ಉದ್ಯಮ ಕ್ಷೇತ್ರದಲ್ಲಿ ತಿಂಗಳ ಕೊನೆಯಲ್ಲಿ ಎಲ್ಲರೂ ಬಯಸುವುದು ಕೈ ತುಂಬಾ ಸಂಬಳ. ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ, ವೃತ್ತಿ ಧರ್ಮ ಪಾಲಿಸುತ್ತಿದ್ದರೂ, ಮಾತ್ರವಲ್ಲದೇ ತನ್ನ ಸಹೋದ್ಯೋಗಿಗಳೊಂದಿಗೆ ಎಷ್ಟೇ ಆಪ್ತ ಬಂಧವನ್ನು ಹೊಂದಿದ್ದರೂ ಕೂಡ ಸಂಬಳದ ವಿಚಾರದಲ್ಲಿ ಯಾರೂ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಕೈಗೆ ಸೇರುವ ಸಂಬಳ ಒಂದೆರಡು ದಿನ ತಡವಾದರೂ ಕೂಡ ಎಲ್ಲಾ ಯೋಜನೆಗಳು ಬದಲಾಗುತ್ತವೆ, ಮಾತ್ರವಲ್ಲದೆ ಮಾನಸಿಕ ಸ್ಥಿತಿಯೂ ಬದಲಾವಣೆಯಾಗುತ್ತದೆ.
ತನಗೆ ಬಂದ ಸಂಬಳದ ಪಾಲಿನಲ್ಲಿ ನನಗಿಷ್ಟೇ ಸಾಕು, ಉಳಿದದ್ದನ್ನು ಸಂಸ್ಥೆಯ ಸಹೋದ್ಯೋಗಿಗಳಿಗೆ ಅಥವಾ ಉದ್ಯೋಗಿಗಳಿಗೆ ನೀಡಿ, ಅದರಿಂದ ಸಂಸ್ಥೆಯ ಬೆಳವಣಿಗೆಗೂ ಲಾಭವಾಗುತ್ತದೆ. ಉದ್ಯೋಗಿಗಳಿಗೆ ಕಾರ್ಯ ಕ್ಷೇತ್ರದಲ್ಲಿ ಒಂದು ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆ ಎನ್ನುವ ವಿಶಾಲವಾದ ಮನಸ್ಸು ಯಾರಿಗಿದೆ ಹೇಳಿ..? ಖಂಡಿತಾ ಇಲ್ಲ. ಕೆಲಸದ ವಿಷಯದಲ್ಲಿ ಅವರೆಷ್ಟು ಒಳ್ಳೆಯತನದಿಂದ ಇದ್ದರೂ, ಹಣದ ವಿಚಾರದಲ್ಲಿ ಎಲ್ಲರೂ ಹತ್ತಾರು ಬಾರಿ ಯೋಚಿಸಿಯೇ ಮುಂದೆ ನಡೆಯುತ್ತಾರೆ. ಆದರೇ, ಇಲ್ಲೊಂದು ಸಂಸ್ಥೆಯ ಸಿಇಒ ಅಥವಾ ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿ ತನಗೆ ಬರುವ ಸಂಬಳದ 90 ಶೇಕಡಾ ಪಾಲನ್ನು ಸಂಸ್ಥೆಯ ಇತರೆ ಉದ್ಯೋಗಿಗಳಿಗೆ ನೀಡುವಂತೆ ಧಾರಾಳತನವನ್ನು ಮೆರೆದಿದ್ದಾರೆ.
