Advertisement

ಕುರಿ ಸಂತೆಗೆ ಬೇಕಿದೆ ಕಾಯಕಲ್ಪ

03:36 PM Jan 18, 2020 | Naveen |

ಚಳ್ಳಕೆರೆ: ಜಿಲ್ಲೆಯಲ್ಲಿ ಅತಿ ಹೆಚ್ಚು ಕುರಿಗಳು ನಗರದಲ್ಲಿ ವ್ಯಾಪಾರವಾಗುತ್ತದೆ. ಇಲ್ಲಿನ ಮಾರುಕಟ್ಟೆಗೆ ನೆರೆಯ ಆಂಧ್ರ ಪ್ರದೇಶದಿಂದಲೂ ಹೆಚ್ಚಿನ ವರ್ತಕರು ಆಗಮಿಸುತ್ತಾರೆ. ಆದರೆ ಕಂಬಳಿ ಮಾರುಕಟ್ಟೆಗೆ ಹೆಚ್ಚು ಒತ್ತು ನೀಡಿರುವ ರಾಜ್ಯ ಸರ್ಕಾರ, ಕುರಿ ಸಂತೆ ಅಭಿವೃದ್ಧಿ ಪಡಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ಚಳ್ಳಕೆರೆ ನಗರದಲ್ಲಿ ಪ್ರತಿನಿತ್ಯ ವಿವಿಧ ಭಾಗಗಳಿಂದ ಸುಮಾರು 500ಕ್ಕೂ ಹೆಚ್ಚು ಕುರಿಗಳು ಮಾರಾಟವಾಗುತ್ತಿವೆ. ಅಲ್ಲದೆ ಕೊಂಡುಕೊಳ್ಳುವವರು ಸಂಖ್ಯೆಯೂ ಹೆಚ್ಚು. ವಿಶೇಷವಾಗಿ ಸಂತೆಯ ದಿನವಾದ ಭಾನುವಾರ ಮಾರಾಟವಾಗುವ ಕುರಿಗಳ ಸಂಖ್ಯೆ ಹಾಗೂ ಕುರಿಗಳನ್ನು ಖರೀದಿಸುವವರ ಸಂಖ್ಯೆ ಸುಮಾರು ಒಂದು ಸಾವಿರಕ್ಕಿಂತ ಜಾಸ್ತಿ.

ಇಲ್ಲಿನ ಎಪಿಎಂಸಿ ಮಾರುಕಟ್ಟೆ ಆವರಣಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ ಕುರಿ ಮಾರಾಟಕ್ಕೆ ಉತ್ತೇಜನ ನೀಡಲು ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಮತ್ತು ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ಎಸ್‌. ತಿಪ್ಪೇಸ್ವಾಮಿ, ಲಕ್ಷಾಂತರ ರೂ. ವೆಚ್ಚದಲ್ಲಿ ಕುರಿ ಸಂತೆ ಕೇಂದ್ರವನ್ನು 2013ರ ಸೆ. 22ರಂದು ಪ್ರಾರಂಭಿಸಿದರು. ಅಲ್ಲಿ ಕುರಿಗಳನ್ನು ಇಳಿಸಲು, ನೀರು, ಬೇಲಿ ಸೇರಿದಂತೆ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಷ್ಟು ವರ್ಷ ಕಳೆದರೂ ಇದುವರೆಗೂ ಅಲ್ಲಿ ಒಂದೇ ಒಂದು ಕುರಿಯೂ ಕುರಿ ಸಂತೆ ಒಳಗೆ ಪ್ರವೇಶ ಪಡೆದಿಲ್ಲ. ನಿರ್ವಹಣೆ ಕೊರತೆಯಿಂದಾಗಿ ಕುರಿ ಸಂತೆ ಪ್ರದೇಶ ಜಾಲಿ ಗಿಡ, ತಗ್ಗುಗುಂಡಿಯಿಂದ ಹಾಳಾಗಿದೆ. ಅನೇಕ ಬಾರಿ ಈ ಪ್ರದೇಶದಲ್ಲಿ
ಅನೈತಿಕ ಚಟುವಟಿಕೆಗಳೂ ನಡೆಯುತ್ತವೆ ಎಂಬ ಆರೋಪ ಇದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಾಗಲೀ, ಉಣ್ಣೆ ಕಂಬಳಿ ನೇಕಾರರ ಸಂಘದ ಚುನಾಯಿತ ಜನಪ್ರತಿನಿಧಿಗಳಾಗಲೀ ಈ ಬಗ್ಗೆ ಇದುವರೆಗೂ ಗಮನಹರಿಸಿಲ್ಲ. ಪ್ರಸ್ತುತ ನಗರದ ಬಳ್ಳಾರಿ ರಸ್ತೆಯಲ್ಲಿ ರಸ್ತೆಯ ಮೇಲೆಯೇ ಕುರಿಗಳ ವ್ಯಾಪಾರ ನಡೆಯುತ್ತಿದೆ. ಇದರಿಂದ ವಾಹನ ಸಂಚಾರ ಹಾಗೂ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಕೂಡಲೇ ಕ್ಷೇತ್ರದ ಶಾಸಕರು ಎಪಿಎಂಸಿ ಕುರಿ ಸಂತೆ ಅಭಿವೃದ್ಧಿಗೆ ಮುಂದಾಗಬೇಕಿದೆ.

