ಮೂಡುಬಿದಿರೆ: ಕಳೆದ ಆ. 15ರಂದು ಮೂಡುಬಿದಿರೆ ಮತ್ತು ಸೆ. 2ರಂದು ಮೂಡುಮಾರ್ನಾಡು ಬಸದಿ ಬಳಿ ವೃದ್ಧೆಯರ ಕುತ್ತಿಗೆಯಿಂದ ಚಿನ್ನದ ಸರ ಸೆಳೆದು ಪರಾರಿಯಾದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಸೆರೆಹಿಡಿದಿದ್ದಾರೆ.
ಮೂಡುಬಿದಿರೆಯ ನಿರ್ಮಲಾ ಪಂಡಿತ್ (70) ಇವರ ಕುತ್ತಿಗೆಯಿಂದ 24 ಗ್ರಾಂ. ಚಿನ್ನದ ಸರ ಮತ್ತು ಮೂಡುಮಾರ್ನಾಡು ಬಸದಿ ಬಳಿ ಪ್ರೇಮಾ (82) ಇವರ ಕುತ್ತಿಗೆಯಲ್ಲಿದ್ದ ಮೂರು ಪವನ್ ತೂಕದ ಚಿನ್ನದ ಸರವನ್ನು ಸ್ಕೂಟರ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕಸಿದು ಪರಾರಿಯಾಗಿದ್ದರು.
ಸರ ಕಳ್ಳತನ ಪ್ರಕರಣದ ಓರ್ವ ಆರೋಪಿ ಹಸನ್ ಹಬೀಬ್ ಹಸನ್ ಯಾನೆ ಚಬ್ಬಿ ಯಾನೆ ಚೆಂಬುಗುಡ್ಡೆ ಹಬ್ಬಿ (42) ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 44ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಕಾರಣ ಈತನ ಮೇಲೆ ಉಳ್ಳಾಲ ಠಾಣೆಯಲ್ಲಿ 5 ದಸ್ತಗಿರಿ ವಾರೆಂಟ್ ಸಹಿತ ಒಟ್ಟಾರೆ 15 ದಸ್ತಗಿರಿ ವಾರೆಂಟ್‌ಗಳಿವೆ.
ಇನ್ನೊಬ್ಬ ಆರೋಪಿ ಬಂಟ್ವಾಳ ತಾಲೂಕಿನ ಜೋಡುಮಾರ್ಗ ಅದ್ಯಾಡಿ ಮನೆಯ ಉಮ್ಮರ್ ಸಿಯಾಫ್ ಚಿಯಾ (29) ಬಂಟ್ವಾಳ ಠಾಣೆಯಲ್ಲಿ ಈ ಮೊದಲು ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.
ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ, ಡಿಸಿಪಿ ಸಿದ್ಧಾರ್ಥ ಗೊಯಲ್, ಡಿಸಿಪಿ ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್ ಕೆ. ಅವರ ನಿರ್ದೇಶನದಂತೆ, ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಅವರ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿತ್ತು.