Advertisement

ಆನ್‌ಲೈನ್‌ ಸಿಇಟಿಗೆ ತಿಲಾಂಜಲಿ!

09:44 AM Feb 01, 2020 | mahesh |

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಆನ್‌ಲೈನ್‌ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಶಾಶ್ವತವಾಗಿ ಕೈಬಿಟ್ಟಿದೆ.

Advertisement

2020-21ರಲ್ಲಿ ಆನ್‌ಲೈನ್‌ ಮೂಲಕ ಸಿಇಟಿ ನಡೆಸಲು ಬೇಕಾದ ವಿಸ್ತೃತವಾದ ಪ್ರಸ್ತಾವನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸಿದ್ದರು. ಆದರೆ ರಾಜ್ಯ ಸರಕಾರ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲು ಸೌಲಭ್ಯಗಳ ಕೊರತೆ ಹಾಗೂ ಲಾಜಿಸ್ಟಿಕ್‌ ಮೊದಲಾದ ಸಮಸ್ಯೆಗಳಿಂದಾಗಿ ಪ್ರಸ್ತಾವನೆಯನ್ನು ಶಾಶ್ವತವಾಗಿ ಕೈಬಿಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಸಿಇಟಿ ನಡೆಸಲು ಒಂದು ಅವಧಿಗೆ ಕನಿಷ್ಠ 25 ಸಾವಿರ ಕಂಪ್ಯೂಟರ್‌ ಅಗತ್ಯವಿದೆ. ಲಕ್ಷಗಟ್ಟಲೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರಿಂದ ಇದು ಅಸಾಧ್ಯ. ಈ ಬಗ್ಗೆ ಇತ್ತೀಚೆಗೆ ನಡೆದ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆದು ಅಂತಿಮ ನಿರ್ಧಾರ ತೆಗೆದು ಕೊಳ್ಳಲಾಗಿದೆ ಎಂದು ಡಿಸಿಎಂ ಡಾ| ಅಶ್ವತ್ಥ್ ತಿಳಿಸಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳ ಹಿತ
ಆನ್‌ಲೈನ್‌ ಪರೀಕ್ಷೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕಾಗಿ ನಗರ ಪ್ರದೇಶಕ್ಕೆ ಬರಬೇಕಾಗುತ್ತದೆ. ಏಕಾಏಕಿ ಆನ್‌ಲೈನ್‌ ಮೂಲಕ ಪರೀಕ್ಷೆ ಎದುರಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಹಜ ವಾಗಿಯೇ ಆತಂಕ ಹೆಚ್ಚಾಗಲಿದೆ. ಅಲ್ಲದೆ, ಆನ್‌ಲೈನ್‌ ಪರೀಕ್ಷೆಯನ್ನು ಎಲ್ಲ ಕೇಂದ್ರಗಳಲ್ಲೂ ನಡೆ ಸಲು ಸಾಧ್ಯವಿಲ್ಲ. ಹೀಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈಗ ಇರುವ ಪದ್ಧತಿಯನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

- ರಾಜು ಖಾರ್ವಿ ಕೊಡೇರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next