Advertisement

UG, PG ಏಕರೂಪ ವೇಳಾಪಟ್ಟಿ : ಎಪ್ರಿಲ್‌ 18, 19ಕ್ಕೆ ಸಿಇಟಿ

01:46 AM Oct 05, 2024 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಇರುವ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಮತ್ತು ಹೊಸ ಕೋರ್ಸ್‌ಗಳ ಸಂಯೋಜನೆ ಪ್ರಕ್ರಿಯೆಗೆ ಏಕರೂಪದ ವೇಳಾಪಟ್ಟಿ ಪ್ರಕಟಿಸಲು ಉನ್ನತ ಶಿಕ್ಷಣ ಇಲಾಖೆ ದೃಢ ಹೆಜ್ಜೆ ಇರಿಸಿದ್ದು 2025-26ನೇ ಸಾಲಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ.

Advertisement

2025-26ನೇ ಸಾಲಿನ ಶೈಕ್ಷಣಿಕ ಮತ್ತು ಸಂಯೋಜನ ವೇಳಾಪಟ್ಟಿಯು ಅ. 2024ರಿಂದಲೇ ಆರಂಭಗೊಂಡು 2025ರ ಮಾರ್ಚ್‌/ಎಪ್ರಿಲ್‌ನಲ್ಲಿ ಅಂತ್ಯಗೊಳ್ಳಲಿದೆ. ಎಪ್ರಿಲ್‌ನಿಂದಲೇ ಪದವಿಯ ಪ್ರಥಮ ಸೆಮಿಸ್ಟರ್‌ಗೆ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಉನ್ನತ ಶಿಕ್ಷಣ ಇಲಾಖೆ ಮೂರ್ನಾಲ್ಕು ವರ್ಷದಿಂದ ಏಕರೂಪದ ವೇಳಾಪಟ್ಟಿ ತಯಾರಿಸಿ, ಜಾರಿಗೊಳಿಸುವ ಪ್ರಯತ್ನ ನಡೆಸುತ್ತಿದ್ದು ಅಂತಿಮವಾಗಿ ಇದೀಗ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಸಿದ್ಧತೆ ಆರಂಭಿಸಿದೆ.

ಪದವಿಯ ಮೊದಲ ಸೆಮಿಸ್ಟರ್‌ನ ದಾಖಲಾತಿ ಎ.15ರಿಂದ ಆರಂಭಗೊಳ್ಳಲಿದೆ. ಪ್ರಥಮ, ತೃತೀಯ ಮತ್ತು ಐದನೇ ಸೆಮಿಸ್ಟರ್‌ ಜು. 9ರಿಂದ ಆರಂಭಗೊಳ್ಳಲಿದ್ದು ಈ ಸೆಮಿಸ್ಟರ್‌ ಸೆ.26ಕ್ಕೆ ಕೊನೆಗೊಳ್ಳಲಿದೆ.
ಸ್ನಾತಕೋತ್ತರ ಕೋರ್ಸ್‌ಗಳ ದಾಖಲಾತಿ ಪ್ರಕ್ರಿಯೆ ಆ. 19ರಿಂದ ಆರಂಭಗೊಳ್ಳಲಿದೆ. ಸಪ್ಟೆಂಬರ್‌ 1ಕ್ಕೆ ಪ್ರಥಮ, ತೃತೀಯ ಸೆಮಿಸ್ಟರ್‌ನ ತರಗತಿಗಳು ಆರಂಭಗೊಳ್ಳಲಿದ್ದು ಡಿ. 19ಕ್ಕೆ ಅಂತ್ಯಗೊಳ್ಳಲಿದೆ. ಪರೀಕ್ಷೆಗಳು ಡಿ.12ಕ್ಕೆ ಆರಂಭವಾಗಲಿದೆ.

ಯುಜಿಸಿ ನಿಯಮದಂತೆ 2025-26ರ ಸಾಲಿನಲ್ಲಿ ಪ್ರತಿ ಸೆಮಿಸ್ಟರ್‌ನಲ್ಲಿ ಕನಿಷ್ಠ 90 ದಿನಗಳ ಕೆಲಸದ ಅವಧಿ ಇರುವಂತೆ ವೇಳಾಪಟ್ಟಿ ರೂಪಿಸಲಾಗಿದೆ. ವಾರದಲ್ಲಿ ಆರು ದಿನಗಳನ್ನು ಕೆಲಸದ ದಿನಗಳೆಂದು ಪರಿಗಣಿಸಲಾಗಿದೆ.
ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಡಿ ಬರುವ ಸಾರ್ವಜನಿಕ ವಿ.ವಿ.ಗಳಲ್ಲಿ ಸಂಯೋಜನ ಪ್ರಕ್ರಿಯೆ
ಯನ್ನು ಇದೇ ಅ. 9ರಿಂದ ಆರಂಭಿಸಿ 2025ರ ಮಾರ್ಚ್‌ 31ರೊಳಗೆ ಪೂರ್ಣಗೊಳಿಸಬೇಕು. ಖಾಸಗಿ ವಿ.ವಿ.ಗಳ ಸೀಟು ಹೆಚ್ಚಳ, ಕಡಿತ, ಹೊಸ ಸಂಯೋಜನೆ ಸೇರಿದಂತೆ ಇನ್ನಿತರ ಚಟುವಟಿ ಕೆಗೆ ಇದೇ ಅ. 7ರಿಂದ ಅವಕಾಶ ಆರಂಭವಾಗ ಲಿದ್ದು ಮಾ. 31ಕ್ಕೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದೆ.