ಇದನ್ನೂ ಓದಿ : ದಿಢೀರ್ ಇಳಿಕೆ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 30,549 ಕೋವಿಡ್ ಪ್ರಕರಣ ಪತ್ತೆ
ಕ್ರೆಡಿಟ್ ಕಾರ್ಡ್ ಸಂಸ್ಕರಣಾ ಕಂಪನಿ ಗ್ರಾವಿಟಿ ಪೇಮೆಂಟ್ಸ್ ಮುನ್ನಡೆಸುತ್ತಿರುವ ಡಾನ್ ಪ್ರೈಸ್, ತಮಗೆ ಬರುತ್ತಿರುವ ಒಟ್ಟಾರೆ ಸಂಬಳದ ಒಟ್ಟು 90 ಶೇಕಡಾವನ್ನು ಕಡಿತಗೊಳಿಸಿಕೊಂಡಿದ್ದಾರೆ. ಉಳಿದದ್ದನ್ನು ತನ್ನ ಅಡಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ನೀಡುವುದಕ್ಕೆ ಮುಂದೆ ಬಂದು ಉದ್ಯೋಗಿಗಳಿಗೆ ಸಿಹಿ ಉಣಿಸಿದ್ದಲ್ಲದೇ ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ.
ತನ್ನ ಸಹೋದ್ಯೋಗಿ ರೋಸಿಟಾ ಎಂಬಾಕೆಗೆ ಆದ ಆರ್ಥಿಕ ಸಮಸ್ಯೆಯನ್ನು ಗಮನಿಸಿದ ಡಾನ್, ಈ ನಿರ್ಧಾರಕ್ಕೆ ಬಂದಿದ್ದಾರೆ. ಜೀವನಕ್ಕೆ ಯಾರಿಗೂ ಕಷ್ಟವಾಗಬಾರದು, ಜೀವನವನ್ನು ಯಾವುದೇ ಕೊರತೆ ಇಲ್ಲದೆ ಬದುಕುವಂತಹ ಸಂಬಳ ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೂ ಇರಬೇಕು ಎನ್ನುವುದೆ ತನ್ನ ಉದ್ದೇಶ ಎನ್ನುತ್ತಾರೆ ಡಾನ್.
ಈ ಬಗ್ಗೆ ತನ್ನ ಟ್ವೀಟರ್ ಖಾತೆಯ ಮೂಲಕ ಇತ್ತೀಚೆಗೆ ಬರೆದುಕೊಂಡಿರುವ ಡಾನ್, ಫಾಸ್ಟ್ ಫುಡ್ ಚೈನ್ ನಲ್ಲಿ ಮ್ಯಾನೇಜರ್ ಆಗಲು ತರಬೇತಿ ಪಡೆಯುತ್ತಿದ್ದ ರೋಸಿಟಾ ಎಂಬ ಉದ್ಯೋಗಿಗೆ ಹಣದ ಸಮಸ್ಯೆ ಇದೆ ಎಂದು ಅರಿತುಕೊಂಡೆ. ಇದರಿಂದ ನನ್ನ ಮನ ಕಲುಕಿತು ಎಂದು ಡಾನ್ ಬರೆದುಕೊಂಡಿದ್ದರು.
ಸಂಸ್ಥೆಯಿಂದ ಬರುತ್ತಿದ್ದ ಆದಾಯದಿಂದ ಜೀವನ ನಿರ್ವಹಣೆ ಕಷ್ಟ ಸಾಧ್ಯ ಎಂಬ ಉದ್ದೇಶದಿಂದ ರೋಸಿಟಾ, ಇನ್ನೊಂದು ಉದ್ಯೋಗವನ್ನು ಪ್ರಾರಂಭಿಸಬೇಕಾದ ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಸಿಇಒ ಡಾನ್, ತನ್ನ ಸಂಸ್ಥೆಯಲ್ಲಿ ದುಡಿಯುತ್ತಿರುವ ಯಾವೊಬ್ಬ ಉದ್ಯೋಗಿಗೂ ಸಂಬಳದ ಕಾರಣದಿಂದ ಜೀವನ ನಿರ್ವಹಣೆಗೆ ಕಷ್ಟವಾಗಬಾರದು ಎಂಬ ಉದ್ದೇಶದಿಂದ ತನಗೆ ಬರುತ್ತಿದ್ದ ಆದಾಯದ ಶೇಕಡಾ 90 ರಷ್ಟು ಪಾಲನ್ನು ತನ್ನ ಸಹೋದ್ಯೋಗಿಗಳಿಗೆ ನೀಡಲು ನಿರ್ಧಾರಿಸಿದ್ದಾಗಿ ಡಾನ್ ಹೇಳುತ್ತಾರೆ.
