Advertisement

CET Exam; ಏ.20, 21 ಸಿಇಟಿ ಪರೀಕ್ಷೆ, ಜ.10ರಿಂದ ಅರ್ಜಿ ಸಲ್ಲಿಕೆ ಆರಂಭ

06:44 PM Dec 22, 2023 | Team Udayavani |

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ 2024-25ರಲ್ಲಿ ಪ್ರವೇಶಾತಿ ಬಯಸುವವರಿಗಾಗಿ ಮುಂಬರುವ ಏಪ್ರಿಲ್‌ 20 (ಶನಿವಾರ) ಮತ್ತು 21ರಂದು (ಭಾನುವಾರ) ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ನಡೆಸಲಾಗುವುದು. ಆದ್ದರಿಂದ, ಆಸಕ್ತ ಅಭ್ಯರ್ಥಿಗಳು ಜನವರಿ 10ರಿಂದ ನಿಗದಿತ ಶುಲ್ಕದೊಂದಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

Advertisement

ಈ ಬಗ್ಗೆ ಅವರು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿದ್ದು, ಏ.20ರ ಬೆಳಿಗ್ಗೆ 10.30ರಿಂದ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ ಗಣಿತ, 21ರಂದು ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ತಲಾ 60 ಅಂಕಗಳಿಗೆ ನಡೆಯಲಿದೆ. ಹಾಗೆಯೇ, ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.19ರ ಶುಕ್ರವಾರದಂದು ಬೆಂಗಳೂರು, ಬೀದರ್‌, ಬೆಳಗಾವಿ, ಬಳ್ಳಾರಿ, ವಿಜಯಪುರ ಮತ್ತು ಮಂಗಳೂರು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದಿದ್ದಾರೆ.

ನ್ಯಾಚುರೋಪತಿ ಮತ್ತು ಯೋಗ, ಬಿ.ಫಾರ್ಮಾ, ಫಾರ್ಮಾ-ಡಿ, ದ್ವಿತೀಯ ವರ್ಷದ ಬಿ.ಫಾರ್ಮಾ, ಕೃಷಿ ಕೋರ್ಸುಗಳು, ಪಶು ಸಂಗೋಪನೆ, ಬಿ.ಎಸ್ಸಿ (ನರ್ಸಿಂಗ್), ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್‌ ‌ ಕೋರ್ಸುಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಗೂ ಈ ಸೂಚನೆ ಅನ್ವಯಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಸರಿಯಾದ ಆರ್‌.ಡಿ. ಸಂಖ್ಯೆ, ಜಾತಿ/ಆದಾಯ ಪ್ರಮಾಣಪತ್ರ ಮತ್ತು ಕಲ್ಯಾಣ ಕರ್ನಾಟಕ (371ಜೆ) ಪ್ರಮಾಣಪತ್ರಕ್ಕೆ ಸಂಬಂಧಿಸಿದ ಅಗತ್ಯ ವಿವರಗಳನ್ನು ದಾಖಲಿಸಬೇಕು. ತಪ್ಪಿದಲ್ಲಿ, ಇಂಥವರು ಅರ್ಜಿ ಸಲ್ಲಿಕೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಬಿ.ಇ.ಗೆ ನೇರ ಪ್ರವೇಶ: ಏ.18ರಂದು ಸಿಇಟಿ

Advertisement

ಎಂಜಿನಿಯರಿಂಗ್‌ ನ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶಾತಿ ಬಯಸುವ ಅರ್ಹ ಅಭ್ಯರ್ಥಿಗಳಿಗೆ ಏ.18ರಂದು ಸಿಇಟಿ ನಡೆಸಲಾಗುವುದು. ಇಂಥವರು ಅರ್ಜಿ ತುಂಬಲು ಸದ್ಯದಲ್ಲೇ ಪೋರ್ಟಲ್‌ ತೆರೆಯಲಾಗುವುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಇದೇ ರೀತಿಯಲ್ಲಿ ಎಂಬಿಎ, ಎಂಸಿಎ, ಎಂ.ಇ, ಎಂ.ಟೆಕ್‌, ಎಂ.ಆರ್ಕ್‌ ಕೋರ್ಸುಗಳಿಗೆ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳಿಗೆ ಏ.18 ಮತ್ತು 19ರಂದು ಪಿಜಿಸಿಇಟಿ ನಡೆಸಲಾಗುವುದು. ಇವರಿಗೂ ಸಹ ಅರ್ಜಿ ಸಲ್ಲಿಕೆಗೆ ಶೀಘ್ರದಲ್ಲೇ ಪೋರ್ಟಲ್‌ ತೆರೆಯಲಾಗುವುದು ಎಂದು ಅವರು ಹೇಳಿದ್ದಾರೆ.

ಶುಲ್ಕ ವಾಪಸ್:‌ ಸರಿಯಾದ ಬ್ಯಾಂಕ್‌ ವಿವರಕ್ಕೆ ಮನವಿ

2023ರಲ್ಲಿ ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಬಯಸಿ ನಂತರ ಸೀಟು ರದ್ದುಪಡಿಸಿಕೊಂಡಿರುವ ಅಥವಾ ಹೆಚ್ಚುವರಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳಿಗೆ ಪ್ರಾಧಿಕಾರವು ಆ ಬಾಬ್ತಿನ ಮೊತ್ತವನ್ನು ಹಿಂದಿರುಗಿಸುತ್ತಿದೆ. ಆದರೆ, ಕೆಲವರ ಅರ್ಜಿಗಳಲ್ಲಿ ಬ್ಯಾಂಕ್‌ ವಿವರಗಳು ತಪ್ಪಾಗಿದ್ದು, ಅಂಥವರ ಹೆಸರುಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇಂಥವರು ಡಿ.31ರೊಳಗೆ ಸರಿಯಾದ ವಿವರ ನಮೂದಿಸಬೇಕು ಎಂದು ಪ್ರಾಧಿಕಾರವು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next