Advertisement

ಹೋರಾಟದ ಹಾದಿಯಲ್ಲಿ ಸವಾಲುಗಳೇ ಮೆಟ್ಟಿಲು

12:40 PM Mar 23, 2018 | |

ಪುತ್ತೂರು: ಹೋರಾಟದ ಹಾದಿಯಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿಲಾಗಿ ಬಳಸಿಕೊಂಡು ಯಶಸ್ವಿ ನಾಯಕಿ ಎನಿಸಿಕೊಂಡವರು ಶಕುಂತಳಾ ಟಿ. ಶೆಟ್ಟಿ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 800 ಕೋಟಿ ರೂ.ಗೂ ಅಧಿಕ ಅನುದಾನ ತರಿಸಿಕೊಂಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

Advertisement

ಮಹಿಳಾ ಹೋರಾಟದಿಂದ ತೊಡಗಿ ಸಂಸದೀಯ ಕಾರ್ಯದರ್ಶಿ ವರೆಗಿನ ಸಾಕಷ್ಟು ಜವಾಬ್ದಾರಿಗಳನ್ನು ನಿರ್ವಹಿಸಿದವರು ಶಕುಂತಳಾ ಶೆಟ್ಟಿ. ಮೊದಲ ಅವಧಿಯ ಶಾಸಕತ್ವದ ಅವಧಿಯಲ್ಲಿ ಜನಪ್ರಿಯತೆ ಪಡೆದುಕೊಂಡರು. ಬಳಿಕ ಸ್ವಾಭಿಮಾನಿ ವೇದಿಕೆ ಕಟ್ಟಿ, ಕಾಂಗ್ರೆಸ್‌ನಿಂದ ಶಾಸಕಿಯಾಗಿ ಆಯ್ಕೆಯಾದರು. ಒಡೆದು ಚೂರಾಗಿದ್ದ ಕಾಂಗ್ರೆಸನ್ನು ಹಿಂದಿನ ವಿಧಾನಸಭೆ ಚುನಾವಣೆ ಸಂದರ್ಭ ಒಗ್ಗೂಡಿಸಿದ್ದೇ ಇವರ ದೊಡ್ಡ ಸಾಧನೆ.

ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿ ಮಾಡಬೇಕೆಂಬ ಕೂಗು ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ. ಇದಕ್ಕೆ ಪೂರಕ ಕೆಲಸಗಳನ್ನು ಈಗಾಗಲೇ ಆರಂಭಿಸಲಾಗಿದೆ ಎನ್ನುತ್ತಾರೆ ಶಾಸಕಿ. ಮುರ-ಸಂಪ್ಯ (ವಯಾ ಬೈಪಾಸ್‌) ಹಾಗೂ ಕೋಡಿಂಬಾಡಿ- ಉಪ್ಪಿನಂಗಡಿ,ನಿಡ್ಪಳ್ಳಿ -ಪಾಣಾಜೆ ಡಬಲ್‌ ರೋಡ್‌, ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜು, ಸಿಂಥೆಟಿಕ್‌ ಟ್ರ್ಯಾಕ್ ನ ಕ್ರೀಡಾಂಗಣ, ಪೋಸ್ಟ್‌ ಮೆಟ್ರಿಕ್‌ ಮಹಿಳಾ ವಸತಿ ನಿಲಯ ಸಹಿತ ಒಟ್ಟು 7 ಹಾಸ್ಟೆಲ್‌ಗ‌ಳನ್ನು ತರಿಸಿಕೊಳ್ಳಲಾಗಿದೆ.

ಹಿಂದಿನ ಅವಧಿಯಲ್ಲಿ ಪುತ್ತೂರು ಮಿನಿ ವಿಧಾನಸೌಧ, ಆರ್‌ಟಿಒ ಕಚೇರಿ, ಕೆಎಸ್‌ಆರ್‌ಟಿಸಿ ಡಿಪೋ, 8 ಪ್ರೌಢಶಾಲೆಗಳನ್ನು ತರಿಸಿಕೊಳ್ಳಲಾಗಿದೆ. ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಈ ಅವಧಿಯಲ್ಲಿ ಉದ್ಘಾಟನೆಯಾದರೂ ಇದರ ಕಾಮಗಾರಿ ನಡೆದದ್ದು ಸರಕಾರ ಹಾಗೂ ಪಿಪಿಪಿ ಯೋಜನೆಯಡಿ. ಪುತ್ತೂರು ಡಿಪೋ ಆರಂಭವಾದ ಬಳಿಕ ಈಗ 189 ಬಸ್‌ಗಳು ಬಂದಿವೆ. ಜಾಗದ ಸಮಸ್ಯೆಯಿಂದಾಗಿ ಹೊಸ ಡಿಪೋ ಹುಡುಕುವ ಕೆಲಸವೂ ನಡೆಯುತ್ತಿದೆ ಎನ್ನುತ್ತಾರೆ ಅವರು. 

