ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ಒಟ್ಟು 116 ಶಾಸಕರ ಬಲ ಇರುವ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ 116 ಶಾಸಕರನ್ನು ಹೊಂದಿದ್ದು,ಬಹುಮತ ಹೊಂದಿದ್ದೇವೆ ಎಂದು ಪ್ರಮಾಣಪತ್ರ ಸಲ್ಲಿಸಲಾಗಿದೆ. ಬಿಜೆಪಿಯವರು ಯಾವ ರೀತಿ ಶಾಸಕರ ಬೆಂಬಲ ತೋರಿಸುತ್ತಾರೋ ನೋಡೋಣ ಎಂದು ಸವಾಲು ಹಾಕಿದರು.
ಬಿಜೆಪಿಯವರಿಗೆ ಜನಾಭಿಪ್ರಾಯವೂ ಇಲ್ಲ, ಜನಾಶೀರ್ವಾದವೂ ಇಲ್ಲ. 104 ಶಾಸಕರ ಜತೆ ಇನ್ನಿಬ್ಬರು ಶಾಸಕರನ್ನು ಬಿಜೆಪಿಯವರು ಆಮಿಷ ತೋರಿಸಿ ಸೆಳೆದುಕೊಂಡಿದ್ದಾರೆ. ಇದನ್ನು ಅವರು ಇನ್ನೂ ಮುಂದುವರಿಸಲಿದ್ದು, ಹೀಗಾಗಿ ನಮ್ಮ ಮೊದಲ ಆದ್ಯತೆ ಶಾಸಕರನ್ನು ರಕ್ಷಿಸುವುದು ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಒಂದು ಲಕ್ಷ ರೂ.ವರೆಗಿನ ಸಾಲವನ್ನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಮನ್ನಾ ಮಾಡುವುದಾಗಿ ಹೇಳಿದ್ದ ಯಡಿಯೂರಪ್ಪ ಅವರು ಈಗೇಕೆ ಕಾಲಾವಕಾಶ ತೆಗೆದುಕೊಂಡರು ಎಂದು ಪ್ರಶ್ನಿಸಿದ ಅವರು,ಕೇಂದ್ರದಿಂದ ಅನುದಾನ ತಂದು ಸಾಲಮನ್ನಾ ಮಾಡಬಹುದಿತ್ತಲ್ಲವೇ? ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಸಾಲ ಮನ್ನಾ ಮಾಡುವ ಬಗ್ಗೆ ಪ್ರಸ್ತಾಪಿಸಿದಾಗ ನಮ್ಮಲ್ಲಿ ನೋಟು ಎಣಿಸುವ ಯಂತ್ರ ಇಲ್ಲ ಎಂದು ಹೇಳಿದ್ದರು. ರೈತರ ಸಾಲಮನ್ನಾ
ಮಾಡಲು ಬದಟಛಿತೆ ಬೇಕೇ ಹೊರತು ಕಾಲಾವಕಾಶ ಬೇಕಾಗಿಲ್ಲ ಎಂದು ವ್ಯಂಗ್ಯವಾಡಿದರು.