ನು ಪಾಲಿಕೆಯ ಕೆರೆ ಹಾಗೂ ಕಲ್ಯಾಣಿಗಳಲ್ಲಿ ವಿಸರ್ಜನೆಯಾಗುತ್ತಿದ್ದು, ಬಹಳಷ್ಟು ಕಡೆ ಕೆರೆಗಳು ಮಲೀನವಾಗುತ್ತಿವೆ.
ತ್ಯಾಜ್ಯ ಪ್ರಮಾವೂ ಹೆಚ್ಚಳ: ನಗರದಲ್ಲಿ ಸಾಮಾನ್ಯ ದಿನಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಪ್ರಮಾಣಕ್ಕೆ ಹೋಲಿಸಿದರೆ ಹಬ್ಬದ ಸಂದರ್ಭದಲ್ಲಿ ಹತ್ತಾರು ಪಟ್ಟು ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಪೌರಕಾರ್ಮಿಕರು ಮೂರು ಪಾಳಿಗಳಲ್ಲಿ ಕಾರ್ಯ ನಿರ್ವಹಿಸಿ ತ್ಯಾಜ್ಯ ವಿಲೇವಾರಿ ಕೈಗೊಳ್ಳುತ್ತಾರೆ. ಗಣೇಶ ಚತುರ್ಥಿಯ ದಿನ ಹಾಗೂ ನಂತರ ಎರಡು- ಮೂರು ದಿನ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಸೃಷ್ಟಿಯಾಗಲಿದೆ.
ಏಕಾಏಕಿ ನೂರಾರು ಟನ್ ತ್ಯಾಜ್ಯ ಹೆಚ್ಚುವರಿಯಾಗಿ ಉತ್ಪತ್ತಿಯಾಗುವುದರಿಂದ ತ್ವರಿತ ವಿಲೇವಾರಿ ಸವಾಲೆನಿಸುತ್ತದೆ. ಮೂರ್ತಿ ವಿಸರ್ಜನಾ ಸ್ಥಳಗಳಲ್ಲಿಯೇ ಭಾರೀ ಪ್ರಮಾಣದಲ್ಲಿ ಹೂವು, ಹಣ್ಣು , ಪೂಜಾ, ಅಲಂಕಾರ ಸಾಮಗ್ರಿ, ತ್ಯಾಜ್ಯ ಸೃಷ್ಟಿಯಾಗುತ್ತಿದ್ದು, ಕೆರೆ ಪರಿಸರಕ್ಕೂ ಹಾನಿಯಾಗುತ್ತದೆ. ಇದನ್ನು ತಪ್ಪಿಸಲು ಎಲ್ಲರೂ ಸ್ವತ್ಛತೆಗೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಗಣೇಶ ಮೂರ್ತಿ ಆರಾಧನೆಯ ಉದ್ದೇಶವೇ ಬೇರೆ: ಕೆರೆಗಳಿಗೆ ಹಲವು ಕಡೆಗಳಿಂದ ನೀರು ಹರಿದು ಬರುವುದರಿಂದ ಹೆಚ್ಚಿನ ಲವಣಾಂಶಗಳು ಹಾಗೂ ವಿವಿಧ ಬಗೆಯ ಬೀಜಗಳು ಕೆರೆ ಸೇರುತ್ತವೆ. ಹೀಗಾಗಿ ಒಂದು ಊರಿನ ಮಣ್ಣಿನಿಂದ ಮಾಡಿ ಮೂರ್ತಿಗಳನ್ನು ಮತ್ತೂಂದು ಊರಿಗೆ ನೀಡುವ ಮೂಲಕ ಲವಣಾಂಶ ಹಾಗೂ ಬೀಜಗಳು ತಲುಪುವಂತೆ ಮಾಡುವ ಉದ್ದೇಶದಿಂದ ಕೆರೆಯ ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸಲಾಗುತ್ತಿತ್ತು. ಇದು ಒಂದು ರೀತಿಯಲ್ಲಿ ಜೀವವೈವಿಧ್ಯ ಪ್ರಕ್ರಿಯೆಯಾಗಿತ್ತು ಎನ್ನುತ್ತಾರೆ ಪರಿಸರವಾದಿ ಡಾ.ಎ.ಎನ್.ಯಲ್ಲಪ್ಪರೆಡ್ಡಿ.
ಆದರೆ ಈಚಿನ ವರ್ಷಗಳಲ್ಲಿ ರಾಸಾಯನಿಕಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಆರಾಧನೆಗೆ ವಿದ್ಯಾವಂತರೇ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದರಿಂದ ನಾವೇ ಕೆರೆಗಳಿಗೆ ವಿಷ ಹಾಕಿ ಹಾಳು ಮಾಡುತ್ತಿದ್ದೇವೆ. ಮೂರ್ತಿಗಳ ಮೂಲಕ ವಿಷಕಾರಿ ಅಂಶಗಳು ಕೆರೆ ಸೇರುತ್ತಿದ್ದು, ಸುತ್ತಮುತ್ತಲಿನ ಅಂತರ್ಜಲ ಸಹ ವಿಷಮಯವಾಗಿ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಹೀಗಾಗಿ ನಗರದ ಜನರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
* ವೆಂ. ಸುನೀಲ್‌ಕುಮಾರ್