ಕಲಬುರಗಿ: ವೈದ್ಯ, ಇಂಜಿನಿಯರಿಂಗ್ ಸೇರಿ ವೃತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಜಿಲ್ಲೆಯಲ್ಲಿ 25 ಪರೀಕ್ಷಾ ಕೇಂದ್ರಗಳಲ್ಲಿ ಜು.30 ಮತ್ತು 31ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೇ ತೀವ್ರ ಕಟ್ಟೆಚ್ಚರ ವಹಿಸುವಂತೆ ಪರೀಕ್ಷಾ ಕೇಂದ್ರ ಮುಖ್ಯಸ್ಥರಿಗೆ ಅಪರ ಜಿಲ್ಲಾಧಿಕಾರಿ ಡಾ| ಶಂಕರ ವಣಿಕ್ಯಾಳ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಿಇಟಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 8,496 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕಾಗಿ ಕಲಬುರಗಿ ನಗರದಲ್ಲಿ 23 ಮತ್ತು ಆಳಂದ ಮತ್ತು ಚಿತ್ತಾಪುರದಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರಗಳು ಇರಲಿವೆ. ಕೇಂದ್ರದ ಮುಖ್ಯಸ್ಥರು ಹಾಗೂ ಮಾರ್ಗಾಧಿಕಾರಿಗಳು ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಲೋಪಕ್ಕೆ ಅವಕಾಶ ನೀಡದೆ ಸುಗಮವಾಗಿ ನಡೆಸಲು ಕ್ರಮ ವಹಿಸಬೇಕೆಂದರು.
27 ಮಾರ್ಗಾಧಿಕಾರಿ ಹಾಗೂ ವೀಕ್ಷಕರನ್ನು ನೇಮಿಸಲಾಗಿದೆ. ಕೇಂದ್ರದಲ್ಲಿ ಆಸನ, ಕುಡಿಯುವ ನೀರಿನ, ಸಾಕಷ್ಟು ಬೆಳಕಿನ ಮತ್ತು ಶೌಚಾಲಯ ವ್ಯವಸ್ಥೆ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪ್ರತ್ಯೇಕ ಮಹಿಳಾ ಮತ್ತು ಪುರುಷ ಪೊಲೀಸರನ್ನು ನೇಮಿಸಲಾಗುವುದು. ಪರೀಕ್ಷೆ ಸಂಪೂರ್ಣವಾಗಿ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಲಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆಗಳನ್ನು ವಿವರಿಸಿದರು. ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವೀಕ್ಷಕರು ಮತ್ತು ಮಾರ್ಗಾಧಿಕಾರಿಗಳು ಉಪಸ್ಥಿತರಿದ್ದರು.
ಕೋವಿಡ್ ಸೋಂಕು ಹರಡದಂತೆ ಪರೀಕ್ಷಾ ಕೋಣೆಗಳನ್ನು ಸ್ಯಾನಿಟೈಸ್ ಮಾಡಿಸಬೇಕು. ವಿದ್ಯಾರ್ಥಿಗಳನ್ನು ಡಿಜಿಟಲ್ ಥರ್ಮೋಮೀಟರ್‌ನಿಂದ ಪರೀಕ್ಷಿಸಬೇಕು. ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ. ಸೋಂಕಿತರ ಸಂಪರ್ಕದಲ್ಲಿ ಬಂದಿರುವ ಅಥವಾ ಕಂಟೇನ್ಮೆಂಟ್ ಝೋನ್ ಪ್ರದೇಶದಿಂದ ವಿದ್ಯಾರ್ಥಿ ಬಂದಲ್ಲಿ ಅವರಿಗೆ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗುವುದು.
-ಡಾ| ಶಂಕರ ವಣಿಕ್ಯಾಳ, ಅಪರ ಜಿಲ್ಲಾಧಿಕಾರಿ