ಚಳ್ಳಕೆರೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಳೆದ 11 ದಿನಗಳಿಂದ ವಾಸ್ತವ್ಯ ಮಾಡಿದ್ದ ಉತ್ತರಕರ್ನಾಟಕದ ವಿವಿಧ ಜಿಲ್ಲೆಗಳ ಸುಮಾರು 178 ಕೂಲಿ ಕಾರ್ಮಿಕರನ್ನು ಸರ್ಕಾರದ ನಿರ್ದೇಶನದ ಮೇರೆಗೆ ಶುಕ್ರವಾರ ತಡರಾತ್ರಿ ಅವರ ಸ್ವಸ್ಥಾನಗಳಿಗೆ ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು.
ಕೂಲಿ ಕಾರ್ಮಿಕರನ್ನು ಬೀಳ್ಕೊಡುವ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ. ರಘುಮೂರ್ತಿ, ಅನಿವಾರ್ಯ ಕಾರಣಗಳಿಂದ ನೀವೆಲ್ಲರೂ ನಮ್ಮ ಅತಿಥಿಗಳಾಗಿ ಇಲ್ಲಿ ಇರುವಂತಾಗಿತ್ತು. ಸರ್ಕಾರ ನಿಮ್ಮನ್ನು ಊರುಗಳಿಗೆ ಕಳುಹಿಸಿಕೊಡಲು ಆದೇಶ ನೀಡಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮೇರೆಗೆ ನಿಮ್ಮನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಮೂಲಕ ನಿಮ್ಮ ಊರುಗಳಿಗೆ ತಲುಪಿಸಲಾಗುತ್ತದೆ. ಕೋವಿಡ್ ವೈರಾಣು ವ್ಯಾಪಿಸದಂತೆ ನಿಮ್ಮನ್ನು ಸುರಕ್ಷಿತವಾಗಿಡಲಾಗಿತ್ತು. ಈಗ ಯಾವುದೇ ಆತಂಕವಿಲ್ಲದೆ ನೀವು ನಿಮ್ಮ ಊರುಗಳನ್ನು ಸೇರಬಹುದು ಎಂದರು.
ಶಹಾಪುರ ತಾಲೂಕಿನ ಹೊಸಕೆರೆ ಗ್ರಾಮದ ಮಲ್ಲಪ್ಪ ದೊಡ್ಡಮನೆ ಮಾತನಾಡಿ, ನಮಗೆ ಇಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗಲಿಲ್ಲ. ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಲಾಗಿದೆ. ಆದರೆ ನಮ್ಮ ಜಮೀನು, ಹಿರಿಯರು, ಕುಟುಂಬದಿಂದ ದೂರವಾಗಿದ್ದೆವು. ಇದು ನಮಗೆಲ್ಲರಿಗೂ ನೋವು ತಂದಿತ್ತು. ಈಗ ಊರಿಗೆ ಹೋಗಲು ಸಂತಸವಾಗುತ್ತಿದೆ ಎಂದು ಹೇಳಿದರು.
ಇದೇ ಗ್ರಾಮದ ದೇವೇಂದ್ರ ಹೊಸಮನಿ ಮಾತನಾಡಿ, ಇಲ್ಲಿನ ವ್ಯವಸ್ಥೆ ತುಂಬಾ ಚೆನ್ನಾಗಿದೆ. ವಿಶಾಲವಾದ ಜಾಗದಲ್ಲಿ ನಮಗೆ ಆಶ್ರಯ ಮತ್ತು ಅನ್ನ ಕೊಟ್ಟಿದ್ದೀರಿ. ಶಾಸಕರು ಎರಡ್ಮೂರು ಬಾರಿ ನಮ್ಮೊಡನೆ ಮಾತನಾಡಿದ್ದಾರೆ. ಇಂತಹ ಊರಿನಲ್ಲಿ 11 ದಿನ ಇರುವ ಭಾಗ್ಯ ನಮಗೆ ದೊರಕಿದ್ದು ನಮ್ಮ ಪುಣ್ಯ ಎಂದರು. ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್, ಮೊಳಕಾಲ್ಮೂರು ತಹಶೀಲ್ದಾರ್ ಬಸವರಾಜು, ತಾಪಂ ಇಒ ಡಾ| ಶ್ರೀಧರ್ ಐ. ಬಾರಕೇರ್, ಡಾ| ಪಿ.ಎನ್.ನಾಗರಾಜು, ಕಾರ್ಮಿಕ ಅ ಧಿಕಾರಿ ಶಫೀವುಲ್ಲಾ, ಶಿಶು ಅಭಿವೃದ್ಧಿ ಅಧಿಕಾರಿ ಮೋಹನ್‌ಕುಮಾರ್, ವಾರ್ಡನ್ ವಸಂತಕುಮಾರಿ, ಆರೋಗ್ಯ ಇಲಾಖೆಯ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ಇಲ್ಲಿ ನೀಡಿದ ಸೌಲಭ್ಯ ಮರೆಯಲಾಗದು
ನನಗೆ ಮೂರು ಬಾರಿ ಮಹಿಳಾ ವೈದ್ಯರು ಆರೋಗ್ಯ ಪರೀಕ್ಷೆ ನಡೆಸಿದ್ದಾರೆ. ಇಲ್ಲಿರುವ ಎಲ್ಲಾ ಅಧಿಕಾರಿಗಳು ಹಾಗೂ ಮಹಿಳಾ ಅಧಿ ಕಾರಿಗಳು ನಮ್ಮ ಯೋಗಕ್ಷೇಮದ ಬಗ್ಗೆ ಗಮನ ಹರಿಸಿದ್ದಾರೆ. ಅನಿವಾರ್ಯವಾಗಿ ನಾವು ನಮ್ಮೂರಿಗೆ ತೆರಳಬೇಕಿದೆ. ಇಲ್ಲಿ ನೀಡಿದ ಎಲ್ಲಾ ಸೌಲಭ್ಯಗಳನ್ನೂ ನಾವು ಯಾವಾಗಲೂ ನೆಪಿಸಿಕೊಳ್ಳುತ್ತೇವೆ ಎಂದು ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಗರ್ಭಿಣಿ ಹನುಮಂತಿ ಕಾವಲೀರ ತಿಳಿಸಿದರು.