Advertisement

Virat Kohli: ಸೆಂಚುರಿ ನಂ.50- ವಿರಾಟ್‌ ದಾಖಲೆ ಅವಿಸ್ಮರಣೀಯ

12:22 AM Nov 16, 2023 | Team Udayavani |

ಮುಂಬಯಿಯ ವಾಂಖೇಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ ವಿರುದ್ಧ ಸೆಮಿಫೈನಲ್‌ ಪಂದ್ಯ ನಡೆದಿದ್ದು, ಇದರಲ್ಲಿ ಭಾರತದ ಅಗ್ರ ಬ್ಯಾಟರ್‌ ವಿರಾಟ್‌ ಕೊಹ್ಲಿ 50 ಶತಕ ಬಾರಿಸಿದ ದಾಖಲೆ ಮಾಡಿದ್ದಾರೆ. ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ಹೆಸರಲ್ಲಿ ಇದ್ದ ದಾಖಲೆಯನ್ನು ಮುರಿದಿರುವ ಕೊಹ್ಲಿ, ತಮ್ಮ ಬ್ಯಾಟಿಂಗ್‌ ವೈಭವದ ವಿರಾಟ ದರ್ಶನ ಮಾಡಿಸಿದ್ದಾರೆ.

Advertisement

ಸಚಿನ್‌ ತೆಂಡೂಲ್ಕರ್‌ ಅವರು 49 ಶತಕ ಬಾರಿಸಿದ್ದು, ಇದುವರೆಗಿನ ದಾಖಲೆಯಾಗಿತ್ತು. ಅಂದರೆ ಸಚಿನ್‌ ತೆಂಡೂಲ್ಕರ್‌ 463 ಪಂದ್ಯಗಳನ್ನು ಆಡಿ 49 ಶತಕ ಮತ್ತು 96 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 18,426 ರನ್‌ ಬಾರಿಸಿದ್ದರೆ, ಶೇ.44.83 ಆವರೇಜ್‌ ಇದೆ. ಹಾಗೆಯೇ ವಿರಾಟ್‌ ಕೊಹ್ಲಿ ಅವರು 291 ಪಂದ್ಯಗಳಲ್ಲಿ 50 ಶತಕ ಮತ್ತು 71 ಅರ್ಧಶತಕ ಬಾರಿಸಿದ್ದಾರೆ. ಒಟ್ಟಾರೆಯಾಗಿ 13,794 ರನ್‌ ಮತ್ತು ಶೇ.58.44ರಷ್ಟು ಆವರೇಜ್‌ ಇದೆ.

ಭಾರತದ ಕ್ರಿಕೆಟ್‌ ಲೋಕದಲ್ಲಿ ಸಚಿನ್‌ ತೆಂಡೂಲ್ಕರ್‌ ಅವರದ್ದು ಅಗ್ರಸ್ಥಾನ. ಭಾರತದ ಕ್ರಿಕೆಟ್‌ ಎಂದ ಕೂಡಲೇ, ಮೊದಲಿಗೆ ನೆನಪಾಗುವುದು ಸಚಿನ್‌ ತೆಂಡೂಲ್ಕರ್‌ ಅವರೇ. ಕೇವಲ ಏಕದಿನ ಕ್ರಿಕೆಟ್‌ ಅಷ್ಟೇ ಅಲ್ಲ, ಟೆಸ್ಟ್‌ನಲ್ಲಿಯೂ ಸಚಿನ್‌ ಅಮೋಘ ದಾಖಲೆ ಮಾಡಿದ್ದಾರೆ. ಇಂಥ ಕ್ರಿಕೆಟಿಗನ ದಾಖಲೆ ಮುರಿಯುವುದು ಎಂದರೆ ಅದು ಅಸಾಮಾನ್ಯ ಗೌರವವೇ ಹೌದು. ಜತೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಚಿನ್‌ ದಾಖಲೆ ಮುರಿಯುವುದು ಅಸಾಧ್ಯ ಎಂಬ ಮಾತುಗಳೂ ಇವೆ. ಎಲ್ಲ ಮಾದರಿಯ ದಾಖಲೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಸಚಿನ್‌ 664 ಪಂದ್ಯಗಳಿಂದ 100 ಶತಕ, 164 ಅರ್ಧಶತಕ ಗಳಿಸಿದ್ದಾರೆ. ಇನ್ನು ವಿರಾಟ್‌ ಕೊಹ್ಲಿ 517 ಪಂದ್ಯಗಳಿಂದ 80 ಶತಕ, 137 ಅರ್ಧಶತಕ ಗಳಿಸಿದ್ದಾರೆ.

