Advertisement
ಏಷ್ಯಾದಲ್ಲಿ ಪ್ರಾದೇಶಿಕವಾಗಿ ಮೇಲುಗೈ ಸಾಧಿಸುವಲ್ಲಿ ಚೀನ ಮತ್ತು ಭಾರತವು ಸತತ ಪೈಪೋಟಿಗಿಳಿದಿವೆ. ಪಾಕಿಸ್ಥಾನದ ಗ್ವಾದರ್ ಬಂದರು ಮೇಲೆ ಚೀನ ನಿಯಂತ್ರಣ ಸಾಧಿಸುತ್ತಿದ್ದಂತೆ ಅದಕ್ಕೆ ಪ್ರತಿತಂತ್ರವಾಗಿ ಭಾರತವು ಇರಾನ್ ಚಾಬಹಾರ್ ಬಂದರು ಕಾರ್ಯಾಚರಣೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
Related Articles
Advertisement
ಏನಿದು ಚಾಬಹಾರ್ ಬಂದರು ಯೋಜನೆ?
ಸುಮಾರು 8 ವರ್ಷಗಳಿಂದ ಇರಾನ್ ಚಾಬಹಾರ್‌ನಲ್ಲಿ ಭಾರತ ಅಭಿವೃದ್ಧಿ ಪಡಿಸುತ್ತಿದ್ದ ಬಂದರಿನ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಇದೀಗ ಇದರ ನಿರ್ವಹಣೆಗೆ ಭಾರತ ಹಾಗೂ ಇರಾನ್ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದನ್ನು ಅಮೆರಿಕ ಹಾಗೂ ಚೀನ ದೇಶಗಳು ವಿರೋಧಿಸಿವೆ. ಮಧ್ಯ ಏಷ್ಯಾದ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯ ದೇಶಗಳನ್ನು ಸಂಪರ್ಕಿಸಲು ಈ ಬಂದರು ಆಯಕಟ್ಟಿನ ಪ್ರದೇಶದಲ್ಲಿರುವುದರಿಂದ ಭಾರತ ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಈಗಾಗಲೇ 550 ಕೋಟಿ ರೂ. ವೆಚ್ಚದಲ್ಲಿ ಭಾರತ ಈ ಬಂದರನ್ನು ಅಭಿವೃದ್ಧಿ ಪಡಿಸಿದ್ದು, 10 ವರ್ಷಗಳ ನಿರ್ವಹಣಾ ಒಪ್ಪಂದದ ಮೂಲಕ ಹೆಚ್ಚುವರಿಯಾಗಿ 900 ಕೋಟಿ ರೂ. ಹೂಡಿಕೆ ಮಾಡಲು ಭಾರತ ಸಿದ್ಧತೆ ನಡೆಸಿದೆ. ಮೇ 13ರಂದು ಉಭಯ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದು, 10 ವರ್ಷಗಳ ಬಳಿಕ ಸ್ವಯಂಚಾಲಿತವಾಗಿ ಈ ಒಪ್ಪಂದ ಮುಂದುವರಿಯಲಿದೆ. ಈ ಬಂದರು ಇರಾನ್‌ಗೂ ಪ್ರಮುಖವಾಗಿದ್ದು, ಇರಾನ್ ದೇಶದ ವ್ಯಾಪಾರ ವೃದ್ಧಿಗೂ ಇದು ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಬಂದರು ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಭಾರತದ ವಿರುದ್ಧ ಅಮೆರಿಕ ಗರಂ
ಚಾಬಹಾರ್ ಬಂದರಿನಲ್ಲಿ ಭಾರತ ಅಭಿವೃದ್ಧಿ ಯೋಜನೆಯನ್ನು ಕೈಗೊಂಡ ಬಳಿಕ ಭಾರತದ ವಿರುದ್ಧ ಮಿತ್ರ ರಾಷ್ಟ್ರ ಅಮೆರಿಕ ಸಹ ಗರಂ ಆಗಿದೆ. ಅಣ್ವಸ್ತ್ರ ಯೋಜನೆಯನ್ನು ಕೈಗೊಂಡ ಕಾರಣಕ್ಕೆ ಇರಾನ್ ವಿರುದ್ಧ ಅಮೆರಿಕ ಆರ್ಥಿಕ ನಿರ್ಬಂಧವನ್ನು ವಿಧಿಸಿತ್ತು. ಅಲ್ಲದೇ ಇರಾನ್ ಜತೆಗೆ ಸಂಪರ್ಕ ಇಟ್ಟುಕೊಳ್ಳುವ ದೇಶದ ಮೇಲೂ ನಿರ್ಬಂಧ ವಿಧಿಸುವ ಎಚ್ಚರಿಕೆಯನ್ನು ನೀಡಿತ್ತು. ಇದಾದ ಬಳಿಕವೂ ಭಾರತ ಚಾಬಹಾರ್‌ನಲ್ಲಿ ತನ್ನ ಅಭಿವೃದ್ಧಿ ಯೋಜನೆಯನ್ನು ಮುಂದುವರಿಸಿತ್ತು. ಇದಕ್ಕೆ ಅಮೆರಿಕ ನೇರವಾಗಿ ಆಕ್ಷೇಪ ವ್ಯಕ್ತಪಡಿಸದಿದ್ದರೂ ಇರಾನ್‌ಗೆ ಬೆಂಬಲ ನೀಡಬಾರದು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡುತ್ತಲೇ ಇತ್ತು. ಆದರೆ ತನ್ನ ರಾಜತಾಂತ್ರಿಕ ತಂತ್ರಗಳ ಮೂಲಕ ಭಾರತ ಇದನ್ನು ಪರಿಹರಿಸಿಕೊಂಡಿತ್ತು.
