Advertisement

ಚಕ್ಕುಲಿ ಸ್ಪೆಷಲ್‌

06:00 AM Aug 31, 2018 | |

ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತೆ ಬಂದಿದೆ. ನಮ್ಮೂರಿನಲ್ಲಿ ಈ ಹಬ್ಬವನ್ನು ಸಂಭ್ರಮ, ಸಡಗರ, ಭಕ್ತಿಭಾವಗಳಿಂದ ಆಚರಿಸುತ್ತೇವೆ. ಕೃಷ್ಣನಿಗೆ ಪ್ರಿಯವಾದ ಚಕ್ಕುಲಿ, ಕೋಡುಬಳೆ, ವಿವಿಧ ಬಗೆಯ ಲಡ್ಡುಗಳನ್ನು ಮಾಡಿ ನೈವೇದ್ಯ ಮಾಡಿ ನಂತರ ತಿಂದು ಸಂಭ್ರಮಿಸುತ್ತೇವೆ. ಈ ಬಾರಿ ಹಲವು ಬಗೆಯ ಚಕ್ಕುಲಿಗಳನ್ನು ಮಾಡಿ ಸವಿಯೋಣ.

Advertisement

ಅವಲಕ್ಕಿ ಚಕ್ಕುಲಿ
ಬೇಕಾಗುವ ಸಾಮಗ್ರಿ :
1 ಕಪ್‌ ಅವಲಕ್ಕಿ , 1/4 ಕಪ್‌ ಗೋಧಿಹಿಟ್ಟು , 1/4 ಕಪ್‌ ಅಕ್ಕಿಹಿಟ್ಟು , 1 ಚಮಚ ಖಾರದ ಪುಡಿ, ಚಿಟಿಕೆ ಇಂಗು, 1 ಚಮಚ ಜೀರಿಗೆ, ಕರಿಯಲು ಬೇಕಾದಷ್ಟು ಎಣ್ಣೆ , ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೊದಲು ಅವಲಕ್ಕಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ಗೋಧಿಹಿಟ್ಟು , ಅಕ್ಕಿಹಿಟ್ಟು , ಉಪ್ಪು , ಜೀರಿಗೆ, ಖಾರದ ಪುಡಿ, 2ರಿಂದ 3 ಚಮಚ ಬಿಸಿ ಎಣ್ಣೆ ಹಾಕಿ ಚೆನ್ನಾಗಿ ಬೆರೆಸಿ. ನಂತರ ಸ್ವಲ್ಪ ನೀರು ಹಾಕಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಚಕ್ಕುಲಿ ಅಚ್ಚಿಗೆ ಸ್ವಲ್ಪ ಹಿಟ್ಟು ಹಾಕಿ ಪೇಪರಿನ ಮೇಲೆ ವೃತ್ತಾಕಾರವಾಗಿ ಚಕ್ಕುಲಿ ಒತ್ತಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆದರೆ ಗರಿಗರಿ ಚಕ್ಕುಲಿ ಕೃಷ್ಣನ ನೈವೇದ್ಯಕ್ಕೆ ಸಿದ್ಧ.

ಪಾಲಕ್‌ ಚಕ್ಕುಲಿ
ಬೇಕಾಗುವ ಸಾಮಗ್ರಿ:
1 ಕಟ್ಟು ಪಾಲಕ್‌ ಸೊಪ್ಪು , 1/2 ಕಪ್‌ ಬೆಳ್ತಿಗೆ ಅಕ್ಕಿ , 1/2 ಕಪ್‌ ಉದ್ದಿನಬೇಳೆ, 1-2 ಹಸಿಮೆಣಸು, ಓಮದಕಾಳು ಸ್ವಲ್ಪ , ರುಚಿಗೆ ತಕ್ಕಷ್ಟು ಉಪ್ಪು , ಕರಿಯಲು ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ: ಪಾಲಕ್‌ ಸೊಪ್ಪನ್ನು  ಚೆನ್ನಾಗಿ ತೊಳೆದು, ಹಸಿಮೆಣಸು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಉದ್ದಿನಬೇಳೆ, ಅಕ್ಕಿಯನ್ನು ಬೇರೆ ಬೇರೆಯಾಗಿ ಹುರಿದು ನುಣ್ಣಗೆ ಪುಡಿ ಮಾಡಿ ನಂತರ ಪಾಲಕ್‌ ಪೇಸ್ಟ್‌ , ಓಮದಕಾಳು, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಚಕ್ಕುಲಿ ಅಚ್ಚಿಗೆ ಹಾಕಿ ಪೇಪರಿನ ಮೇಲೆ ವೃತ್ತಾಕಾರವಾಗಿ ಚಕ್ಕುಲಿ ಒತ್ತಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ಚಕ್ಕುಲಿ ಸವಿಯಲು ಸಿದ್ಧ.

Advertisement

ದಿಢೀರ್‌ ಚಕ್ಕುಲಿ
ಬೇಕಾಗುವ ಸಾಮಗ್ರಿ:
1 ಕಪ್‌ ಅಕ್ಕಿಹಿಟ್ಟು , 1/2 ಕಪ್‌ ಕಡಲೆಹಿಟ್ಟು , 1/4 ಚಮಚ ಅರಸಿನ, 1 ಚಮಚ ಜೀರಿಗೆ, 1/4 ಚಮಚ ಓಮ, 1/2 ಚಮಚ ಕರಿಮೆಣಸು ಪುಡಿ, 1/4 ಕಪ್‌ ಬೆಣ್ಣೆ , ಉಪ್ಪು ರುಚಿಗೆ ತಕ್ಕಷ್ಟು , ಕರಿಯಲು ಬೇಕಾದಷ್ಟು ಎಣ್ಣೆ , ಚಿಟಿಕೆ ಇಂಗು.

