Advertisement
ಮಕ್ಕಳ ಆಹಾರದ ಮೆನು ಬದಲಾಗಿರುವುದರಿಂದ ಅಂಗನವಾಡಿಗಳಿಗೆ ಎರಡು ತಿಂಗಳಿಂದ ಆಹಾರ ಸಾಮಗ್ರಿ ಪೂರೈಕೆಯೂ ಸರಿಯಾಗಿ ಆಗುತ್ತಿರಲಿಲ್ಲ. ಈ ತಿಂಗಳ 10ನೇ ತಾರೀಕಿನ ಅನಂತರದಲ್ಲಿ ಎಲ್ಲ ಅಂಗನವಾಡಿಗಳಿಗೂ ಹೊಸ ಮೆನುವಿನಂತೆ ಆಹಾರ ಸಾಮಗ್ರಿ ಪೂರೈಕೆಯಾಗಲಿದೆ.
ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಅನ್ನ ಸಾಂಬಾರ್ ನೀಡಲಾಗುತ್ತಿತ್ತು. ಇದರ ಜತೆಗೆ ಚಿಕ್ಕಿ, ಮೊಟ್ಟೆ, ಪುಷ್ಟಿ ಪೌಡರ್ ಕೂಡ ಕೊಡುತ್ತಿದ್ದರು. ತಿಂಗಳಿಗೆ 20ರಿಂದ 25 ಮೊಟ್ಟೆ ನೀಡಲಾಗುತ್ತಿತ್ತು. ಮಾರುಕಟ್ಟೆ ದರ ಹಾಗೂ ಅನುದಾನದ ಲಭ್ಯತೆಯ ಆಧಾರದಲ್ಲಿ ಕೆಲವೊಮ್ಮೆ ಕಡಿಮೆ ಪ್ರಮಾಣದಲ್ಲಿ ಮೊಟ್ಟೆ ವಿತರಿಸಲಾಗುತ್ತದೆ.
Related Articles
6 ತಿಂಗಳಿಂದ 3 ವರ್ಷದ ಸಾಮಾನ್ಯ ಮಗುವಿಗೆ(ಮನೆಗೆ ಕೊಂಡೊಯ್ಯಲು) ಬೆಲ್ಲ ಸಹಿತ/ರಹಿತವಾದ ಪುಷ್ಟಿ ಪೌಡರ್ (ನಿತ್ಯ 135 ಗ್ರಾಂ.), ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗುವಿಗೆ ಬೆಲ್ಲ ಸಹಿತ/ರಹಿತವಾದ ಪುಷ್ಟಿ ಪೌಡರ್ (ನಿತ್ಯ220 ಗ್ರಾಂ.), 3 ವರ್ಷದಿಂದ 6 ವರ್ಷದ ಸಾಮಾನ್ಯ / ಅಪೌಷ್ಟಿಕತೆಯಿಂದ ಬಳಲುತ್ತಿರವ ಮಗುವಿಗೆ ಗೋದಿ ಲಡ್ಡು, ಸಿಹಿ ಪುಷ್ಠಿ ಪೌಡರ್, ಸಿರಿಧಾನ್ಯ ಲಡ್ಡು (ನಿತ್ಯ 25 ಗ್ರಾಂ.), ಇದರ ಜತೆಗೆ ಅನ್ನ ಸಾಂಬಾರು/ಉಪ್ಪಿಟ್ಟು /ಅನ್ನ ಕಿಚ್ಚಿಡಿ ನೀಡಲು ಸೂಚಿಸಲಾಗಿದೆ. ಪ್ರಾದೇಶಿಕತೆಗೆ ತಕ್ಕಂತೆ ಆಯ್ಕೆಗೂ ಅವಕಾಶ ನೀಡಲಾಗಿದೆ. ಉಭಯ ಜಿಲ್ಲೆಯಲ್ಲಿ ಬೆಲ್ಲ ಸಹಿತ ಪುಷ್ಟಿ ಪೌಡರ್, ಸಿರಿಧಾನ್ಯ ಲಡ್ಡು, ಅನ್ನಸಾಂಬರ್ ಹಾಗೂ ಅನ್ನ ಕಿಚ್ಚಡಿ ನೀಡಲು ನಿರ್ಧರಿಸಲಾಗಿದೆ. ಗರ್ಭಿಣಿ, ಬಾಣಂತಿಯರಿಗೆ ಬೆಲ್ಲ ರಹಿತ ಪುಷ್ಟಿ ಪೌಡರ್ ಹಾಗೂ ಮಧ್ಯಾಹ್ನ ಅನ್ನ ಸಾಂಬಾರ ಸಹಿತ ಬಿಸಿಯೂಟ ನೀಡಲಾಗುತ್ತದೆ.