60 ಪೊಲೀಸ್‌ ವಸತಿಗೃಹ, 2 ನಿರೀಕ್ಷಕರ ವಸತಿ ಗೃಹ, 18 ಅಂಬೇಡ್ಕರ್‌ ಭವನ ಬಂದಿವೆ. ಪುತ್ತೂರಿನ ಅಂಬೇಡ್ಕರ್‌ ಭವನಕ್ಕೆ 1.5 ಕೋಟಿ ರೂ., ಉಪ್ಪಿನಂಗಡಿ ಅಂಬೇಡ್ಕರ್‌ ಭವನಕ್ಕೆ 50 ಲಕ್ಷ ರೂ., ಉಳಿದ ಭವನಗಳಿಗೆ ತಲಾ 10 ಲಕ್ಷ ರೂ. ಅನುದಾನ ನೀಡಲಾಗಿದೆ.

Advertisement

ಉಪ್ಪಿನಂಗಡಿಯಲ್ಲಿ 5 ಕೋ.ರೂ.ನಲ್ಲಿ ಆಸ್ಪತ್ರೆ, 45 ಲಕ್ಷ ರೂ. ವೆಚ್ಚದಲ್ಲಿ ಸಾಮೆತ್ತಡ್ಕದಲ್ಲಿ ಪುತ್ತೂರು- ಸುಳ್ಯಕ್ಕೆ ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿ ನಿರ್ಮಿಸಲಾಗಿದೆ. ಅಂಬೇಡ್ಕರ್‌ ವಸತಿ ಶಾಲೆ ಪುತ್ತೂರಿಗೆ ಬಂದಿದ್ದು, ಬಜತ್ತೂರಿನಲ್ಲಿ ಜಾಗ ನೋಡಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಶಾಸಕಿ ಹೇಳಿಕೊಳ್ಳುತ್ತಾರೆ.

ಬೋರ್‌ವೆಲ್‌
ಅಲ್ಪಸಂಖ್ಯಾಕರು, ಹಿಂದುಳಿದ ವರ್ಗ, ಎಸ್ಸಿ, ಎಸ್ಟಿಗಳಿಗೆಂದು ಕಳೆದ 5 ವರ್ಷಗಳಲ್ಲಿ 637 ಬೋರ್‌ವೆಲ್‌ ಕೊರೆಸಲಾಗಿದೆ. ಇದರಲ್ಲಿ ಗಂಗಾ ಕಲ್ಯಾಣ ಯೋಜನೆಯ ಬೋರ್‌ವೆಲ್‌ ಗಳು ಒಳಪಡುತ್ತವೆ. 40 ಕಿ. ಮೀ. ನಮ್ಮ ಗ್ರಾಮ- ನಮ್ಮ ರಸ್ತೆಯಡಿ ಕೆಲಸ ನಡೆದಿವೆ.

ಕೆರೆ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕೆರೆ, ಈಶ್ವರ ಮಂಗಲ, ಪುಂಡಿಕಾಯಿ, ಬೈರತಿ ಕೆರೆಗಳ ಅಭಿವೃದ್ಧಿಗೆ ಅನುದಾನ ತರಿಸಿಕೊಳ್ಳಲಾಗಿದೆ.

ಸ್ವಚ್ಛ ಪುತ್ತೂರು
ಪ್ರಧಾನಿ ಮೋದಿ ಸ್ವಚ್ಛ ಭಾರತ ಪರಿಕಲ್ಪನೆ ಹೊರಗೆಡಹುವ ಮೊದಲೇ ಸ್ವಚ್ಛ ಪುತ್ತೂರು ಜಾರಿಗೆ ಬಂದಿತ್ತು. ಕಾಕತಾಳೀಯ ಎಂಬಂತೆ ಈ ಎರಡೂ ಪರಿಕಲ್ಪನೆಗಳು ಆರಂಭವಾದದ್ದು ಗಾಂಧಿ ಜಯಂತಿಯಂದೇ ಎಂದು ನೆನಪಿಸಿಕೊಳ್ಳುತ್ತಾರೆ ಶಕುಂತಳಾ ಶೆಟ್ಟಿ. ಆದರೆ ಇದು ನಿರೀಕ್ಷೆಯಷ್ಟು ಯಶಸ್ಸು ಕಂಡಿಲ್ಲ. ಹಾಗೆಂದು ಪ್ರಯತ್ನ ಕೈಬಿಡಲಿಲ್ಲ, ಪ್ರಯತ್ನ ಸಾಗುತ್ತಲೇ ಇದೆ.

