Advertisement

ಸಿಇಟಿ ದಾಖಲಾತಿ ಪರಿಶೀಲನೆ: ಕೈಕೊಟ್ಟ ಸರ್ವರ್‌, ತಡವಾಗಿ ಬಂದ ಅಧಿಕಾರಿಗಳು

09:56 PM Aug 22, 2022 | Team Udayavani |

ಬೆಂಗಳೂರು: ಎಂಜಿನಿಯರಿಂಗ್‌ ಸಹಿತ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸೋಮವಾರದಿಂದ ಸಿಇಟಿ ರ್‍ಯಾಂಕಿಂಗ್‌ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಆರಂಭವಾಗಿದ್ದು, ಮೊದಲ ದಿನವೇ ಸರ್ವರ್‌ ಕೈಕೊಟ್ಟ ಪರಿಣಾಮ ವಿದ್ಯಾರ್ಥಿಗಳು ಹಾಗೂ ಪೋಷಕರು ಗಂಟೆಗಟ್ಟಲೆ ಕಾಯುವಂತಾಯಿತು.

Advertisement

ಸರ್ವರ್‌ ಸಮಸ್ಯೆ ಜತೆಗೆ ಈ ಬಾರಿ ಅಭ್ಯರ್ಥಿಗಳ ಶಾಲಾ ದಾಖಲೆ ಪರಿಶೀಲನೆ ಜವಾಬ್ದಾರಿ ಹೊತ್ತಿರುವ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಡವಾಗಿ ಪ್ರಾಧಿಕಾರದ ಕಚೇರಿಗೆ ಆಗಮಿಸಿದ್ದರಿಂದ ಮೊದಲ ದಿನ ಸಮಯಕ್ಕೆ ಸರಿಯಾಗಿ ದಾಖಲೆ ಪರಿಶೀಲನೆ ಆರಂಭವಾಗದೆ ವಿದ್ಯಾರ್ಥಿಗಳು ಆಕ್ರೋಶಗೊಳ್ಳುವಂತಾಯಿತು.

ಸೋಮವಾರ 1ರಿಂದ 5000 ವರೆಗಿನ ರ್‍ಯಾಂಕ್‌ ಪಡೆದವರ ದಾಖಲೆ ಪರಿಶೀಲನೆ ನಡೆಸಬೇಕಿತ್ತು.
ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಆನ್‌ಲೈನ್‌ಗೊಳಿಸಲಾಗಿದೆ. ಗೊಂದಲವನ್ನು ತಪ್ಪಿಸಲು ಕೆಇಎಯಿಂದ ದಾಖಲೆಗಳನ್ನು ಪರಿಶೀಲಿಸಲು ಮತ್ತು ಅಪ್‌ಲೋಡ್‌ ಮಾಡುವ ಹೊಣೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಹಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಬಿಇಒಗಳನ್ನು ಮಾತ್ರ ಪ್ರಾಧಿಕಾರದ ಕೇಂದ್ರ ಕಚೇರಿಗೆ ಬಂದು ಕಾರ್ಯನಿರ್ವಹಿಸಬೇಕು. ಉಳಿದ ಜಿಲ್ಲೆಗಳ ಬಿಇಒಗಳು ಆಯಾ ಜಿಲ್ಲೆಗಳಲ್ಲೇ ಕೂತು ದಾಖಲೆಗಳ ಪರಿಶೀಲಿಸಿ ಅಪ್‌ಲೋಡ್‌ ಮಾಡಬೇಕೆಂದು ಸೂಚಿಸಿದೆ. ಮಾಹಿತಿ ಪ್ರಕಾರ, ಬೆಳಗ್ಗೆ 8.30ಕ್ಕೆ ಪರಿಶೀಲನೆ ಆರಂಭವಾಗಬೇಕಿತ್ತು.

ಪೋಷಕರು, ವಿದ್ಯಾರ್ಥಿಗಳ ಆರೋಪವನ್ನು ನಿರಾಕರಿಸಿರುವ ಕೆಇಎ ಅಧಿಕಾರಿಗಳು, ಕೆಲವು ನಿಮಿಷಗಳ ಕಾಲವಷ್ಟೆ ವಿಳಂಬವಾಗಿತ್ತು. ಗಂಟೆಗಳ ಕಾಲ ಆಗಿಲ್ಲ. ಅ ಮೊದಲ ದಿನ ಕೆಲವು ತಾಂತ್ರಿಕ ಲೋಪಗಳು ಉಂಟಾಗುತ್ತವೆ. ಅವುಗಳನ್ನು ಸರಿಪಡಿಸಿ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ. ಈಗ ಎಲ್ಲವೂ ಸರಿಹೋಗಿದೆ. ಮಂಗಳವಾರದಿಂದ ನಿಗದಿತ ಸಮಯಕ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಆ. 29ರ ನಂತರ ಅವಕಾಶ
ಕೆಲವು ವಿದ್ಯಾರ್ಥಿಗಳು ತಮ್ಮ ಅರ್ಜಿಯಲ್ಲಿ ತಾಲೂಕು, ವಿಳಾಸದಂತಹ ಮಾಹಿತಿಯನ್ನೇ ತಪ್ಪಾಗಿ ಮುದ್ರಿಸಿದ್ದಾರೆ. ಎಲ್ಲ 5000 ಜನರ ಪರಿಶೀಲನೆ ಮುಗಿದಿದೆ. ಅರ್ಜಿ ತಿದ್ದುಪಡಿ ಮಾಡಿಕೊಳ್ಳಲು 8 ಬಾರಿ ಅವಕಾಶ ನೀಡಿದ್ದರೂ ಮೀಸಲಾತಿ ಕಾಲಂನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಇಂತಹವರಿಗೆ ಮತ್ತೆ ಅವಕಾಶವಿಲ್ಲ. ಉಳಿದ ಶೈಕ್ಷಣಿಕ ಹಾಗೂ ವೈಯಕ್ತಿಕ ಮಾಹಿತಿ ತಪ್ಪಾಗಿ ದಾಖಲಿಸಿರುವವರಿಗೆ ಆ.29ರ ಬಳಿಕ ಬರಲು ತಿಳಿಸಲಾಗಿದೆ. 2ನೇ ದಿನ 5001ರಿಂದ 10 ಸಾವಿರ ವರೆಗಿನ ರ್‍ಯಾಂಕ್‌ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next