Advertisement
ಡಿಎಫ್‌ಆರ್‌ಎಲ್ ಅನುಮೋದನೆಹೊಸ ಮೆನುವಿಗೆ ಮೈಸೂರಿನ ರಕ್ಷಣ ಆಹಾರ ಸಂಶೋಧನ ಪ್ರಯೋಗಾಲಯ (ಡಿಎಫ್‌ಆರ್‌ಎಲ್) ಅನುಮೋದನೆ ನೀಡಿದೆ. ಎಂಎಸ್‌ಪಿಸಿ ಮತ್ತು 3 ಅರ್ಹ ಬಿಐಎಸ್ ಪರವಾನಿಗೆ ಹೊಂದಿದ ಮಹಿಳಾ ಗುಂಪುಗಳ ನಡುವೆ ಆಹಾರ ಪೂರೈಕೆ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ಪರವಾನಿಗೆ ಹೊಂದಿದ ಮಹಿಳಾ ಗುಂಪುಗಳು ಮತ್ತು ಡಿಎಫ್‌ಆರ್‌ಎಲ್ ಅನುಮೋದಿಸಿದ ಸೂತ್ರದಂತೆಯೇ ಮಕ್ಕಳಿಗೆ ಆಹಾರ ಪೂರೈಕೆಯಾಗಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಪೂರೈಕೆಯಲ್ಲಿ ವ್ಯತ್ಯಯ
ಹೊಸ ಮೆನು ನೀಡುವ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಳೆದ ಎರಡು ತಿಂಗಳಿಂದ ಅಂಗನವಾಡಿಗಳಿಗೆ ಸರಿಯಾಗಿ ಆಹಾರ ಪೂರೈಕೆ ಮಾಡಿರಲಿಲ್ಲ. ಇದ್ದರಿಂದ ಸ್ಥಳೀಯವಾಗಿ ಅಂಗನವಾಡಿ ಕಾರ್ಯಕರ್ತೆಯರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳು ಕೂಡ ಕಾರ್ಯಕರ್ತೆಯರಿಗೆ ಸರಿಯಾದ ಮಾಹಿತಿಯನ್ನು ಒದಗಿಸಿರಲಿಲ್ಲ. ಮೆನು ಬದಲಾವಣೆ ಆಗಲಿದೆ ಎಂಬುದಷ್ಟೇ ಹೇಳಿದ್ದರು. ಪೂರೈಕೆಯಾಗದೇ ಇರಲು ಸ್ಪಷ್ಟ ಕಾರಣ ತಿಳಿಸಿರಲಿಲ್ಲ. ಕೆಲವು ಅಂಗನವಾಡಿಗಳಲ್ಲಿ ಸ್ಥಳೀಯರು ಆಹಾರ ಸಾಮಗ್ರಿ ಬಾರದೇ ಇರುವುದಕ್ಕೆ ಕಾರ್ಯಕರ್ತೆಯರೊಂದಿಗೆ ವಾಗ್ವಾದಕ್ಕೂ ಇಳಿದಿದ್ದರು. ನ್ಯಾಯಾಲಯದಆದೇಶದಂತೆ ಅಂಗನವಾಡಿಗಳಿಗೆ ಹೊಸ ಮೆನು ಬರಲಿದೆ. ಜ.10 ಅನಂತರದಲ್ಲಿ ಎಲ್ಲ ಅಂಗನವಾಡಿಗಳಿಗೂ ಆಹಾರ ಸಾಮಗ್ರಿ ತಲುಪಲಿದೆ. ಹೊಸ ಮೆನುವಿನಂತೆ ಆಹಾರ ಸಾಮಗ್ರಿ ಒದಗಿಸಲು ಸ್ವಲ್ಪ ಕಾಲಾವಕಾಶ ಅಗತ್ಯವಿದ್ದರಿಂದ ಪೂರೈಕೆಯಲ್ಲಿ ವ್ಯತ್ಯಾಸವಾಗಿತ್ತು. ಇನ್ನು ಮುಂದೆ ಚಿಕ್ಕಿ ಇರುವುದಿಲ್ಲ. ಬದಲಾಗಿ ಸಿರಿಧಾನ್ಯದ ಲಡ್ಡು ನೀಡಲಾಗುತ್ತದೆ.
– ಶ್ಯಾಮಲಾ, ಉಪನಿರ್ದೇಶಕರು,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ – ರಾಜು ಖಾರ್ವಿ ಕೊಡೇರಿ