ತಯಾರಿಸುವ ವಿಧಾನ: ವೊದಲು ಅಕ್ಕಿಹಿಟ್ಟು , ಕಡಲೆಹಿಟ್ಟನ್ನು ಬೆರೆಸಿ. ನಂತರ ಇದಕ್ಕೆ ಜೀರಿಗೆ, ಓಮ, ಕರಿಮೆಣಸು ಪುಡಿ, ಅರಸಿನ ಪುಡಿ, ಇಂಗು, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಬೆಣ್ಣೆಯನ್ನು ಬಿಸಿ ಮಾಡಿ ಹಾಕಿ, ನಂತರ ಗಂಟಿಲ್ಲದಂತೆ ಕಲಸಿ. ಬಿಸಿನೀರು ಹಾಕಿ ಹಿಟ್ಟು ಕಲಸಿ. 30 ನಿಮಿಷ ನೆನೆಸಿ. ನಂತರ ಕೈಗೆ ಎಣ್ಣೆ ಪಸೆ ಮಾಡಿ ಉಂಡೆ ಮಾಡಿ ಚಕ್ಕುಲಿ ಒರಳಿನಲ್ಲಿ ಹಾಕಿ ಚಕ್ಕುಲಿ ಒತ್ತಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿಗರಿ ಚಕ್ಕುಲಿ ಸವಿಯಲು ಬಲು ರುಚಿ.

ಆಲೂ ಚಕ್ಕುಲಿ 
ಬೇಕಾಗುವ ಸಾಮಗ್ರಿ:
4-5 ಆಲೂಗಡ್ಡೆ , ಅಕ್ಕಿಹಿಟ್ಟು – 3 ಕಪ್‌, 1/2 ಚಮಚ ಇಂಗು, 1 ಚಮಚ ಬೆಣ್ಣೆ, 1/2 ಚಮಚ ಕರಿಮೆಣಸು ಪುಡಿ, ಉಪ್ಪು ರುಚಿಗೆ ತಕ್ಕಷ್ಟು , ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ: ಆಲೂಗಡ್ಡೆಯನ್ನು ಬೇಯಿಸಿ. ನಂತರ ಸಿಪ್ಪೆ ತೆಗೆದು, ಅಕ್ಕಿಹಿಟ್ಟು ಸೇರಿಸಿ ಗಂಟಿಲ್ಲದಂತೆ ಬೆರೆಸಿ. ನಂತರ ಇದಕ್ಕೆ ಇಂಗು, ಖಾರದ ಪುಡಿ, ಕರಿಮೆಣಸು ಪುಡಿ, ಬೆಣ್ಣೆ-ಉಪ್ಪು ಸೇರಿಸಿ ಗಂಟಿಲ್ಲದಂತೆ ಕಲಸಿ. ಚಕ್ಕುಲಿ ಒರಳಿನಲ್ಲಿ ಹಾಕಿ ಚಕ್ಕುಲಿ ಒತ್ತಿ ಕಾದ ಎಣ್ಣೆಯಲ್ಲಿ ಕರಿದರೆ ಗರಿ ಗರಿಯಾದ ಆಲೂ ಚಕ್ಕುಲಿ ಸಿದ್ಧ.
ಮುಳ್ಳುಸೌತೆ ಚಕ್ಕುಲಿ

ಬೇಕಾಗುವ ಸಾಮಗ್ರಿ: 3 ಕಪ್‌ ತುರಿದ ಎಳೆ ಮುಳ್ಳುಸೌತೆ, 2 ಕಪ್‌ ಬೆಳ್ತಿಗೆ ಅಕ್ಕಿ , 1 ಚಮಚ ಜೀರಿಗೆ, 1/4 ಕಪ್‌ ಬೆಣ್ಣೆ , ಕರಿಯಲು ಬೇಕಾದಷ್ಟು ಎಣ್ಣೆ ,  ಉಪ್ಪು ರುಚಿಗೆ ತಕ್ಕಷ್ಟು .
ತಯಾರಿಸುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ತೊಳೆದು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ. ನಂತರ ಬಾಣಲೆಯನ್ನು ಹಾಕಿ ಪರಿಮಳ ಬರುವವರೆಗೆ ಹುರಿದು ಕೆಳಗಿಳಿಸಿ. ನಂತರ ತುರಿದ ಮುಳ್ಳುಸೌತೆ ಬಾಣಲೆಗೆ ಹಾಕಿ ನೀರು ಆರುವವರೆಗೆ ಬೇಯಿಸಿ ಇಳಿಸಿ. ನಂತರ ಇದಕ್ಕೆ ಹುರಿದ ಅಕ್ಕಿಹಿಟ್ಟು , ಉಪ್ಪು , ಜೀರಿಗೆ, ಬೆಣ್ಣೆ ಹಾಕಿ. ಗಟ್ಟಿ ಹಿಟ್ಟು ಮಾಡಿ ಚಕ್ಕುಲಿ ಒತ್ತಿ ಕಾದ ಎಣ್ಣೆಯಲ್ಲಿ ಹಾಕಿ ಕರಿದರೆ ಗರಿಗರಿ ಘಮಘಮಿಸುವ ಚಕ್ಕುಲಿ ಸವಿಯಲು ಸಿದ್ಧ.

ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next