Advertisement

ಸಂಗೀತ ಋಷಿ ಆರ್‌. ಕೆ. ಶ್ರೀಕಂಠನ್‌ ಶತಮಾನ ಸ್ಮರಣೆ

10:09 AM Jan 20, 2020 | mahesh |

ಆರ್‌. ಕೆ. ಶ್ರೀಕಂಠನ್‌ ಕರ್ನಾಟಕ ಸಂಗೀತದ ಮೇರು ವಿದ್ವಾಂಸರು. ಅವರು ಇದ್ದಿದ್ದರೆ ಈ ಹೊತ್ತಿಗೆ 100 ವರ್ಷ. ಹೀಗಾಗಿ, ಆರ್‌. ಕೆ. ಶ್ರೀಕಂಠನ್‌ ಟ್ರಸ್ಟ್‌ ಒಂದು ವಾರ ಕಾಲ ಬೆಂಗಳೂರಿನ ಸೇವಾಸದ‌ನದಲ್ಲಿ ಸಂಗೀತ ಸಮಾರಾಧನೆ ಏರ್ಪಡಿಸಿದೆ. ಈ ನೆಪದಲ್ಲಿ ವಿದ್ವಾನ್‌ ರುದ್ರಪಟ್ಟಂ ಎಸ್‌. ರಮಾಕಾಂತ್‌ ತಮ್ಮ ತೀರ್ಥರೂಪರನ್ನು ನೆನಪಿಸಿಕೊಂಡಿದ್ದಾರೆ…

Advertisement

ಅಣ್ಣ ಅಂದ್ರೆ ಕರ್ನಾಟಕ ಸಂಗೀತದ ಹಿಮಾಲಯ ಇದ್ದಾಗೆ. ಅವರಿಗೆ ಸಂಗೀತ ಬಿಟ್ಟು ಬೇರೆ ಗೊತ್ತಿರಲಿಲ್ಲ; ಸಂಗೀತವೇ ಜಗತ್ತಾಗಿತ್ತು. ಪ್ರತಿ ನಿಮಿಷ, ದಿನದ 24 ಗಂಟೆ, ವರ್ಷದ 365 ದಿನವೂ ಸಂಗೀತದ ಜೊತೆ ಜೀವಿಸಿದವರು. ಅಣ್ಣನ ಜೊತೆ ಜೊತೆಗೇ ಎಷ್ಟೋ ಕೀರ್ತನೆಗಳಿಗೂ ವಯಸ್ಸಾಗಿವೆ. ಮನೆಯಲ್ಲಿ ಇದ್ದರಂತೂ ಒಂದು ತಾವೇ ಹಾಡುತ್ತಾ ಕುಳಿತುಕೊಳ್ಳೋರು. ಇಲ್ಲವೇ ವಿದ್ಯಾರ್ಥಿಗಳಿಗೆ ಪಾಠ ಮಾಡೋರು. ಇವೆರಡೂ ಇಲ್ಲ ಅಂದರೆ, ಸಂಗೀತ ಕಛೇರಿಯಲ್ಲಿ ಇರುತ್ತಿದ್ದರು. ಅಣ್ಣನನ್ನು ನಾನು ನೋಡಿದ್ದೇ ಹೀಗೆ. ನಾನು ಯಾವಾಗ ನೋಡಿದರೂ ಅವರು ಯಾವುದೋ ರಾಗದ ಜೊತೆ ಇರುತ್ತಿದ್ದರು. ಸುಮ್ಮನೆ ಕೂತು ತಾಸುಗಟ್ಟಲೆ ಹಾಡುತ್ತಿದ್ದರು. ಅಣ್ಣ ಯಾವತ್ತೂ ನನ್ನನ್ನ ಮುಂದೆ ಕೂರಿಸಿಕೊಂಡು, ಹೀಗೇ ಹಾಡಬೇಕು ಅಂತ ಹೇಳಲಿಲ್ಲ. ಬದಲಾಗಿ, ತಾವು ಹಾಡುತ್ತಲೇ “ಇದು ಹೀಗೆ’ ಅಂತ ತೋರಿಸಿಬಿಡುತ್ತಿದ್ದರು.

