Advertisement

ಸಿಇಟಿಯಲ್ಲಿ ಮಣಿಪಾಲದ ವೃಜೇಶ್‌, ವ್ರಿಶಾನ್‌ ಅವಳಿ ಸಹೋದರರ ಅಮೋಘ ಸಾಧನೆ

09:03 PM Jul 30, 2022 | Team Udayavani |

ಮಣಿಪಾಲ : ಅವಳಿ ಸಹೋದರರು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ 2022ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ( ಸಿಇಟಿ)ಯ ವಿವಿಧ ವಿಭಾಗದಲ್ಲಿ ಒಟ್ಟು 8 ರ್‍ಯಾಂಕ್‌ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

Advertisement

ಮಣಿಪಾಲದ ಮಾಧವ ಕೃಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಯುಸಿ ಪೂರೈಸಿರುವ ವೃಜೇಶ್‌ ವೀಣಾಧರ್‌ ಶೆಟ್ಟಿ ಹಾಗೂ ವ್ರಿಶಾನ್‌ ವೀಣಾಧರ್‌ ಶೆಟ್ಟಿ ಈ ಸಾಧನೆ ಮಾಡಿದ ಅವಳಿ ಸಹೋದರರು.

ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ವೃಜೇಶ್‌ ರಾಜ್ಯಕ್ಕೆ 2ನೇ ರ್‍ಯಾಂಕ್‌ ಪಡೆದರೆ, ವ್ರಿಶಾನ್‌ ರಾಜ್ಯಕ್ಕೆ 5ನೇ ರ್‍ಯಾಂಕ್‌ ಪಡೆದಿದ್ದಾರೆ. ಬಿ.ಎಸ್ಸಿ ಕೃಷಿ ವಿಜ್ಞಾನ ವಿಭಾಗದಲ್ಲಿ ವೃಜೇಶ್‌ 9ನೇ ರ್‍ಯಾಂಕ್‌ ಪಡೆದರೆ, ವ್ರಿಶಾನ್‌ 23ನೇ ರ್‍ಯಾಂಕ್‌ ಪಡೆದಿದ್ದಾರೆ. ಪಶುವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ವ್ರಿಶಾನ್‌ 5ನೇ ರ್‍ಯಾಂಕ್‌ ಹಾಗೂ ವೃಜೇಶ್‌ 6ನೇ ರ್‍ಯಾಂಕ್‌ ಪಡೆದಿದ್ದಾರೆ. ಬಿ-ಫಾರ್ಮಾ ವಿಭಾಗದಲ್ಲಿ ವೃಜೇಶ್‌ 7ನೇ ರ್‍ಯಾಂಕ್‌ ಹಾಗೂ ವ್ರಿಶಾನ್‌ 6ನೇ ರ್‍ಯಾಂಕ್‌ ಪಡೆದಿದ್ದಾರೆ.

ಮಣಿಪಾಲದಲ್ಲಿ ಫೈನಾನ್ಸಿಯಲ್‌ ಕನ್ಸಲ್ಟೆಂಟ್‌ ಆಗಿರುವ ವೀಣಾಧರ್‌ ಶೆಟ್ಟಿ ಹಾಗೂ ಗೃಹಿಣಿ ರೇಖಾ ಶೆಟ್ಟಿ ದಂಪತಿಯ ಪುತ್ರರು. 1ರಿಂದ 7ನೇ ತರಗತಿಯ ವಿದ್ಯಾಭ್ಯಾಸವನ್ನು ದುಬೈನಲ್ಲಿ ಪೂರ್ಣಗೊಳಿಸಿ, 8ನೇ ತರಗತಿಯಿಂದ ಮಣಿಪಾಲದ ಮಾಧವ ಕೃಪ ಶಾಲೆಯಲ್ಲಿ ದ್ವಿತೀಯ ಪಿಯುಸಿವರೆಗೂ ಕಲಿತಿದ್ದಾರೆ. ಮಾಧವಕೃಪ ಶಾಲೆಯ ಪಿಯುಸಿ 2020-22ನೇ ಬ್ಯಾಚ್‌ ವಿದ್ಯಾರ್ಥಿಗಳಾಗಿದ್ದಾರೆ.

ಇದನ್ನೂ ಓದಿ :ಜಾತಿ ನೋಡಿ ಪರಿಹಾರ ಕೊಡೋ ಅನಾಗರಿಕ ಸರ್ಕಾರ: ಎಚ್‌.ಡಿ. ಕುಮಾರಸ್ವಾಮಿ

Advertisement

ವೈದ್ಯರಾಗುವ ಆಸೆ
ಸಿಇಟಿಯಲ್ಲಿ ರ್‍ಯಾಂಕ್‌ ಬಂದಿರುವ ಸಂತಸವನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿರುವ ವೃಜೇಶ್‌ ಮತ್ತು ವ್ರಿಶಾನ್‌, ಮಣಿಪಾಲದ ಮಾಧವ ಕೃಪ ಶಾಲೆಯ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ್ದೇವೆ. ನೀಟ್‌ ಹಾಗೂ ಸಿಇಟಿ ಸಿದ್ಧತೆಗೆ ಉಡುಪಿಯ ಬೇಸ್‌ ತರಬೇತಿ ಸಂಸ್ಥೆಯಲ್ಲಿ ಕೋಚಿಂಗ್‌ ಪಡೆದಿದ್ದೇವೆ. ವೈದ್ಯರಾಗಬೇಕು ಎಂಬ ಗುರಿ ಹೊಂದಿದ್ದು, ನೀಟ್‌ ಕೂಡ ಬರೆದಿದ್ದೇವೆ. ನೀಟ್‌ ರ್‍ಯಾಂಕ್‌ ಆಧಾರದಲ್ಲಿ ಎಲ್ಲಿ ಸೀಟು ಸಿಗಲಿದೆ ಎಂಬುದನ್ನು ನೋಡುತ್ತೇವೆ. ಸಿಇಟಿಯಲ್ಲಿ ರ್‍ಯಾಂಕ್‌ ಬಂದಿರುವುದು ತುಂಬ ಖುಷಿ ಕೊಟ್ಟಿದೆ. ಪಿಯುಸಿಯಲ್ಲಿ ಹೆಚ್ಚಿನ ಸಮಯವನ್ನು ಓದಿಗೆ ಮೀಸಲಿಟ್ಟಿದ್ದೆವು. ಇಬ್ಬರು ಒಟ್ಟಾಗಿ ಅಧ್ಯಯನ ಮಾಡುತ್ತಿದ್ದೆವು. ಅಧ್ಯಯನಕ್ಕೆ ಪ್ರತ್ಯೇಕ ಸಮಯ ಮೀಸಲಿಡದೆ ಸಮಯ ಸಿಕ್ಕಾಗೆಲ್ಲ ಅಧ್ಯಯನ ಮಾಡುತ್ತಿದ್ದೆವು. ಕ್ರಿಕೆಟ್‌ ಇಬ್ಬರಿಗೂ ಅಚ್ಚುಮೆಚ್ಚಿನ ಕ್ರೀಡೆ. ಬಿಡುವಿನ ಸಮಯದಲ್ಲಿ ಕ್ರಿಕೆಟ್‌ ಆಡುತ್ತೇವೆ. ವೈಜ್ಞಾನಿಕ ವಿಷಯದ ಬಗ್ಗೆ ಇಬ್ಬರಿಗೂ ಆಸಕ್ತಿ ಹೆಚ್ಚಿದೆ. ಹೊಸ ಸಂಶೋಧನೆಗಳ ಅಧ್ಯಯನ ಮತ್ತು ವೈದ್ಯಕೀಯ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಹೆಚ್ಚಿದೆ ಎಂದರು.

ಓದಿನದಲ್ಲೂ ಸರಿಸಮಾನರು
ವೀಣಾಧರ್‌ ಶೆಟ್ಟಿ ಹಾಗೂ ಗೃಹಿಣಿ ರೇಖಾ ಶೆಟ್ಟಿ ದಂಪತಿ ಈ ಹಿಂದೆ ದುಬೈನಲ್ಲಿದ್ದರು. ವೃಜೇಶ್‌ ಹಾಗೂ ವ್ರಿಶಾನ್‌ ದುಬೈನಲ್ಲೆ ಹುಟ್ಟಿದ್ದು ಮತ್ತು 7ನೇ ತರಗತಿ ವರೆಗಿನ ಶಿಕ್ಷಣವನ್ನು ಅಲ್ಲೇ ಪೂರೈಸಿದ್ದಾರೆ. ಸಿಬಿಎಸ್‌ಇ 12ನೇ ತರಗತಿ ಫ‌ಲಿತಾಂಶದಲ್ಲಿ ವೃಜೇಶ್‌ ಶೇ.99ರಷ್ಟು, ವ್ರಿಶಾನ್‌ ಶೇ.98.44ರಷ್ಟು ಮತ್ತು 10ನೇ ತರಗತಿ ಫ‌ಲಿತಾಂಶದಲ್ಲಿ ವೃಜೇಶ್‌ ಶೇ.97.4ರಷ್ಟು, ವೃಶಾನ್‌ ಶೇ.97ರಷ್ಟು ಫ‌ಲಿತಾಂಶ ಪಡೆದಿದ್ದರು. ನಿತ್ಯ ಕಾಲೇಜಿಗೆ ಒಟ್ಟಿಗೆ ಹೋಗಿ ಬರುತ್ತಿದ್ದರು. ಬಹುತೇಕ ಎಲ್ಲ ವಿಷಯಗಳಲ್ಲೂ ಇಬ್ಬರದ್ದು ಸಮಾನ ಅಬಿರುಚಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next