ಯಾದಗಿರಿ: ತಾಲೂಕಿನ ಬಂದಳ್ಳಿ ಹಿರಿಯರ ಕೇಂದ್ರಕ್ಕೆ ಜಿಪಂ ಸಿಇಒ ಭೇಟಿ ನೀಡಿ ಪರಿಶೀಲಿಸಿದರು. ಈ ಕೇಂದ್ರ ಸ್ಥಾಪನೆಯಿಂದ ಹಿರಿಯ ನಾಗರಿಕರಿಗೆ ಆಗಿರುವ ಪ್ರಯೋಜನೆಗಳ ಬಗ್ಗೆ ಅಲ್ಲಿರುವ ಹಿರಿಯ ನಾಗರಿಕರೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅ
ಲ್ಲದೇ ಹಿರಿಯ ನಾಗರಿಕರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲು ಬೇಕಾಗುವ ಅಗತ್ಯ ಸಲಕರಣೆ ಸಾಮಗ್ರಿಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡುವಂತೆ ಕಲಿಕೆ ಟಾಟಾ ಟ್ರಸ್ಟ್ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾಲೂಕಿನ ಎಲ್ಲ 64 ವಸತಿ ನಿಲಯಗಳಿಗೆ ಒಂದೇ ದಿನದಲ್ಲಿ ಅಧಿಕಾರಿಗಳು ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ವರದಿ ನೀಡಲು ಸೂಚಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ವರದಿ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರೇಶ ಆರ್. ನಾಯ್ಕ ತಿಳಿಸಿದ್ದಾರೆ.
ಸೆ. 12ರಂದು ಜಿಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸೂಚಿಸಿದ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಯಾದಗಿರಿ ತಾಲೂಕಿನ ಎಲ್ಲ 64 ವಸತಿ ನಿಲಯಗಳಿಗೆ ಒಂದೇ ದಿನ ಸಂಜೆ ಭೇಟಿ ನೀಡಿ ವರದಿ ನೀಡುವಂತೆ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಅದರನ್ವಯ ನೇಮಿಸಲಾದ ಅಧಿಕಾರಿಗಳು ಸೆ. 12ರ ಸಂಜೆ 5ಕ್ಕೆ ಯಾದಗಿರಿ ತಾಲೂಕಿನ ಎಲ್ಲ ವಸತಿ ನಿಲಯಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಿದ್ದಾರೆ. ಇದೊಂದು ವಿನೂತನ ರೀತಿಯ ಕ್ರಮವಾಗಿದ್ದು, ಹಂತ ಹಂತವಾಗಿ ವಸತಿ ನಿಲಯಗಳಲ್ಲಿ ಅವಶ್ಯಕ ಇರುವ ಎಲ್ಲ ಮೂಲ ಸೌಕರ್ಯಗಳನ್ನು ಸಿಗುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.