ನಮ್ಮ ಮನೆಯಲ್ಲಿ ಪುಟ್ಟ ಹಾಲ್‌ ಇದೆ. ಅದರ ಪಕ್ಕ ಒಂದು ರೂಮಿದೆ. ಅದೇ ಅಣ್ಣನ ಸಂಗೀತಾಲಯ. ನಮಗಿಂತಲೂ ಹೆಚ್ಚು ಅಣ್ಣನ ಸಂಗೀತ ಆಲಿಸಿದ್ದು ಈ ರೂಮ್‌ ಮತ್ತು ಅದರ ಗೋಡೆಗಳು. ಅಲ್ಲಿ ಅಣ್ಣ “ಅ’ಕಾರ ಸಾಧನೆಗೆ ಕೂತರೆ ಇಡೀ ಜಗತ್ತೇ ಮರೆತು ಹೋಗುತ್ತಿದ್ದರು. ಸುತ್ತಲೂ ಶಿಷ್ಯರು, ಅವರ ಮಧ್ಯೆ ಅಣ್ಣ. ಸಾಧನೆಗೆ ಕೂತರೆ ಮಧ್ಯಾಹ್ನ, ಸಂಜೆಗಳೆರಡೂ ಬೆರೆತು ಹೋದರೂ ಇವರಿಗೆ ತಿಳಿಯುತ್ತಿರಲಿಲ್ಲ. ಸಂಗೀತವನ್ನು ಒಲಿಸಿಕೊಳ್ಳುವುದಲ್ಲ, ದಕ್ಕಿಸಿಕೊಳ್ಳುವುದೂ ಅಲ್ಲ, ಸಂಗೀತವನ್ನೇ ಉಸಿರಾಡುವ ರೀತಿ ಹೀಗೆ ಅಂತ ತೋರಿಸಿಕೊಟ್ಟರು.

ಅಣ್ಣನ ದಾಖಲೆ ಏನೆಂದರೆ, ಅವರಿಗೆ ಇಹಲೋಕ ತ್ಯಜಿಸುವ ಹೊತ್ತಿಗೆ 95 ವರ್ಷ ಆಗಿತ್ತು. ಸುಮಾರು 83 ವರ್ಷಗಳ ಕಾಲ ಹಾಡಿದ್ದಾರೆ. ತೀರಿಕೊಳ್ಳುವ ಒಂದು ವಾರ ಮೊದಲು ಅದ್ಭುತವಾದ ಕಛೇರಿ ಕೊಟ್ಟಿದ್ದರು. ನಾನು ಕಳೆದ 55 ವರ್ಷದಿಂದ ಹಾಡುತ್ತಿದ್ದೇನೆ. ಅವರ ಜೊತೆಯಲ್ಲೇ 45 ವರ್ಷಗಳ ಕಾಲ ಹಾಡಿದ್ದೇನೆ. ವೇದಿಕೆ ಮೇಲೆ ಒಬ್ಬ ಕಲಾವಿದ ಹೇಗಿರಬೇಕು ಅನ್ನೋದಕ್ಕೆ ಇಡೀ ಸಂಗೀತ ಕ್ಷೇತ್ರಕ್ಕೆ ಅಣ್ಣ ಒಂದು ರೀತಿ ಮಾದರಿ. “ಹೀಗಿರಬೇಕು ಕಣಯ್ನಾ’ ಅಂತ ನನಗೆ ಯಾವತ್ತು ಹೇಳಿಕೊಟ್ಟವರಲ್ಲ; ಆದರೆ, ಬದುಕಿ ತೋರಿಸಿದವರು. ಪ್ರೇಕ್ಷಕರ ಮನೋಭಿಲಾಷೆಯನ್ನು ಗ್ರಹಿಸಿ ಕೀರ್ತನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಮೊದಲು ವರ್ಣ, ಆಮೇಲೆ ಗಣಪತಿ ಸ್ತುತಿ, ಇದರ ಬೆನ್ನಿಗೆ ಚಿಕ್ಕ ಕೃತಿ, ಅದಕ್ಕೆ ಸ್ವಲ್ಪ ರಾಗಾಲಾಪನೆ ಇರೋದು. ಇದು ಮುಗಿದ ನಂತರ ಎರಡು ಮಧ್ಯಮಕಾಲದ ಕೃತಿಗಳನ್ನು ಹಾಡೋರು, ವಿಸ್ತಾರವಾದ ರಾಗಾಲಾಪನೆ ಮಾಡಿ, ಸ್ವರ ಹಾಕಿ ಹಾಡೋರು. ಪಕ್ಕವಾದ್ಯಗಾರರನ್ನು ಹುರಿದುಂಬಿಸೋರು. ಅಣ್ಣ ವೇದಿಕೆಯಲ್ಲಿದ್ದಾಗ ಚಪ್ಪಾಳೆ ಕಡೆ ಗಮನ ಕೊಡುತ್ತಿರಲಿಲ್ಲ. ಬದಲಿಗೆ ಸಂಗೀತದಲ್ಲಿ ಮುಳುಗಿರೋರು. ಆಗಾಗ, ಎದ್ದು ಬಂದು ಪ್ರೇಕ್ಷಕರ ಮೂಡನ್ನು ಗಮನಿಸೋರು. ಹೀಗೆ, ಸಂಗೀತದ ಒಳಗೂ, ಹೊರಗೂ ಹೇಗೆಲ್ಲ ಓಡಾಡುತ್ತಿರಬೇಕು ಅನ್ನೋದನ್ನು ಅಣ್ಣ ತೋರಿಸಿಕೊಟ್ಟಿದ್ದಾರೆ.