ಬಿಇ, ಬಿ.ಟೆಕ್‌ ಮತ್ತು ಬಿ.ಅರ್ಕ್‌ ಕೋರ್ಸ್‌ಗೆ ಸಂಬಂಧಿಸಿದಂತೆ 2025ರ ಎಪ್ರಿಲ್‌ 10ರಿಂದ ವಿಟಿಯು ಸ್ಥಳ ಪರಿಶೀಲನೆ ನಡೆಸುವುದರೊಂದಿಗೆ ಆರಂಭಗೊಳ್ಳಲಿದ್ದು ಮೇ 21ಕ್ಕೆ ರಾಜ್ಯ ಸರಕಾರ ದಿಂದ ನಿರಾಕ್ಷೇಪಣ ಪತ್ರ ಪಡೆಯಲು ಕೊನೆಯ ದಿನವಾಗಿರಲಿದೆ. ಇನ್ನು ಎಂಬಿಎ, ಎಂಸಿಎ, ಎಂಟೆಕ್‌ ಮತ್ತು ಎಂ. ಅರ್ಕ್‌ ಸ್ನಾತಕೋತ್ತರ ಕೋರ್ಸ್‌ ಗಳ ಸಂಯೋಜನೆ, ಸೀಟು ಹೆಚ್ಚಳ ಪ್ರಕ್ರಿಯೆಗೆ ವಿಟಿಯು 2025ರ ಎಪ್ರಿಲ್‌ 10ಕ್ಕೆ ಸ್ಥಳ ಪರಿಶೀಲನೆ ನಡೆಸಲಿದೆ. ಮೇ 21 ರಾಜ್ಯ ಸರಕಾರ ನಿರಾಕ್ಷೇಪಣ ಪತ್ರ ನೀಡಲಿದೆ.

Advertisement

ಎಪ್ರಿಲ್‌ 18, 19ಕ್ಕೆ ಸಿಇಟಿ
ಎಂಜಿನಿಯರಿಂಗ್‌, ನರ್ಸಿಂಗ್‌, ಪಶು ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)- 2025-26ನೇ ಸಾಲಿನಲ್ಲಿ ಎಪ್ರಿಲ್‌ 18 ಮತ್ತು ಎ. 19ರಂದು ನಡೆಯಲಿದೆ. ಮೇ 28ಕ್ಕೆ ಫ‌ಲಿತಾಂಶ ಪ್ರಕಟಗೊಳ್ಳಲಿದ್ದು ಜೂನ್‌ 25ಕ್ಕೆ ಮೊದಲ ಸುತ್ತಿನ ಕೌನ್ಸಿಲಿಂಗ್‌, ಜುಲೈ 10ಕ್ಕೆ ಎರಡನೇ ಸುತ್ತಿನ ಕೌನ್ಸಿಲಿಂಗ್‌ ಮತ್ತು ಜು. 25 ಎರಡನೇ ಸುತ್ತಿನ ಮುಂದುವರಿದ ಕೌನ್ಸಿಲಿಂಗ್‌ ನಡೆಯಲಿದ್ದು ಆಗಸ್ಟ್‌ 1ಕ್ಕೆ ತರಗತಿ ಆರಂಭವಾಗಲಿದೆ.

ಇನ್ನು ಎಂಬಿಎ, ಎಂಸಿಎ, ಎಂಟೆಕ್‌ ಮತ್ತು ಎಂ. ಅರ್ಕ್‌ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸಿಇಟಿ ಜೂನ್‌ 30ಕ್ಕೆ ನಿಗದಿಯಾಗಿದ್ದು ಆಗಸ್ಟ್‌ 5ಕ್ಕೆ ಫ‌ಲಿತಾಂಶ ಪ್ರಕಟಗೊಳ್ಳಲಿದೆ. ಮೊದಲ ಸುತ್ತಿನ ಕೌನ್ಸಿಲಿಂಗ್‌ ಆ.26, ಎರಡನೇ ಸುತ್ತಿನ ಕೌನ್ಸಿಲಿಂಗ್‌ ಸೆ.4ಕ್ಕೆ ನಡೆಯಲಿದ್ದು ಸೆ.10ಕ್ಕೆ ತರಗತಿಗಳು ಆರಂಭವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next