Advertisement

ಚಕ್ರಬಾವಿ ಕೆರೆ ಮಣ್ಣಿಗೆ ಕನ್ನ: ಕ್ರಮಕ್ಕೆ ಆಗ್ರಹ

02:54 PM Nov 30, 2022 | Team Udayavani |

ಮಾಗಡಿ: ಕೆಲವು ತಿಂಗಳ ಹಿಂದೆ ಸುರಿದ ಮಳೆಯಿಂದ ತಾಲೂಕಿನ ಬಹುತೇಕ ಕೆರೆಗಳು ಈಗ ಭರ್ತಿಯಾಗಿದೆ. ಇಟ್ಟಿಗೆ ತಯಾರಿಕೆ ಮಾಡಲು ಕೆರೆ ಮಣ್ಣು ಅವಶ್ಯಕವಾಗಿ ಬೇಕಾಗಿರುವುದರಿಂದ ಈಗ ಚಕ್ರಬಾವಿ ಕೆರೆ ಖಾಲಿ ಇರುವುದರಿಂದ ಹೆಗ್ಗಿಲ್ಲದೆ ಮಣ್ಣನ್ನು ಹೊಡೆಯುತ್ತಿದ್ದರೂ, ಅಧಿಕಾರಿಗಳು ಕಂಡು ಕಾಣದಂತೆ ಜಾಣಕುರುಡು ಪ್ರದರ್ಶಿಸಿದ್ದಾರೆ.

Advertisement

ಈಗ ಮಣ್ಣಿನ ಇಟ್ಟಿಗೆಗೆ ಸಾಕಷ್ಟು ಬೇಡಿಕೆ ಇದೆ. ಆದ್ದರಿಂದ ಎಲ್ಲೆಂದರಲ್ಲಿ ಇಟ್ಟಿಗೆ ಕಾರ್ಖಾನೆಗಳು ತಲೆಯೆತ್ತಿವೆ. ಇವರಿಗೆ ಹಗ್ಗದ ಬೆಲೆಯಲ್ಲಿ ಗುಣಮಟ್ಟದ ಮಣ್ಣುಗಳು ಸಿಗಬೇಕು. ಇದಕ್ಕಾಗಿ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ ಎಲ್ಲಾ ಕೆರೆಗಳು ಭರ್ತಿಯಾಗಿರುವುದರಿಂದ ಮಣ್ಣಿಗೆ ಬಾರಿ ಬೇಡಿಕೆಯಿದೆ. ಹೀಗಾಗಿ, ಕೆಂಪೇಗೌಡರು ಕಟ್ಟಿಸಿರುವ ಐತಿಹಾಸಿಕ ಚಕ್ರಬಾವಿ ಕೆರೆ ಹಲವು ವರ್ಷಗಳಿಂದ ನೀರು ತುಂಬದಿರುವ ಕಾರಣ, ಎಲ್ಲಾ ಇಟ್ಟಿಗೆ ಕಾರ್ಖಾನೆಯವರು ಈ ಕೆರೆಯ ಮೇಲೆ ಕಣ್ಣಿಟ್ಟಿದ್ದು, ಮನಸೋ ಇಚ್ಚೆ ಬಗೆದು ತಮಗೆ ಬೇಕಾದಷ್ಟು ಮಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದರೂ, ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದ್ದಾರೆ.

ಸಣ್ಣ ನೀರಾವರಿ ಇಲಾಖೆಯೇ ಹೊಣೆ: ಕೆರೆಗಳ ರಕ್ಷಣೆ ಮಾಡುವುದು ಸಣ್ಣ ನೀರಾವರಿ ಇಲಾಖೆಯ ಜವಾಬ್ದಾರಿ. ಸಣ್ಣ ನೀರಾವರಿ ಇಲಾಖೆಯವರು ಕಾಟಾಚಾರಕ್ಕೆ ಎಂಬಂತೆ ಕೆರೆಗೆ ಸ್ವಲ್ಪ ಹಣ ಹಾಕಿ, ಅಭಿವೃದ್ಧಿ ಮಾಡಿದ್ದೇವೆ ಎಂದು ತಮ್ಮ ದಾಖಲೆಯಲ್ಲಿ ದಾಖಲಿಸಿಕೊಳ್ಳುತ್ತಾರೆ.  ನಂತರ ಕೆರೆ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಕೂಡ ಗಮನಹರಿಸುವುದಿಲ್ಲ.