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ
ಜಿಲ್ಲಾ ಕೇಂದ್ರ ಆಗಬೇಕಾದರೆ ಪೂರಕ ಅಭಿವೃದ್ಧಿ ಅನಿವಾರ್ಯ. ಇದರಲ್ಲಿ ಪ್ರವಾಸೋದ್ಯಮವೂ ಸೇರಿದೆ. ಬಿರುಮಲೆ ಬೆಟ್ಟದಲ್ಲಿ ಟ್ರೀ ಪಾರ್ಕ್‌ ನಿರ್ಮಾಣಗೊಂಡಿದೆ. ಪರ್ಲಡ್ಕ ಡಾ| ಶಿವರಾಮ ಕಾರಂತರ ಬಾಲವನಕ್ಕೆ ಬಿರುಮಲೆ ಗುಡ್ಡದ ಜತೆ ಸಂಪರ್ಕ ಕಲ್ಪಿಸುವ ರೋಪ್‌ವೇ ಇನ್ನೂ ಪ್ರಸ್ತಾವ ಹಂತದಲ್ಲೇ ಇದೆ.

ಬೆಂದ್ರ್ ತೀರ್ಥ ಬಿಸಿನೀರ ಬುಗ್ಗೆ ಸ್ಥಗಿತಗೊಂಡಿದ್ದು, ಕಾರಣ ತಿಳಿಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಡುಮಲೆ ಅಭಿವೃದ್ಧಿಗೆ 5 ಕೋ.ರೂ. ಮಂಜೂರುಗೊಂಡಿದ್ದರೂ ಕೆಲಸಕ್ಕೆ ವೇಗ ಸಿಕ್ಕಿಲ್ಲ. ಆದ್ದರಿಂದ ಯೋಜನೆಯನ್ನು ಬದಲಾಯಿಸಿ, ಹೊಸ ರೂಪುರೇಷೆ ತಯಾರಿಸಲಾಗಿದೆ ಎಂದು ಶಕುಂತಳಾ ವಿವರಿಸುತ್ತಾರೆ.

ಡಯಾಲಿಸಿಸ್‌ ಕೇಂದ್ರ ಸಹಿತ ಪುತ್ತೂರಿನಲ್ಲಿ ನಡೆದಿರುವ ಕೆಲಸಗಳು ತೃಪ್ತಿ ತಂದಿವೆ. ಆದರೆ ಇನ್ನಷ್ಟು ಕೆಲಸ ನಡೆಯಬೇಕಿತ್ತು ಎಂಬ ತುಮುಲವಿದೆ. ನಮ್ಮ ವೇಗಕ್ಕೆ ಅಧಿಕಾರಿಗಳ ವೇಗ ಸಾಲುತ್ತಿಲ್ಲ ಎಂಬ ಕೊರಗು ನನ್ನದು. ಡಾ| ರಾಜೇಂದ್ರ ಕೆ.ವಿ. ಅವರು ಎಸಿ ಆಗಿದ್ದಾಗ ಅವರ ಆಲೋಚನೆ ನಮಗೆ ತಕ್ಕಂತೆ ಇತ್ತು. ಅಷ್ಟರಲ್ಲಿ ಅವರಿಗೆ ವರ್ಗವಾಯಿತು. ಪುತ್ತೂರು ನಗರ ವ್ಯಾಪ್ತಿಯಲ್ಲಿ ಮಹಿಳಾ ಕಾಲೇಜು, ನ್ಯಾಯಾಲಯ, ನಗರೋತ್ಥಾನ ಎಂದು ಹಲವು ಯೋಜನೆಗಳನ್ನು ತರಿಸಿಕೊಳ್ಳಲಾಗಿದೆ. ದಾರಿದೀಪ, ರಸ್ತೆ ಮೊದಲಾದ ಸಣ್ಣಪುಟ್ಟ ಕೆಲಸಗಳು ನಡೆದಿವೆ. ಆದರೆ ಇದಾವುದರ ಪ್ರಚಾರಕ್ಕೆ ನಾವು ಹೋಗಿಲ್ಲ; ವಿಚಾರ ಮಾತ್ರ ಮಾಡುತ್ತಾ ಹೋಗುತ್ತಿದ್ದೇವೆ.