ಹೀಗೊಂದು ಘಟನೆ ನಡೆಯಿತು. ಶಿಕಾಗೋದಲ್ಲಿ ಕಾರ್ಯಕ್ರಮ ಇತ್ತು. ಅಣ್ಣ ಹಾಡಿದರು, ಎಲ್ಲರಿಗೂ ಬಹಳ ಖುಷಿ ಆಯಿತು. ಆಯೋಜಕರು ಮೈಕ್‌ ಹಿಡಿದರು. ಬಹುಶಃ ವಂದನಾರ್ಪಣೆ ಮಾಡ್ತಾರೆ ಅಂತ ನಾವು ಅಂದುಕೊಂಡರೆ, ಅವರು- “ನೋಡಿ, ಆರ್‌.ಕೆ. ಶ್ರೀಕಂಠನ್‌ ಅವರು ಕೇವಲ ಗಾಯಕರಲ್ಲ. ಈ ವಯಸ್ಸಲ್ಲೂ ಹೀಗೆಲ್ಲಾ ಹಾಡ್ತಾರೆ ಅಂದರೆ, ಇವರು ತ್ಯಾಗರಾಜರ ಇನ್ನೊಂದು ರೂಪವೇ ಇರಬೇಕು. ಯಾರೂ ಈ ಸೌಭಾಗ್ಯವನ್ನು ಕಳೆದುಕೊಳ್ಳಬೇಡಿ. ಅವರ ಪಾದಮುಟ್ಟಿ ನಮಸ್ಕರಸಿ’ ಅಂದರು. ಪ್ರೇಕ್ಷಕರು ಕ್ಯೂ ನಿಂತು ಅಣ್ಣನ ಪಾದಕ್ಕೆ ನಮಸ್ಕಾರ ಮಾಡಿದರು. ಅಣ್ಣನ ಕಾಲು ಮುಂದೆ ಕೊಟ್ಟು, ಯಾವುದೋ ರಾಗದ ಜೊತೆ ಇದ್ದು ಬಿಟ್ಟಿದ್ದರು. ಇದನ್ನು ನೋಡುತ್ತಿದ್ದ ನನಗೆ, ಕಲಾವಿದರು ದೇವರ ಸಮಾನರಾಗುವುದು ಉಂಟೆ ಅಂತ ಅನಿಸಿಬಿಟ್ಟಿತು.