‘ರೋಸಿಟಾ ತನ್ನ ಮತ್ತೊಂದು ವೃತ್ತಿಯ ಬಗ್ಗೆ ಯಾವುದೇ ವಿಚಾರವನ್ನು ಬಿಟ್ಟುಕೊಡುತ್ತಿರಲಿಲ್ಲ. ತನನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎಂಬ ಭಯದಿಂದ ವರ್ತಿಸುತ್ತಿದ್ದಳು. ಛೇ, ನಾನು ನನ್ನ ಸಂಸ್ಥೆಯಲ್ಲಿ ಎಂತಹ ಭಯದ ವಾತಾವರಣವನ್ನು ಸೃಷ್ಟಿ ಮಾಡಿದ್ದೇನೆ..? ಯಾಕೆ ಹೀಗೆ ಈ ವಾತಾವರಣ, ಸಂಸ್ಕೃತಿ ಸಂಸ್ಥೆಯಲ್ಲಿ ಸೃಷ್ಟಿಯಾಯಿತು..? ಒಬ್ಬ ಉದ್ಯೋಗಿಗೆ ಸಂಸ್ಥೆಯಲ್ಲಿ ಪೂರಕವಾದ ವಾತಾವರಣವಿಲ್ಲದಿರಿವುದು ಎಂತಹ ಸ್ಥಿತಿ..? ಎಂದು ಡಾನ್ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ.
‘ರೊಸಿಟಾ ಕಾಲೇಜ್ ಗ್ರಾಡ್ ಆದರೆ ವರ್ಷಕ್ಕೆ $ 30,000 ಗಳಿಸುತ್ತಿದ್ದಳು. ಅವಳು ಸಂಸ್ಥೆಯ ಕೆಲಸವನ್ನು 5 ಕ್ಕೆ ಮುಗಿಸುತ್ತಾಳೆ ಮತ್ತು ಒಂದುವರೆ ವರ್ಷದಿಂದ 5: 30 ರಿಂದ 11 ರ ತನಕ ಪ್ರತಿ ದಿನ ರಾತ್ರಿಯೂ ಮೆಕ್ ಡೋನಾಲ್ಡ್ ನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಕೆಲಸ ಮಾಡುತ್ತಿದ್ದಾಳೆ.
ತನ್ನ ಇನ್ನೊಂದು ಉದ್ಯೋಗವನ್ನು ತೊರೆಯಬೇಕಾದರೇ ತನಗೆ $ 10,000 (£ 7,156.50) ಹೆಚ್ಚಿಸುವ ಅಗತ್ಯವಿದೆ ಎಂದು ರೋಸಿಟಾ ಡಾನ್ ಗೆ ಹೇಳಿಕೊಂಡಾಗ, ಕೆಲವು ಹೆಚ್ಚುವರಿ ಕರ್ತವ್ಯಗಳನ್ನು ನಿಭಾಯಿಸುವುದಾರೇ, ವೇತನದ ಪ್ರಮಾಣವನ್ನು ಹೆಚ್ಚಳ ಮಾಡಲಾಗುವುದೆಂದು ಡಾನ್ ಭರವಸೆ ನೀಡುತ್ತಾರೆ.
ಆಕೆ ಈಗ ಮಾನಸಿಕವಾಗಿಯೂ, ಆರ್ಥಿಕವಾಗಿಯೂ ಸುಧಾರಿಸಿದ್ದಾಳೆ. ತನ್ನ ಮತ್ತೊಂದು ಉದ್ಯೋಗವನ್ನು ತ್ಯಜಿಸಿ ಸಂಪೂರ್ಣ ಸಂಸ್ಥೆಯ ಕಾರ್ಯದಲ್ಲಿಯೇ ತೊಡಗಿಕೊಂಡಿದ್ದಾಳೆ. ಆಕೆಯ ಕಾರ್ಯಕ್ಷಮತೆಯೂ ಸುಧಾರಿಸಿದೆ ಎಂದು ಹೆಮ್ಮೆಯಿಂದ ತನ್ನ ಉದ್ಯೋಗಿ ರೋಸಿಟಾ ಬಗ್ಗೆ ಹೇಳುತ್ತಾರೆ ಡಾನ್ ಪ್ರೈಸ್.