ಭಾರತದ ವ್ಯಾಪಾರ ವೃದ್ಧಿಗೆ ಅನುಕೂಲ
ಚಾಬಹಾರ್ ಬಂದರು ಗಲ್ಫ್ ಕೊಲ್ಲಿಗೆ ಹತ್ತಿರವಿರುವ ಕಾರಣ ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆ ನಿರಂತರ ಸಂಪರ್ಕ ಸಾಧಿಸಲು ಭಾರತಕ್ಕೆ ಅನುಕೂಲವಾಗಲಿದೆ. ಮಧ್ಯಪ್ರಾಚ್ಯಕ್ಕೆ ಭಾರತ ರಫ್ತು ಮಾಡುವ ಹಾಗೂ ಅಲ್ಲಿಂದ ಆಮದು ಮಾಡಿಕೊಳ್ಳುವ ಸರಕುಗಳನ್ನು ಇಲ್ಲಿ ದಾಸ್ತಾನು ಮಾಡಿಡಬಹುದು. ಹೀಗಾಗಿ ಒಂದೇ ಬಾರಿಗೆ ಸಾಗಣೆ ಮಾಡಬೇಕಾದ ಖರ್ಚು ಭಾರತಕ್ಕೆ ಉಳಿಯಲಿದೆ. ಪೆಟ್ರೋ ಲಿಯಂ ರಾಷ್ಟ್ರಗಳ ಪಕ್ಕದಲ್ಲಿರುವುದು ಭಾರತಕ್ಕೆ ಸದಾ ಅನು ಕೂಲಕರವೇ ಆಗಿರಲಿದೆ. ಪ್ರಸ್ತುತ ದಿನ ಗಳಲ್ಲಿ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಇತ್ತೀಚೆಗೆ ಉಂಟಾಗಿರುವ ಬಿಕ್ಕಟ್ಟು ಗಳಿಂದಾಗಿ ಹಲವು ವ್ಯಾಪಾರ ಮಾರ್ಗಗಳು ಮುಚ್ಚಿ ಹೋಗಿವೆ. ಇಂತಹ ಸಮಯದಲ್ಲಿ ಭಾರತಕ್ಕೆ ಚಾಬಹಾರ್ ಆರ್ಥಿಕವಾಗಿಯೂ ಭಾರತಕ್ಕೆ ಲಾಭ ತಂದುಕೊಡಲಿದೆ.
ಚೀನದ “ಒನ್‌ರೋಡ್’ಗೆ ಭಾರತದ ಉತ್ತರ
ಪಶ್ಚಿಮ ಏಷ್ಯಾದಲ್ಲಿ ಹಿಡಿತ ಸಾಧಿಸಲು ಚೀನ ಒನ್‌ರೋಡ್ ಮೂಲಕ ಪಾಕಿಸ್ಥಾನದ ಗ್ವಾದರನ್ನು ತನ್ನ ವಶಕ್ಕೆ ಪಡೆದಿದೆ. ಪ್ರತಿತಂತ್ರವಾಗಿ ಭಾರತದ ಚಾಬಹಾರ್ ಬಂದರು ಅಭಿವೃದ್ಧಿ ಅನುಕೂಲ ಒದಗಿಸಲಿದೆ. ಏಷ್ಯಾದ ಗಡಿಯಲ್ಲಿರುವ ಯು ರೋ ಪಿನ ದೇಶಗಳು ಹಿಂದೂ ಮಹಾಸಾಗರದ ಸಂಪರ್ಕಕ್ಕೆ ಬರಲು ಈ ಬಂದರು ಕೊಂಡಿಯಾಗಿದೆ. ಅಲ್ಲದೇ ಇದು ಇರಾನ್ ಮೂಲಕ ರಷ್ಯಾವನ್ನು ಸಹ ಸಂಪರ್ಕಿ ಸುವುದರಿಂದ ಏಷ್ಯಾದ ಪಶ್ಚಿಮ ರಾಷ್ಟ್ರಗಳ ಏಕಸ್ವಾಮ್ಯ ಸಾಧಿಸಲು ಹೊರಟಿರುವ ಚೀನಾಗೆ ಇದು ಸಡ್ಡು ಹೊಡೆಯಲಿದೆ.