ಸ್ಥಳೀಯ ಗ್ರಾಮ ಪಂಚಾಯಿತಿಯವರು ತಮ್ಮ ವ್ಯಾಪ್ತಿಗೆ ಬರುವ ಕೆರೆಗಳ ರಕ್ಷಣೆ ಮಾಡುವುದು ಅವರ ಜವಾಬ್ದಾರಿ. ಆದರೆ, ಗ್ರಾಮ ಪಂಚಾಯಿತಿಯವರು ಕೂಡ ಇದನ್ನು ಲೆಕ್ಕಿಸದೆ, ಯಾರು ಬೇಕಾದರೂ ಮಣ್ಣನ್ನು ತೆಗೆದುಕೊಂಡು ಹೋಗುವುದು ಎಂದು ಕೈಕಟ್ಟಿ ಕುಳಿತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕಾರ್ಖಾನೆ ಮಾಲಿಕರು, ಲೋಡುಗಟ್ಟಲೆ ಮಣ್ಣುಗಳನ್ನು ಬೆಳಗ್ಗೆಯಿಂದ ರಾತ್ರಿಯವರೆಗೂ ತೆಗೆದುಕೊಂಡರು ಹೋಗುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಜನರಿಂದ ಕೇಳಿಬಂದಿದೆ.

ಚಕ್ರಬಾವಿ ಕೆರೆಗೆ ನೀರಿಲ್ಲ: ನಾಡಪ್ರಭು ಕೆಂಪೇಗೌಡರು ಕಟ್ಟಿಸಿರುವ ಐತಿಹಾಸಿಕ ಚಕ್ರಬಾವಿ ಕೆರೆಗೆ ಕಳೆದ 30 ವರ್ಷದಿಂದ ನೀರು ಬಂದಿಲ್ಲ. ಇಟ್ಟಿಗೆ ಕಾರ್ಖಾನೆಯವರು ಹಲವು ವರ್ಷದಿಂದ ಬೇಕಾಬಿಟ್ಟಿ ಕೆರೆಯ ಮಣ್ಣುಗಳನ್ನು ಇಟ್ಟಿಗೆ ಕಾರ್ಖಾನೆಗೆ ಹೊಡೆದುಕೊಂಡು, ಕೆರೆ ಈಗ ಗುಂಡಿಗಳಾಗಿ ಕೆರೆ ಅಂಗಳಕ್ಕೆ ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

Advertisement

ಕೆರೆಗೆ ಮಣ್ಣು ಹೊಡೆದುಕೊಳ್ಳುತ್ತೇವೆ ಎಂದು ಟಿಪ್ಪರ್‌ ಲಾರಿಗಳಲ್ಲಿ ಮಣ್ಣು ಹೊಡೆಯುತ್ತಿರುವುದರಿಂದ ರಸ್ತೆಗಳು ಗುಂಡಿಗಳಾಗಿ, ಹಾಳಾಗಿ ಹೋಗುತ್ತಿದೆ. ಕೂಡಲೇ ಅಧಿಕಾರಿಗಳು ಮಣ್ಣು ಹೊಡೆಯುವ ಇಟ್ಟಿಗೆ ಮಾಲಿಕರ ವಿರುದ್ಧ ನೋಟಿಸ್‌ ನೀಡಿ, ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಮತ್ತೆ ಕೆರೆ ಮಣ್ಣನ್ನು ತೆಗೆಯದಂತೆ ಎಚ್ಚರಿಕೆ ನೀಡಬೇಕು. ಇಲ್ಲವಾದರೆ ಇವರ ಲಾಭಕ್ಕೆ ಸಾರ್ವಜನಿಕರ ರಸ್ತೆ ಹಾಳಾಗುತ್ತದೆ. ಇದನ್ನು ಸರಿಪಡಿಸಲು ಶಾಸಕರಿಗೆ ಒತ್ತಡ ಬರುತ್ತದೆ. ಸಾರ್ವಜನಿಕರ ತೆರಿಗೆ ಹಣ ಈ ರೀತಿ ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಇನ್ಮುಂದೆ ಇಟ್ಟಿಗೆ ಕಾರ್ಖಾನೆಗಳಿಗೆ ಮಣ್ಣು ಹೊಡಿಯಲು ಅವಕಾಶ ಕೊಡಬಾರದು ಎಂದು ಬಿಜೆಪಿ ತಾಲೂಕು ರೈತ ಸಂಘದ ಅಧ್ಯಕ್ಷ ಚಕ್ರಬಾವಿ ಜಗದೀಶ್‌ ಆಗ್ರಹಿಸಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿಯವರು ಕೂಡಲೇ ಕೆರೆಗೆ ಭೇಟಿ ನೀಡಿ, ಸ್ಥಳೀಯ ಇಟ್ಟಿಗೆ ಕಾರ್ಖಾನೆ ಮಾಲಿಕರಿಗೆ ನೋಟಿಸ್‌ ನೀಡಿ, ಕೆರೆಯ ಮಣ್ಣು ತೆಗೆದುಕೊಂಡು ಹೋಗದಂತೆ ರಕ್ಷಣೆ ಮಾಡಬೇಕು ಎಂದು ಚಕ್ರಬಾವಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next