ಅಷ್ಟೇ ಅಲ್ಲ, ಇದಾದ ಬಳಿಕ ಕೆಲವೇ ದಿನಗಳ ಅಂತರದಲ್ಲಿ ರೋಸಿಟಾ ಸಂಸ್ಥೆಯ ಆಪರೇಷನ್ ಡೈರೆಕ್ಟರ್ ಆಗಿ ಬಡ್ತಿ ಪಡೆಯುತ್ತಾಳೆ. ಮಾತ್ರವಲ್ಲದೇ ರೋಸಿಟಾ ಯಶಸ್ಸಿನ ಪರಿಣಾಮವಾಗಿ, ಅವರು ಕಂಪನಿಯ ಎಲ್ಲಾ ಉದ್ಯೋಗಿಗಳ ಕನಿಷ್ಠ ಸಂಬಳವನ್ನು $ 70,000 ಕ್ಕೆ ಹೆಚ್ಚಿಸಲು ನಿರ್ಧರಿಸುತ್ತಾರೆ.
ಇದು, ಗ್ರಾವಿಟಿ ಪೇಮೆಂಟ್ಸ್ ಕಂಪೆನಿಯ ಸಿಇಒ ತೆಗೆದುಕೊಂಡ ನಿರ್ಧಾರದ ಬಗ್ಗೆ ಜಗತ್ತೇ ಬೆರಗುಗಣ್ಣಿನಿಂದ ಕಾಣುವ ಹಾಗೆ ಮಾಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
‘ಮಿಲಿಯನೇರ್ ಜೀವನಶೈಲಿಯನ್ನು ನಾನು ಕಳೆದುಕೊಂಡಿಲ್ಲ : ಡಾನ್
ಡಾನ್ ತನ್ನ ಸ್ವಂತ ವೇತನ ಶೇಕಡಾ 90 ರಷ್ಟನ್ನು ಕಡಿತಗೊಳಿಸಿ, ಅಂದರೇ, ಅಂದಾಜು $ 1.1M (£ 787,017) ನಿಂದ $ 70,000 ಗೆ ಕಡಿತಗೊಳಿಸಿಕೊಂಡು, ತನ್ನ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸಲು ಮುಂದಾದರು.
‘ಮಿಲಿಯನೇರ್ ಜೀವನಶೈಲಿಯನ್ನು ನಾನು ಕಳೆದುಕೊಂಡಿಲ್ಲ. ನಾನು ನನ್ನ ಸಂಸ್ಥೆಯ ಉದ್ಯೋಗಿಗಳ ಪಾಲಿಗೆ ಒಬ್ಬ ಒಳ್ಳೆಯ ಬಾಸ್ ಆಗಿದ್ದೇನೆ ಎನ್ನುವುದರ ಬಗ್ಗೆ ನನಗೆ ಸಂತೋಷವಿದೆ. ನೆಮ್ಮದಿ ಇದೆ. ಸಂಸ್ಥೆಯ ನೂರಾರು ವಿದ್ಯಾರ್ಥಿಗಳ ಮುಖದಲ್ಲಿ ಸಂತಸ ಕಂಡಿದ್ದೇನೆ. ಶ್ರೀಮಂತನಾಗಿ ಬದುಕುವುದೆಂದರೇ, ಹಣ ಸಂಪಾದನೆ ಮಾಡುವುದಕ್ಕಿಂತ ಇನ್ನೊಬ್ಬರ ಮುಖದಲ್ಲಿ ಸಂತಸ ಕಾಣುವುದೇ ಆಗಿದೆ ಎನ್ನುತ್ತಾರೆ ಡಾನ್.