ನಗರದಲ್ಲಿ ಕುರಿ ವ್ಯಾಪಾರ ಮಾರುಕಟ್ಟೆ ಇಲ್ಲದ ಕಾರಣ
ಪ್ರತಿ ಗುರುವಾರ ಚಿತ್ರದುರ್ಗದಲ್ಲಿ ನಡೆಯುವ ಕುರಿ ಮಾರುಕಟ್ಟೆಗೆ
ಈ ಪ್ರದೇಶದ ಸಾವಿರಾರು ಕುರಿಗಳನ್ನು ಕರೆದೊಯ್ಯಲಾಗುತ್ತದೆ. ಆಂಧ್ರಪ್ರದೇಶದಿಂದಲೂ ಸಹ ಕುರಿಗಳನ್ನು ಮಾರಾಟಕ್ಕೆ ತರಲಾಗುತ್ತಿದೆ. ಚಳ್ಳಕೆರೆಯಲ್ಲಿ ಸುಸಜ್ಜಿತ ಕುರಿ ಮಾರುಕಟ್ಟೆ ಕಾರ್ಯ ನಿರ್ವಹಿಸಿದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ.
ಮಹೇಶ್‌ಕುಮಾರ್‌,
ಕುರಿ ವ್ಯಾಪಾರಿ

Advertisement

ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕುರಿ ಸಂತೆ ನಗರದಿಂದ ಬಹಳಷ್ಟು ದೂರವಿದೆ. ಅಲ್ಲಿಗೆ ಕುರಿ ಮಾರುವವರು ಕುರಿಗಳೊಂದಿಗೆ ಹೋಗಲು ಸಾಧ್ಯವಾಗುವುದಿಲ್ಲ. ಕುರಿಗಳ ಮಾರಾಟಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಹೆಚ್ಚಿನ ದರ ಸಿಗುವ ಸಂಭವವೂ ಇಲ್ಲ. ಆದ್ದರಿಂದ ಚಿತ್ರದುರ್ಗಕ್ಕೆ ಕುರಿಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯೇ ವ್ಯವಸ್ಥೆ ಕಲ್ಪಿಸಿದಲ್ಲಿ ಉತ್ತಮ.
ಈ. ಬಾಲರಾಜು ಕುರಿಗಾಹಿ,
ಚನ್ನಮ್ಮನಾಗತಿಹಳ್ಳಿ

„ಕೆ.ಎಸ್‌. ರಾಘವೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next