Advertisement

ಅಣ್ಣ ಶಿಸ್ತು ಅಂದರೆ ಶಿಸ್ತು. ಆಯೋಜಕರು ಎರಡು ಗಂಟೆ ಕಛೇರಿ ಅಂದರೆ, ಇವರು 1 ಗಂಟೆ 55 ನಿಮಿಷಕ್ಕೆ ನಿಲ್ಲಿಸೋರು. ಊಟದಲ್ಲೂ ಬಹಳ ಅಚ್ಚಕಟ್ಟು, ನಿಯಮಿತ ಆಹಾರಿ. ಇವರಿಗೆ ಬಾದಾಮಿ ಇರಬೇಕು. ಅದನ್ನು ಅಮ್ಮನೇ ಸಿಪ್ಪೆ ಬಿಡಿಸಿ, ಕುಟ್ಟಿ, ಪೇಸ್ಟ್‌ ಮಾಡಿ ಇಟ್ಟಿರೋರು. ನುಣ್ಣಗೆ ಇರಬೇಕು ಅಂತ ತಾವೇ ಪರೀಕ್ಷೆ ಮಾಡೋರು. ಅದನ್ನು ಹಾಲಿಗೆ ಹಾಕಿಕೊಂಡು ಕುಡಿಯುತ್ತಿದ್ದರು.

ಇಷ್ಟೇ ಅಲ್ಲ, ಬೆಳಗ್ಗೆ ಹೊತ್ತು ಸಂಗೀತ ಕಲಿಯಲು ಬರುವ ವಿದ್ಯಾರ್ಥಿಗಳಿಗೂ ಕುಡಿಸೋರು. ಇದರಲ್ಲಿ ವಿಟಮಿನ್‌ “ಇ’ ಇರುತ್ತೆ. ಗಂಟಲಿಗೆ ಬಹಳ ಒಳ್ಳೆಯದು ಅಂತ ವ್ಯಾಖ್ಯಾನ ಬೇರೆ ಕೊಡೋರು.

ಹೀಗೆ, ಅಣ್ಣನ ಈ ಸಾಧನೆ ಹಾಗೂ ಬದುಕಿನ ಅಂಚಿಗೂ ಹಾಡುತ್ತಲೇ ಇದ್ದ ಬೆರಗಿನ ಹಿಂದೆ ಅಮ್ಮನಿದ್ದಳು. ಏಕೆಂದರೆ, ಮನೆಯ ಜವಾಬ್ದಾರಿ ಸಂಪೂರ್ಣ ತಾವೇ ಹೊತ್ತುಕೊಂಡು ಅಣ್ಣನನ್ನು ಸಾಧನೆಯ ಹಾದಿಯಲ್ಲಿ ಬಿಟ್ಟಿದ್ದರು. ಹೀಗಾಗಿ, ಅಣ್ಣ ಮನೆಯ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಬದಲಿಗೆ ರಾಗಗಳು, ಹೊಸ ಸ್ವರ ಪ್ರಸ್ತಾವನೆಗಳ ಹಿಂದೆ ಓಡಾಡುತ್ತಿದ್ದರು. ಸಂದರ್ಶನವೊಂದರಲ್ಲಿ ಅಣ್ಣನನ್ನು- “ನೀವು ಇಷ್ಟೆಲ್ಲ ಸಾಧನೆ ಮಾಡಿದ್ದೀರಿ. ಇದರಲ್ಲಿ ನಿಮ್ಮ ಹೆಂಡತಿ ಪಾತ್ರ ಏನು’ ಅಂತ ಸಂದರ್ಶಕರು ಕೇಳಿದರು. ಅದಕ್ಕೆ ಅಣ್ಣ, “ನನ್ನ ಸಂಗೀತಕ್ಕೆ ಅವಳೇ ಆಧಾರ ಶ್ರುತಿ’ ಅಂದುಬಿಟ್ಟರು. ಅಂದರೆ, ಅಣ್ಣ ಧೀಮಂತ ವ್ಯಕ್ತಿಯಾಗಲೂ, ಶ್ರೀಮಂತ ಕಲಾವಿದರಾಗಲೂ ಅಮ್ಮನ ಕೊಡುಗೆ ಬಹಳ ಇತ್ತು.

