ತನ್ನ ವಿಭಿನ್ನ ಟೈಟಲ್ ಮೂಲಕವೇ ಒಂದಷ್ಟು ಮಂದಿಯ ಗಮನ ಸೆಳೆದಿದ್ದ “ಚಡ್ಡಿದೋಸ್ತ್ ಕಡ್ಡಿಅಲ್ಲಾಡುಸ್ಬುಟ್ಟ’ ಚಿತ್ರ ಈ ವಾರ ತೆರೆಗೆ ಬಂದಿದೆ. ಇನ್ನು “ಚಡ್ಡಿದೋಸ್ತ್ ಕಡ್ಡಿಅಲ್ಲಾಡುಸ್ಬುಟ್ಟ’ ಚಿತ್ರದ ಟೈಟಲ್ಲೇ ಹೇಳುವಂತೆ ಇದು ಇಬ್ಬರು ಚಡ್ಡಿದೋಸ್ತ್ಗಳ ನಡುವೆ ನಡೆಯುವಂಥ ಕಥೆ. ಎರಡು ವಿಭಿನ್ನ ಮನಸ್ಥಿತಿಯ
ಸ್ನೇಹಿತರ ನಡುವೆ ಒಬ್ಬಳು ಹುಡುಗಿ, ಮತ್ತೂಬ್ಬ ವಿಲನ್ ಅಚಾನಕ್ಕಾಗಿ ಎಂಟ್ರಿಯಾದರೆ ಏನೇನಾಗುತ್ತದೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ.
ಫ್ರೆಂಡ್‌ಶಿಪ್, ಲವ್, ಸೆಂಟಿಮೆಂಟ್, ಕಾಮಿಡಿ ಜೊತೆಗೆ ಒಂದಷ್ಟು ಪೋಲಿಯಾಟದ ನಡುವೆ ನಡೆಯುವ ಚಡ್ಡಿದೋಸ್ತ್ಗಳ ಕಥೆಯಲ್ಲಿ ಕಡ್ಡಿ ಅಲ್ಲಾಡುಸುಟ್ಟವರು ಯಾರು ಅನ್ನೋದು ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗುತ್ತದೆ. ಅದು ಹೇಗೆ ಅನ್ನೋದನ್ನು ನೋಡುವ ಕುತೂಹಲವಿದ್ದರೆ, “ಚಡ್ಡಿದೋಸ್ತ್ ಕಡ್ಡಿಅಲ್ಲಾಡುಸ್ಬುಟ್ಟ’ ಚಿತ್ರವನ್ನು ನೋಡಬಹುದು.
“ಚಡ್ಡಿದೋಸ್ತ್ ಕಡ್ಡಿಅಲ್ಲಾಡುಸ್ಬುಟ್ಟ’ ಚಿತ್ರದ ಕಥೆ ಮತ್ತು ಚಿತ್ರಕಥೆ, ಸಂಭಾಷಣೆ ಎಲ್ಲವೂ ಅಚ್ಚುಕಟ್ಟಾಗಿದ್ದು, ನೋಡುಗರಿಗೆ ಕನೆಕ್ಟ್ ಆಗುವಂತಿದೆ. ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ, ಚಿತ್ರಕಥೆಗೆ ಇನ್ನಷ್ಟು ವೇಗ ಸಿಗುವ ಸಾಧ್ಯತೆಗಳಿದ್ದವು. ಚಿತ್ರದಲ್ಲಿ ಒಬ್ಬ ನಾಯಕ ನಟ ಆಸ್ಕರ್ ಕೃಷ್ಣ ಗಂಭೀರ ಸ್ವಭಾವದ ಸ್ನೇಹಿತನಾಗಿ ಕಾಣಿಸಿಕೊಂಡರೆ, ಮತ್ತೂಬ್ಬ ನಾಯಕ ಲೋಕೇಂದ್ರ ಸೂರ್ಯ ಅಷ್ಟೇ ಪೋಲಿ ಸ್ವಭಾವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಉದ್ದಕ್ಕೂ ಲವಲವಿಕೆಯ ಅಭಿನಯ ನೀಡಿರುವ ಲೋಕೇಂದ್ರ ಸೂರ್ಯ, ತಮ್ಮ ಡೈಲಾಗ್ಸ್ ಮತ್ತು ಮ್ಯಾನರಿಸಂ ಮೂಲಕ ನೋಡುಗರಿಗೆ ಕೂತಲ್ಲೇ ಕಚಗುಳಿ ನೀಡುತ್ತಾರೆ. ಉಳಿದಂತೆ ಮೋಸ ಹೋದ ಹುಡುಗಿಯ ಪಾತ್ರದಲ್ಲಿ ನಾಯಕಿಯಾಗಿ ಗೌರಿ ನಾಯರ್ ಅವರದ್ದು ಅಚ್ಚುಕಟ್ಟು ಅಭಿನಯ. ಇನ್ನು ಚಿತ್ರದಲ್ಲಿ ವಿಲನ್ ರೋಲ್‌ನಲ್ಲಿ ಕಾಣಿಸಿಕೊಂಡಿರುವ ನಿರ್ಮಾಪಕ ಸೆವೆನ್ ರಾಜ್, ತಮ್ಮ ಪಾತ್ರದ ಮೂಲಕ ಒಂದಷ್ಟು ಗಮನ ಸೆಳೆಯುತ್ತಾರೆ. ಅದನ್ನು ಹೊರತುಪಡಿಸಿದರೆ, ಚಿತ್ರದಲ್ಲಿ ಇತರ ಪಾತ್ರಗಳಿಗೆ ಹೆಚ್ಚು ಮಹತ್ವವಿಲ್ಲದಿರುವುದರಿಂದ, ಯಾವ ಪಾತ್ರಗಳೂ ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ.
ಇದನ್ನೂ ಓದಿ:ತಂದೆ-ತಾಯಿ ವಿರುದ್ಧ ದೂರು ನೀಡಿದ ನಟ ದಳಪತಿ ವಿಜಯ್
ಇನ್ನು ಚಿತ್ರದ ತಾಂತ್ರಿಕ ವಿಷಯಗಳ ಬಗ್ಗೆ ಹೇಳುವುದಾದರೆ, ಚಿತ್ರದ ಮೂರು ಹಾಡುಗಳು ಗುನುಗುವಂತಿದೆ. ಹಿನ್ನೆಲೆ ಸಂಗೀತ ಪರವಾಗಿಲ್ಲ ಎನ್ನಬಹುದು. ಆದರೆ ಒಳ್ಳೆಯ ಕಥೆ, ಉತ್ತಮ ನಿರೂಪಣೆ ಇದ್ದರೂ ಅದನ್ನು ಅಚ್ಚುಕಟ್ಟಾದ ಫ್ರೆಮ್‌ನೊಳಗೆ ಕಲರ್‌ಫುಲ್ ಆಗಿ ಕಟ್ಟಿಕೊಡುವಲ್ಲಿ ಚಿತ್ರದ ಛಾಯಾಗ್ರಹಣ ಎಡವಿದಂತಿದೆ.
ಚಿತ್ರದ ಸಂಕಲನ, ಕಲರಿಂಗ್ ಹೀಗೆ ಒಂದಷ್ಟು ತಾಂತ್ರಿಕ ಕಾರ್ಯದ ಕಡೆಗೆ ನಿರ್ದೇಶಕರು ಹೆಚ್ಚಿನ ಗಮನ ಕೊಟ್ಟಿದ್ದರೆ, “ಚಡ್ಡಿದೋಸ್ತ್’ ಗಳ ಕಮಾಲ್ ಅನ್ನು ಇನ್ನೂ ರಂಗಾಗಿಸಬಹುದಿತ್ತು.
ಜಿ.ಎಸ್.ಕಾರ್ತಿಕ ಸುಧನ್