ಪಾಕ್ ನೆರವಿಲ್ಲದೇ ಮಧ್ಯ ಏಷ್ಯಾಕ್ಕೆ ಸಂಪರ್ಕ
ಮಧ್ಯ ಏಷ್ಯಾ ರಾಷ್ಟ್ರಗಳಾದ ಕಜಕಿಸ್ಥಾನ್, ಕಿರ್ಗಿಸ್ಥಾನ್, ತಜಕಿ ಸ್ಥಾನ್, ತುರ್ಕೆಮೆನಿಸ್ಥಾನ್ ಮತ್ತು ಉಜ್ಬೇಕಿಸ್ಥಾನ್‌ಗಳೊಂದಿಗೆ ಭಾರತ ಸಂಪರ್ಕ ಸಾಧಿಸಲು ಈ ಬಂದರು ನೆರವಾಗುತ್ತದೆ. ಹಿಮಾಲಯ ದಾಟಿ ಚೀನ ಮುಖಾಂತರ ಈ ದೇಶಗಳಿಗೆ ತಲುಪುವುದಕ್ಕಿಂತ ಇರಾನ್ ಮೂಲಕ ಈ ದೇಶಗಳನ್ನು ತಲುಪುವುದು ಭಾರತಕ್ಕೆ ಖರ್ಚಿನ ಲೆಕ್ಕದಲ್ಲಿ ಕಡಿಮೆಯಾಗಲಿದೆ. ಅಲ್ಲದೇ ಪಾಕಿಸ್ಥಾನದ ಸಂಪರ್ಕವೇ ಇಲ್ಲದೇ ಭಾರತ ಈ ದೇಶಗಳೊಂದಿಗೆ ಸಂಪರ್ಕ ಸಾಧಿಸಬಹುದದಾಗಿದೆ.
ಭವಿಷ್ಯದಲ್ಲಿ ಭಾರತಕ್ಕೆ ಅನುಕೂಲ
ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟುಗಳು ಉಂಟಾಗುತ್ತಿರುತ್ತವೆ. ಹೀಗಾಗಿ ವ್ಯಾಪಾರದ ದೃಷ್ಟಿಯಿಂದ ಇದು ಭಾರತಕ್ಕೆ ಸಹಕಾರಿ
ಮಧ್ಯ ಏಷ್ಯಾದ ರಾಷ್ಟ್ರಗಳು ಸಮುದ್ರದ ಸಂಪರ್ಕ ಪಡೆದುಕೊಳ್ಳಲು ಭಾರತದ ನೆರವು ಕೋರಲಿವೆ.
ಈಗಾಗಲೇ ಅಫ್ಘಾನಿಸ್ಥಾನಕ್ಕೆ ಭಾರತ ರಸ್ತೆ ನಿರ್ಮಾಣ ಮಾಡಿದ್ದು, ಇದನ್ನು ಉಳಿದ ದೇಶಗಳಿಗೂ ವಿಸ್ತರಿಸಿ ವ್ಯಾಪಾರ ವೃದ್ಧಿ
10 ವರ್ಷಗಳ ಬಳಿಕ ಒಪ್ಪಂದ ಮುಂದುವರಿಯುವ ಸಾಧ್ಯತೆಗಳು ಇರುವುದರಿಂದ ಭಾರತಕ್ಕೆ ನಿರಂತರವಾಗಿ ಮಧ್ಯಪ್ರಾಚ್ಯದ ಸಂಪರ್ಕ.
ಮುಂದಿನ 10 ವರ್ಷಗಳಲ್ಲಿ ಈ ಬಂದರು ಅಭಿವೃದ್ಧಿ ಮಾಡಿ ಭಾರತಕ್ಕೆ ಅಲ್ಲಿ ಗೋದಾಮು ನಿರ್ಮಿಸಲು ಅವಕಾಶಗಳಿವೆ.
ಗಣೇಶ್ ಪ್ರಸಾದ್