ಅಣ್ಣ ಯಾವಾಗಲು ಮೈಸೂರಿನ ಒಂದು ಘಟನೆ ಹೇಳ್ಳೋರು. ಅವರು ಚಿಕ್ಕವರಿದ್ದಾಗ ಮೈಸೂರು ಅರಮನೆಯಲ್ಲಿ ಹಾಡಬೇಕು ಅಂತ ಆಸೆ ಇತ್ತಂತೆ. ಅಲ್ಲೆಲ್ಲ ಹಾಡಬೇಕು ಅಂದರೆ ಸುಮ್ಮನೆ ಅಲ್ಲ. ಮೊದಲು ದನಿ ಮತ್ತು ಸಂಗೀತ ಸಾಮರ್ಥ್ಯಗಳನ್ನು ಪರೀಕ್ಷಿಸಿ ಆಮೇಲೆ ಅವಕಾಶ ಕೊಡುತ್ತಿದ್ದರು. ಅರಮನೆಯಲ್ಲಿ ಈ ಕೆಲಸ ಮಾಡುತ್ತಿದ್ದವರು ಮದರಾಸಿನಿಂದ ಬಂದ ಮುತ್ತಯ್ಯ ಭಾಗವತರ್‌. ಇವರು ಮೈಸೂರಿನಲ್ಲಿದ್ದ ನಮ್ಮ ದೊಡ್ಡಪ್ಪ ( ಶ್ರೀಕಂಠನ್‌ ಅವರ ಅಣ್ಣ) ವೆಂಕಟರಾಮ್‌ ಶಾಸ್ತ್ರಿಗಳಿಗೆ ಪರಿಚಯ ಇದ್ದರು. ಅವರು ತಮ್ಮನನ್ನು ಮುತ್ತಯ್ಯನವರ ಬಳಿ ಕರೆದುಕೊಂಡು ಹೋಗಿ, “ಇವನು ನನ್ನ ತಮ್ಮ. ಬಹಳ ಚೆನ್ನಾಗಿ ಹಾಡ್ತಾನೆ. ಅರಮನೆಯಲ್ಲಿ ಹಾಡುವ ಒಂದು ಅವಕಾಶ ಕೊಡಿ’ ಅಂತ ಕೇಳಿದರಂತೆ. ಆಗ, “ಎಲ್ಲಪ್ಪ, ಹಾಡು ನೋಡೋಣ’ ಅಂತ ಅಣ್ಣನ ಹಾಡಿನ ರೀತಿ ಕೇಳಿಸಿಕೊಂಡ ಭಾಗವತರ್‌ ದಿಗೂಢರಾದರಂತೆ. ಈ ಚಿಕ್ಕ ವಯಸ್ಸಿಗೆ ಎಂಥ ಪಾಂಡಿತ್ಯ. ಆದರೆ, ವಯಸ್ಸು ಚಿಕ್ಕದು. ಈಗಲೇ ವೇದಿಕೆ ಹತ್ತಿಸುವುದು ಬೇಡ. ಇನ್ನು ಮೂರು ವರ್ಷ ಕಳೆಯಲಿ. ನಾನೇ ಅವಕಾಶ ಕೊಡುತ್ತೇನೆ ಅಂದರಂತೆ.

ಹೀಗೆ, ಅಣ್ಣ ಅನುಭವಗಳನ್ನು ನನ್ನ ಮುಂದೆ ತೆರೆದಿಡುತ್ತಲೇ ಬದುಕಿನ ಪಾಠಗಳನ್ನು ಮಾಡುತ್ತಿದ್ದರು.

ರುದ್ರಪಟ್ಣಮ್‌ ಎಸ್‌. ರಮಾಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next