ಕಂಪೆನಿಯ ಆದಾಯ ಮೂರು ಪಟ್ಟು ಏರಿಕೆ..!
ಸಿಇಒ ಡಾನ್ ಪ್ರೈಸ್ ತೆಗೆದುಕೊಂಡ ಈ ನಿರ್ಧಾರದಿಂದ ಕಂಪೆನಿಗೆ ಏನು ಪ್ರಯೋಜನವಾಯಿತು ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಹೌದು, ಡಾನ್ ತೆಗೆದುಕೊಂಡ ನಿರ್ಧಾರದಿಂದ ಕಂಪನಿಯ ಆದಾಯವು ಮೂರು ಪಟ್ಟು ಹೆಚ್ಚಾಗಿದೆ. ಗ್ರಾಹಕರ ಸಂಖ್ಯೆ ದ್ವಿಗುಣವಾಗಿದೆ, ಸಂಸ್ಥೆಯ ಉದ್ಯೋಗಿಗಳ ಬದುಕು ಮೊದಲಿಗಿಂತ ಚೆನ್ನಾಗಿದ್ದು, ಸಂಸ್ಥೆಯ ಉದ್ಯೋಗಿಗಳು ಹೊಸದಾಗಿ ಖರೀದಿಸಿದ ಮನೆಗಳು 10 ಪಟ್ಟು ಹೆಚ್ಚಾಗಿದೆ. ಉದ್ಯೋಗಿಗಳು ದಾಖಲೆಯ ಮಾರಾಟವನ್ನು ನಡೆಸಿದ್ದಾರೆ ಮತ್ತು ನಾವು ಈಗ 20,000 ಸಣ್ಣ ವ್ಯಾಪಾರ ಗ್ರಾಹಕರನ್ನು ಹೊಂದಿದ್ದೇವೆ ಎನ್ನುತ್ತದೆ ಕಂಪೆನಿ.
ಈ ಬಗ್ಗೆ ಹರ್ಷ ವ್ಯಕ್ತ ಪಡಿಸುವ ಡಾನ್, ‘ನಾನು ಇನ್ನೂ ಉತ್ತಮ ಬಾಸ್ ಆಗಲು ಕಲಿಯುತ್ತಿದ್ದೇನೆ. ಇತರ ಸಿಇಒಗಳಿಗೆ ಹೋಲಿಸಿದಾಗ ಮಾತ್ರ ನಾನು “ಚೆನ್ನಾಗಿ” ಕಾಣುತ್ತೇನೆ. ನಾನು ಇನ್ನಷ್ಟು ಚೆನ್ನಾಗಿ ನನ್ನ ಉದ್ಯೋಗಿಗಳೊಂದಿಗೆ ಇರಲು ಬಯಸುತ್ತೇನೆ ಎನ್ನುತ್ತಾರೆ.
‘ನಿಮ್ಮ ಉದ್ಯೋಗಿಗಳನ್ನು ಕೇಳಿ, ಅವರನ್ನು ನಂಬಿ, ಅವರಿಗೆ ಸಂಸ್ಥೆಯಲ್ಲಿ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿ. ಕಂಪನಿಯ ಯಶಸ್ಸಿಗೆ ಉದ್ಯೋಗಿಗಳೇ ಕಾರಣ. ಸಿಇಒಗಳಲ್ಲ. ’ ಎಂದು ಅಬಿಪ್ರಾಯ ವ್ಯಕ್ತಪಡಿಸುತ್ತಾರೆ ಡಾನ್.
-ಶ್ರೀರಾಜ್ ವಕ್ವಾಡಿ
ಇದನ್ನೂ ಓದಿ : ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ; ಓರ್ವನ ರಕ್ಷಣೆ, ಇನ್ನಿಬ್ಬರಿಗಾಗಿ ಮುಂದುವರಿದ ಶೋಧಕಾರ್ಯ