Advertisement

ಕೈಬಿಟ್ಟ ಯೋಗೇಶ್ವರ ಕಮಲಕ್ಕೆ ಶಂಕರ್‌ ಬೈ

06:00 AM Oct 29, 2017 | Team Udayavani |

ಕೇಸರಿ ಪಾಳಯದಲ್ಲಿ ಒಂದೇ ದಿನ “ಒಳಬರುವ ಮತ್ತು ಹೊರಹೋಗುವ’ ವಲಸೆ ಪರ್ವ ನಡೆದಿದೆ. ಚನ್ನಪಟ್ಟಣ ಶಾಸಕ ಯೋಗೇಶ್ವರ್‌ ಬಿಜೆಪಿ ತೆಕ್ಕೆಗೆ ಸೇರುವುದಾಗಿ ಹೇಳಿದ್ದರೆ, ಮೈಸೂರಿನ ವಿಜಯಶಂಕರ್‌ ಕಮಲದ ನಂಟು ತೊರೆಯುವುದಾಗಿ ಘೋಷಿಸಿದ್ದಾರೆ.

Advertisement

ಬಿಜೆಪಿಗೆ “ಯೋಗ’
– ಪರಿವರ್ತನಾ ಯಾತ್ರೆಯ ವೇಳೆ ಬಿಜೆಪಿ ಸೇರ್ಪಡೆ
– ಬೇಡಿಕೆ ಮುಂದಿಡದೇ ಸೇರುತ್ತಿರುವುದಾಗಿ ಹೇಳಿಕೆ
ರಾಮನಗರ
: ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ. ನವೆಂಬರ್‌ 2 ರಂದು ನಡೆಯುವ ಪರಿವರ್ತನಾ ಯಾತ್ರೆಯ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರ ಸಮ್ಮುಖದಲ್ಲಿ ಪಕ್ಷ ಸೇರುವುದಾಗಿ ಅವರು ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ತಮ್ಮ ಮಾತೃ ಪಕ್ಷ. ಯಾವುದೇ ನಿಬಂಧನೆಗಳು, ಒಪ್ಪಂದಗಳು ಇಲ್ಲದೆ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದರು. ಇದೇ ವೇಳೆ, ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿ, ಕಾಂಗ್ರೆಸ್‌ ಮುಪ್ಪಾದ ಆಲದ ಮರ, ಅದರ ಆಯುಸ್ಸು ಮುಗಿದಿದೆ. ಕಾಂಗ್ರೆಸ್‌ ಪಕ್ಷವನ್ನಾಗಲಿ, ರಾಷ್ಟ್ರವನ್ನಾಗಲಿ ಮುನ್ನಡೆಸುವ ಪ್ರಬುದ್ಧತೆ ರಾಹುಲ್‌ ಗಾಂಧಿಯವರಿಗಿಲ್ಲ. ರಾಹುಲ್‌ ಗಾಂಧಿಯವರ ಈ ದೌರ್ಬಲ್ಯವನ್ನೇ ರಾಜ್ಯದ ನಾಯಕರು ಬಂಡವಾಳ ಮಾಡಿಕೊಂಡು ತಮಗಿಷ್ಟ ಬಂದಂತೆ ಆಟವಾಡುತ್ತಿದ್ದಾರೆ ಎಂದು ಜರಿದರು.

ಅಲ್ಲದೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ದ ವಾಗ್ಧಾಳಿ ನಡೆಸಿ, ಚನ್ನಪಟ್ಟಣದಲ್ಲಿ ಯಾವ ಕೆಲಸಗಳೂ ಆಗದಂತೆ ಅಧಿಕಾರಿಗಳಿಗೆ ಅವರು ತಾಕೀತು ಮಾಡಿದ್ದಾರೆ. ಈ ಬಗ್ಗೆ ತಮ್ಮ ಬಳಿ ಆಡಿಯೋ ದಾಖಲೆಗಳಿವೆ. ಅಲ್ಲದೆ, ಡಿಕೆಶಿಯವರ ಫ‌ವರ್‌ಫ‌ುಲ್‌ ಹಗರಣಗಳ ದಾಖಲೆಗಳು ತಮ್ಮ ಬಳಿ ಇದ್ದು, ಅವುಗಳನ್ನು ಜನರ ಮುಂದೆ ಇಡುವುದಾಗಿ ಹೇಳಿದರು.