ಇನ್ನು ವಿರಾಟ್‌ ಕೊಹ್ಲಿಗೂ ಭಾರತ ಕ್ರಿಕೆಟ್‌ ಲೋಕದಲ್ಲಿ ಅವರದ್ದೇ ಆದ ಅತ್ಯಮೋಘ ಸ್ಥಾನವಿದೆ. ವಿರಾಟ್‌ ಕೊಹ್ಲಿ ನಾಯಕನಾಗಿಯೂ ಮತ್ತು ತಂಡದ ಸದಸ್ಯನಾಗಿಯೂ ಅಮೋಘ ಸಾಧನೆ ಮಾಡಿದ್ದಾರೆ. ಅತ್ಯಂತ ಕಡಿಮೆ ಪಂದ್ಯಗಳಲ್ಲಿ ಈ ಪ್ರಮಾಣದ ಸಾಧನೆ ಮಾಡುವುದು ಸಾಮಾನ್ಯವೇನಲ್ಲ. ಅದರಲ್ಲೂ ಬುಧವಾರ ಸಚಿನ್‌ ತೆಂಡೂಲ್ಕರ್‌ ಅವರ ಮುಂದೆಯೇ, ಈ ದಾಖಲೆ ಮಾಡಿರುವುದು ಹೆಮ್ಮೆಯೇ ಸರಿ. ಇದಕ್ಕೆ ಬದಲಾಗಿ ಸಚಿನ್‌ ಅವರೇ ಭಾರತೀಯರೊಬ್ಬರು ತಮ್ಮ ಸಾಧನೆ ಮುರಿದಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ. ಕೊಹ್ಲಿ ಅವರಿಗೆ ಇದಕ್ಕಿಂತ ಹೆಚ್ಚಿನ ಶಹಬ್ಟಾಸ್‌ ಬೇರೆ ಏನಿಲ್ಲ ಎಂದೇ ಹೇಳಬಹುದು.

ಮುಂದೆಯೂ ದೇಶದಲ್ಲಿ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿಯವರಂಥ ಅಸಾಧಾರಣ ಪ್ರತಿಭೆಗಳು ಹೊರಬರಬೇಕು. ಮುಂದಿನವರು ಇಂಥ ದಾಖಲೆಗಳನ್ನು ಮುರಿದಾಗಲೇ, ಹಿಂದೆ ದಾಖಲೆ ಮಾಡಿದವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಸದ್ಯ ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌ರಂಥವರು ಕೂಡ ಉತ್ತಮವಾಗಿ ಆಡುತ್ತಿದ್ದು, ಮುಂದಿನ ದಿನಗಳಲ್ಲಿ ಇವರಿಗೆ ಹೆಚ್ಚಿನ ಭವಿಷ್ಯವಿದೆ ಎಂದೇ ಹೇಳಲಾಗುತ್ತಿದೆ. ಇದರ ಜತೆಗೆ ಹೊಸ ಪೀಳಿಗೆಯ ಆಟಗಾರರೂ ಬಂದರೆ, ಭಾರತದ ಕ್ರಿಕೆಟ್‌ ಇನ್ನಷ್ಟು ಶ್ರೀಮಂತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next