ಸಾಧನೆ ಮತ್ತು ಸಾಧಕರನ್ನು ಗುರುತಿಸಲು ನಿರ್ದಿಷ್ಟ ಮಾನದಂಡ ಅನುಸರಿಸಲೇಬೇಕಾಗುತ್ತದೆ. ಅದನ್ನು ಬಿಟ್ಟು ಬೇರೆ ಮಾರ್ಗ ಅನುಸರಿಸುವುದು ಎಷ್ಟು ಸರಿ? ಹಾಗೆಯೇ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯನ್ನು ನಡೆಸಲೇಬೇಕು. ಪ್ರವೇಶ ಪರೀಕ್ಷೆ ಇಲ್ಲದೆ ವೈದ್ಯಕೀಯ, ಎಂಜಿನಿಯರಿಂಗ್ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಹಂಚಿಕೆ ಅಥವಾ ಪ್ರವೇಶ ಪ್ರಕ್ರಿಯೆ ಮಾಡಬಾರದು.
2020-21ನೇ ಸಾಲಿನ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಮತ್ತು ಜೆಇಇ ನಡೆಸಲೇ ಬೇಕು. ಆಗ ಮಾತ್ರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯದ ಆಧಾರದಲ್ಲಿ ಸೀಟು ಹಂಚಿಕೆ ಮಾಡಲು ಸಾಧ್ಯ. ಹಿಂದಿನ ಪರೀಕ್ಷೆಯ ಅಂಕ ಅಥವಾ ಇನ್ಯಾವುದೋ ಮಾನದಂಡದಲ್ಲಿ ಸೀಟು ಹಂಚಿಕೆ ಮಾಡುವುದು ಸರಿಯಲ್ಲ.
ನೀಟ್ ಅಥವಾ ಜೆಇಇನಲ್ಲಿ ಉತ್ತಮ ರ್‍ಯಾಂಕ್ ಪಡೆದು, ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಬೇಕು ಎಂದು ಎಷ್ಟೋ ವಿದ್ಯಾರ್ಥಿಗಳು ಕನಸು ಕಂಡಿರುತ್ತಾರೆ ಮತ್ತು ಅದಕ್ಕಾಗಿ ವರ್ಷ ಪೂರ್ತಿ ಕಠಿನ ಪರಿಶ್ರಮ ಪಟ್ಟು ಅಧ್ಯ ಯನ ನಡೆಸಿರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿಯೇ ನಿತ್ಯದ ತರಗತಿಗಳ ಜತೆಗೆ ಹೆಚ್ಚುವರಿ ಕೋಚಿಂಗ್ ಕೂಡ ಪಡೆದಿರುತ್ತಾರೆ. ಎಲ್ಲ ರೀತಿಯಲ್ಲೂ ಪರೀಕ್ಷೆ ಎದುರಿಸಲು ಸಿದ್ಧರಾಗಿರುವ ವಿದ್ಯಾ ರ್ಥಿ ಗಳಿಗೆ ನಿರಾಸೆ ಪಡಿಸುವುದು ಸರಿಯಲ್ಲ. ಕೊರೊನಾದಿಂದ ಸಂಕಷ್ಟ ಎದುರಾಗಿರು ವುದು ನಿಜ. ಹಾಗಂತ ಇದಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವುದು ಬೇಡ. ಕೊರೊನಾ ಅಥವಾ ಇನ್ಯಾವುದೋ ಕಾರಣಕ್ಕಾಗಿ ಪರೀಕ್ಷೆ ಮುಂದೂಡುವುದು ಅಥವಾ ನಡೆಸದೇ ಇರುವುದು ಸರಿಯಲ್ಲ.
ಕೊರೊನಾ ನಮಗೆ ಅನೇಕ ರೀತಿಯ ಪಾಠ ಕಲಿಸಿದೆ. ಎಲ್ಲದಕ್ಕೂ ಸಿದ್ಧರಾಗಲೇ ಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸುರಕ್ಷತೆಗೆ ನಿರ್ದಿಷ್ಟ ಮಾನದಂಡ ಅನುಸರಿಸಿ, ಸೂಕ್ಷ ಮುನ್ನೆಚ್ಚರಿಕೆ ಹಾಗೂ ಭದ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಬೇಕು.
ಬಿಜೆಪಿಯೇತರ ಸರಕಾರ ಇರುವ ಐದು ರಾಜ್ಯಗಳಲ್ಲಿ ನೀಟ್‌ಗೆ ವಿರೋಧ ವ್ಯಕ್ತಪಡಿಸು ತ್ತಿವೆ. ಕರ್ನಾಟಕ ಸರಕಾರ ಕೊರೊನಾ ಆತಂಕದ ನಡುವೆ ಸಿಇಟಿ, ಎಸೆಸೆಲ್ಸಿ ಪರೀಕ್ಷೆಯನ್ನು ಯಾವುದೇ ಸಮಸ್ಯೆಯಿಲ್ಲದೆ ನಡೆಸಿದೆ. ನೀಟ್ ಮತ್ತು ಜೆಇಇ ಮಾಡಲು ಏಕೆ ಸಾಧ್ಯವಿಲ್ಲ?. ಪರೀಕ್ಷೆ ನಡೆಸಿ, ಅದರ ರ್‍ಯಾಂಕಿಂಗ್ ಆಧಾರದಲ್ಲಿಯೇ ವೈದ್ಯಕೀಯ, ದಂತ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಸೀಟುಗಳ ಹಂಚಿಕೆಯಾಗಬೇಕು.
ಇದನ್ನು ಹೊರತುಪಡಿಸಿ ಬೇರೆ ಮಾನದಂಡ ಅನುಸರಿಸಿ ಸೀಟು ಹಂಚಿಕೆ ಮಾಡುವುದು ಸರಿಯಲ್ಲ. ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಕಾಪಾಡ ಬೇಕಾದರೆ ಪ್ರವೇಶ ಪರೀಕ್ಷೆಗಳು ನಡೆಯಬೇಕು. ಪರೀಕ್ಷೆ ನಡೆಸಿ ಸೀಟು ಹಂಚಿಕೆ ಮಾಡುವುದೇ ಉತ್ತಮ. ಇದಕ್ಕೆ ಪರ್ಯಾಯ ಹುಡುಕುವುದು ಸರಿಯಲ್ಲ.