ಚಳ್ಳಕೆರೆ: ಮಹಾತ್ಮ ಗಾಂಧೀಜಿಯವರ ಕನಸು ನನಸಾಗಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಶಾಸಕ ಟಿ. ರಘುಮೂರ್ತಿ ಕರೆ ನೀಡಿದರು.
ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಕೋವಿಡ್ ವೈರಾಣು ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ವೈರಾಣು ನಿಯಂತ್ರಣದಲ್ಲಿ ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಮೂಡಿಸುವ ಹಾಗೂ ಗ್ರಾಮ ನೈರ್ಮಲ್ಯ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವುದು ಶ್ಲಾಘನೀಯ ಎಂದರು. ಪ್ರತಿ ಗ್ರಾಮ ಪಂಚಾಯತ್ ಹಂತದಲ್ಲಿ ಜಾಲಿ ತೆಗೆಸುವ, ತಿಪ್ಪೆಗುಂಡಿ ತೆರವುಗೊಳಿಸುವ, ಚರಂಡಿಗಳ ಸ್ವಚ್ಛತೆ ಹಾಗೂ ಕುಡಿಯುವ ನೀರು ಸಮಸ್ಯೆಯ ಬಗ್ಗೆ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಶಾಸಕರು ಚರ್ಚೆ ನಡೆಸಿದರು. ಗ್ರಾಮೀಣ ಮಟ್ಟದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ಅರಿತು ಗ್ರಾಮೀಣ ಭಾಗದ ಜನರ ವಿಶ್ವಾಸ ಗಳಿಸಿ ಕಾರ್ಯ ನಿರ್ವಹಿಸಬೇಕು. ಆಗ ಯಾವುದೇ ಸಮಸ್ಯೆ ಉದ್ಭವಿಸದು ಎಂದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಸರ್ಕಾರ ವಿವಿಧ ವೇತನಗಳು ಸಕಾಲದಲ್ಲಿ ದೊರೆಯುತ್ತಿಲ್ಲ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಹಾಗೂ ಅಂಚೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ 20 ಗ್ರಾಮ ಪಂಚಾಯತ್‌ಗಳ ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು, ಕುಡಿಯುವ ನೀರು ಸರಬರಾಜು ಇಲಾಖೆ, ತೋಟಗಾರಿಕೆ, ಬೆಸ್ಕಾಂ, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ವರದಿ ನೀಡಿದರು.
ತಾಪಂ ಇಒ ಡಾ| ಶ್ರೀಧರ್ ಐ. ಬಾರಕೇರ್, ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ತಾಲೂಕು ಆರೋಗ್ಯಾಧಿಕಾರಿ ಡಾ| ಎನ್. ಪ್ರೇಮಸುಧಾ, ಪೋಸ್ಟ್ ಮಾಸ್ಟರ್ ರಾಧಾಕೃಷ್ಣ, ಬಿಇಒ ವೆಂಕಟೇಶ್, ಎಎಸ್‌ಒ ಸತೀಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.