ನನಸಾಗಬೇಕಾದ ಕನಸುಗಳು
ಈಗ ಹಮ್ಮಿಕೊಂಡಿರುವ ಯೋಜನೆಗಳನ್ನು ಜಾರಿಗೆ ತರುವುದೇ ನನ್ನ ಕನಸು ಎನ್ನುತ್ತಾರೆ ಶಕುಂತಳಾ ಶೆಟ್ಟಿ. ಮಹಿಳಾ ಕಾಲೇಜಿಗೆ 7 ಎಕರೆ, ವೈದ್ಯಕೀಯ ಕಾಲೇಜಿಗೆ 40 ಎಕರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣಕ್ಕೆ 20 ಎಕರೆ, ಹೆಲಿಪ್ಯಾಡ್‌ಗೆ 5 ಎಕರೆ ಜಾಗ ಮೀಸಲಿಡಲಾಗಿದೆ. ಇವೆಲ್ಲ ಇನ್ನು ಮುಂದೆ ಆಗಬೇಕಾದವು. ಜಾಗವನ್ನಷ್ಟೇ ಮೀಸಲಿಡಲಾಗಿದೆ. ವೈದ್ಯಕೀಯ ಕಾಲೇಜಿಗೆ 500 ಕೋ. ರೂ. ಅನುದಾನ ಮೀಸಲಿಡುವ ಕೆಲಸವೂ ಆಗಬೇಕಿದೆ. ಇದಕ್ಕೆ ಮೊದಲು ಪುತ್ತೂರು ಸರಕಾರಿ ಆಸ್ಪತ್ರೆಯನ್ನು 300 ಬೆಡ್‌ಗೆ ಏರಿಸಬೇಕು. ಸೂಕ್ತ ಸವಲತ್ತು ಕೊಡಿಸಬೇಕು.

ಶಿಂಗಾಣಿ ಸೇತುವೆ: ಮಂಜಲ್ಪಡ್ಪು ಬಳಿ ಶಿಂಗಾಣಿ ಸೇತುವೆ ನಿರ್ಮಾಣವಾದದ್ದು ನಗರಸಭೆ ಅನುದಾನದಲ್ಲಿ. ಇದರಲ್ಲಿ ಸಮಸ್ಯೆ ಆಗಿದೆ ಎಂದು ಸ್ಥಳೀಯರು ದೂರಿದಾಗ, ಸಹಾಯಕ ಆಯುಕ್ತರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿದ್ದೇನೆ. 5 ಲಕ್ಷ ರೂ. ಅನುದಾನ ನೀಡಿ ರಸ್ತೆ ಸಂಪರ್ಕಕ್ಕೆ ವ್ಯವಸ್ಥೆ ಮಾಡಿ ಕೊಡಲಾಗುವುದು ಎನ್ನುವುದು ನನ್ನ ಉದ್ದೇಶ ಎನ್ನುತ್ತಾರೆ ಶಕುಂತಲಾ ಶೆಟ್ಟಿ ಅವರು.

ಎಸ್ಪಿ ಕಚೇರಿ: ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕು ವ್ಯಾಪ್ತಿ ಎಸ್ಪಿ ಅಧಿಕಾರದ ವ್ಯಾಪ್ತಿ. ವಿಪರ್ಯಾಸ ಎಂದರೆ ಎಸ್ಪಿ ಕಚೇರಿ ಈ ನಾಲ್ಕು ತಾಲೂಕುಗಳಿಂದ ಹೊರಗೆ, ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿದೆ. ಆದ್ದರಿಂದ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ತರಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಲೇ ಇದೆ. ಇದು ಜಿಲ್ಲಾ ಕೇಂದ್ರಕ್ಕೂ ಪೂರಕವಾಗಲಿದೆ. ಪೊಲೀಸ್‌ ತರಬೇತಿ ಕೇಂದ್ರ, ಎಸ್ಪಿ ಕಚೇರಿಗೆ ಜಾಗ ಹುಡುಕುವ ಕೆಲಸ ನಡೆಯುತ್ತಿದೆ.

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next