ಅಲ್ಲದೆ, ಬಿಜೆಪಿ ಸೇರಲು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತಾವು ಬೇಡಿಕೆ ಇಟ್ಟಿರುವುದನ್ನು ಅವರು ಅಲ್ಲಗಳೆದರು. ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರುತ್ತಿದ್ದು, ಪಕ್ಷ ತಮ್ಮ ಸಾಮರ್ಥ್ಯ ಗುರುತಿಸಿ ಯಾವ ಹೊಣೆ ನೀಡಿದರೂ ನಿಭಾಯಿಸುವುದಾಗಿ ತಿಳಿಸಿದರು.

Advertisement

ಕಾಂಗ್ರೆಸ್‌ಗೆ “ವಿಜಯ’
– ಬಿಜೆಪಿಗೆ ಗುಡ್‌ಬೈ ಹೇಳಿದ ಮಾಜಿ ಸಚಿವ ವಿಜಯಶಂಕರ್‌
– ಬಿ.ಎಸ್‌. ಯಡಿಯೂರಪ್ಪಗೆ ರಾಜೀನಾಮೆ ಪತ್ರ ರವಾನೆ
ಮೈಸೂರು
: ಮಾಜಿ ಸಚಿವ, ಬಿಜೆಪಿ ರೈತ ಮೋರ್ಚಾ ರಾಜಾÂಧ್ಯಕ್ಷ ಸಿ.ಎಚ್‌.ವಿಜಯಶಂಕರ್‌ ಅವರು ಬಿಜೆಪಿಗೆ ಗುಡ್‌ ಬೈ ಹೇಳಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶನಿವಾರ ರಾಜೀನಾಮೆ ಪತ್ರ ರವಾನಿಸಿರುವ ವಿಜಯಶಂಕರ್‌, ಬಿಜೆಪಿಯೊಂದಿಗಿನ ಮೂರು ದಶಕಗಳ ನಂಟನ್ನು ಕಡಿದುಕೊಂಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿದ್ದ ವಿಜಯಶಂಕರ್‌ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಪಕ್ಷದ ರಾಜ್ಯ ನಾಯಕರು ಸ್ಪಷ್ಟ ಭರವಸೆ ನೀಡದೆ ಕಡೆಗಣಿಸುತ್ತಾ ಬಂದಿದ್ದರಿಂದ ಅಸಮಾಧಾನಗೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪದೆ ಪದೇ ನನ್ನನ್ನು ಹರಕೆಯ ಕುರಿ ಮಾಡಿ, ರಾಜಕೀಯವಾಗಿ ಮುಗಿಸುವ ಪಕ್ಷದ ಷಡ್ಯಂತ್ರ ನನ್ನನ್ನು ಘಾಸಿಗೊಳಿಸಿತು. ಪಕ್ಷದ ಸ್ಥಳೀಯ ಮುಖಂಡರೊಬ್ಬರ ಕುಮ್ಮಕ್ಕಿನಿಂದಾಗಿ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಮಣೆ ಹಾಕಲಾಗುತ್ತಿದೆ. ಇದರಿಂದಾಗಿ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತಿದೆ. ಹೀಗಾಗಿ ನನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪರ್ಯಾಯವನ್ನು ಹುಡುಕಿಕೊಳ್ಳುವ ಸಲುವಾಗಿ ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಒಂದೆರಡು ದಿನಗಳಲ್ಲಿ  ಹಿತೈಷಿಗಳು, ಬೆಂಬಲಿಗರ ಜತೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇನೆ’ ಎಂದರು.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಕಾಂಗ್ರೆಸ್‌ ಸೇರ್ಪಡೆಗೆ ಆಹ್ವಾನ ಬಂದಿರುವುದನ್ನು ಅವರು ಅಲ್ಲಗಳೆಯಲಿಲ್ಲ. ಆದರೆ, ಜೆಡಿಎಸ್‌ನ ಯಾವುದೇ ನಾಯಕರು ತಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next