ಚಳ್ಳಕೆರೆ: ಕೊರೊನಾ ವೈರಾಣು ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಭಾಗದಿಂದ ಸಾರ್ವಜನಿಕರು ಆಗಮಿಸಿದರೂ ಅವರನ್ನು ಸರ್ಕಾರಿ ಸಾಮ್ಯದ ಹಾಸ್ಟೆಲ್‌ನಲ್ಲಿ ಇರಿಸಿ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ ಎಂದು ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ರಾಮನಗರದಿಂದ ರಾಯಚೂರು ಜಿಲ್ಲೆಗೆ ತೆರಳುತ್ತಿದ್ದ 45ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ವಾಹನ ತಡೆದ ಇಲ್ಲಿನ ಪೊಲೀಸರು, ತಪಾಸಣೆ ನಡೆಸಿದರು. ಅವೆರಲ್ಲರನ್ನೂ ವಶಕ್ಕೆ ಪಡೆದು ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ಇರಿಸಲಾಗಿದೆ ಎಂದರು. ಶಾಸಕ ರಘುಮೂರ್ತಿ ಹಾಸ್ಟೆಲ್‌ಗೆ ಭೇಟಿ ನೀಡಿ ಕೂಲಿ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದರು.
ಅನಿವಾರ್ಯ ಕಾರಣಗಳಿಂದ ನಿಮ್ಮನ್ನು ಇಲ್ಲಿ ತಾತ್ಕಾಲಿಕವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸರ್ಕಾರ ಈಗಾಗಲೇ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಯಾವುದೇ ವ್ಯಕ್ತಿಗಳು ಹೊರ ಜಿಲ್ಲೆಗಳಿಂದ ಬಂದಲ್ಲಿ ವಿಚಾರಣೆ ನಡೆಸಿ ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಬಿಡುಗಡೆಗೊಳಿಸಲಾಗುವುದು ಎಂದರು.
ಶಾಸಕರಲ್ಲಿ ತಮ್ಮ ಅಳಲನ್ನು ತೋಡಿಕೊಂಡ ಕೂಲಿ ಕಾರ್ಮಿಕರು, ರಾಮನಗರ ಸುತ್ತಮುತ್ತ ಮೋಡ್ಲಿಂಗ್ ಕಾರ್ಯವನ್ನು ಮಾಡುತ್ತಿದ್ದೆವು. ಅಲ್ಲಿನ ಡಿವೈಎಸ್ಪಿಯವರ ಅನುಮತಿ ಪಡೆದು ರಾಯಚೂರಿಗೆ ಪ್ರಯಾಣ ಬೆಳೆಸುತ್ತಿದ್ದೆವು. ಆದರೆ ಇಲ್ಲಿನ ಪೊಲೀಸರು ನಮ್ಮನ್ನು ತಡೆದಿದ್ದಾರೆ. ದಯಮಾಡಿ ನಮಗೆ ಊರಿಗೆ ಹೋಗಲು ಅನುಮತಿ ನೀಡಬೇಕೆಂದು ಮನವಿ ಮಾಡಿದರು. ತಾಪಂ ಇಒ ಡಾ| ಶ್ರೀಧರ್
ಐ. ಬಾರಕೇರ್ ಇತರರು ಇದ್ದರು.