Advertisement
ನಗರದ ಎಎಸ್‌ಎಂ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವೀ.ವಿ ಸಂಘದ ಅಧ್ಯಕ್ಷ ಅಲ್ಲಂ ಬಸವರಾಜ ಹಾಗೂ ಗೌರವ ಕಾರ್ಯದರ್ಶಿ ಉಡೇದ ಬಸವರಾಜ್ ಮಾತನಾಡಿ, ಹೈ.ಕ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿ ಲಕ್ಷಾಂತರ ಜನರ ಜೀವನಗಳನ್ನು ರೂಪಿಸಿದ ವೀರಶೈವ ವಿದ್ಯಾವರ್ಧಕ ಸಂಘ ಸಮಾಜದ ಎಲ್ಲ ವರ್ಗಗಳ ಶೈಕ್ಷಣಿಕ ಅವಶ್ಯಕತೆ ಪೂರೈಸಿದೆ ಎಂದರು.
ವಿದ್ಯಾವರ್ಧಕ ಸಂಘದ ಸ್ಥಾಪನೆಯ ಬೀಜ ವಿಚಾರ ಮಾಡಿದ್ದು, ಮೊಳಕೆಯೊಡೆದಿದ್ದು 1909ರಲ್ಲಿ ಬಳ್ಳಾರಿಯಲ್ಲಿ 1909ರ ಡಿಸೆಂಬರ್ 27 ರಿಂದ 30ರವರೆಗೆ ನಡೆದ ಅಖೀಲ ಭಾರತ ವೀರಶೈವ ಮಹಾಸಭಾದ 5ನೇ ಮಹಾ ವೇಶನದಲ್ಲಿ ಹಾನಗಲ್ ಕುಮಾರಸ್ವಾಮಿಗಳ ಮತ್ತು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳ ದೂರದರ್ಶಿತ್ವ ಮತ್ತು ದೃಢ ಸಂಕಲ್ಪದ ಮೇರೆಗೆ ಮಂಡಿತವಾದ ನಿರ್ಣಯದಲ್ಲಿ ವಿದ್ಯಾವರ್ಧಕ ಸಂಘವು ಅಂಕುರಗೊಂಡು, 1912ರಲ್ಲಿ ಪಲ್ಲವಿಸಿ, 1916ರಲ್ಲಿ ಹೂವಾಗಿ ಅರಳುವುದರ ಮೂಲಕ ಗುರು ಹಿರಿಯರ ಸಂಕಲ್ಪಕ್ಕೆ ಮೂರ್ತರೂಪ ನೀಡಲಾಯಿತು.
Related Articles
ವೀ.ವಿ ಸಂಘದ ಸ್ಥಾಪನೆಗೊಂಡ ದಿನದಿಂದಲೂ ಹಿಂದುಳಿದ ಬಳ್ಳಾರಿ ಜಿಲ್ಲೆಯ ಮೂಲಭೂತ ಅವಶ್ಯಕತೆ ಎನಿಸಿದ್ದ ಆರಂಭಿಕ ಶಿಕ್ಷಣ ಒದಗಿಸುವುದನ್ನು ತನ್ನ ಉದ್ದೇಶಗಳಲ್ಲಿ ಕೇಂದ್ರೀಕರಿಸಿಕೊಂಡಿತ್ತು. ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ಮಹಿಳೆಯರಿಗೆ ಶಿಕ್ಷಣ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾನುಕೂಲ, ಪ್ರಾಥಮಿಕ ಶಿಕ್ಷಣ, ಹಿರಿಯ ಪ್ರಾಥಮಿಕ, ಪ್ರೌಢ ಶಿಕ್ಷಣ, ತಾಂತ್ರಿಕ ಶಿಕ್ಷಣ ಇದಕ್ಕೆ ಪೂರಕವಾಗಿ ಉಚಿತ ಪ್ರಸಾದ ನಿಲಯಗಳ ಸ್ಥಾಪನೆ, ಸ್ಥಳೀಯ ಸಂಪನ್ಮೂಲಗಳ ಕ್ರೋಢೀಕರಣ ಇತ್ಯಾದಿ ಉದ್ದೇಶಗಳೊಂದಿಗೆ ಸ್ಥಾಪನೆಗೊಂಡು ಬಳ್ಳಾರಿ ಜಿಲ್ಲೆ ಮಾತ್ರವಲ್ಲದೇ ದಾವಣಗೆರೆ, ಕೊಪ್ಪಳ ಜಿಲ್ಲೆಗಳಿಗೂ ಕೂಡಾ ವಿಸ್ತರಣೆಗೊಂಡು ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡು, ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.
Advertisement
1924ರಲ್ಲಿ ಹೀರದ ಸೂಗಮ್ಮ ಕನ್ನಡ ಪ್ರಾಥಮಿಕ ಶಾಲೆ, 1942 ರಲ್ಲಿ ಶೆಟ್ರ ಗುರುಶಾಂತಪ್ಪ ಪ್ರೌಢಶಾಲೆ, 1945ರಲ್ಲಿ ವೀರಶೈವ ಮಹಾವಿದ್ಯಾಲಯ ಸ್ಥಾಪನೆಗೊಂಡು ತದನಂತರ ವಿವಿಧ ಕೋರ್ಸ್‌ಗಳ ಕಾಲೇಜುಗಳು ಆರಂಭಿಸಲ್ಪಟ್ಟವು, ಶಿಕ್ಷಣ ಮಹಾವಿದ್ಯಾಲಯ, ಪದವಿ ಮಹಿಳಾ ಕಾಲೇಜ್, ಕಾನೂನು ಕಾಲೇಜ್ ಇಂಜಿನಿಯರಿಂಗ್ ಕಾಲೇಜ್, ಔಷಧೀಯ ವಿಜ್ಞಾನ ಕಾಲೇಜ್, ಪಾಲಿಟೆಕ್ನಿಕ್ ಕಾಲೇಜ್, ಮ್ಯಾನೇಜ್‌ಮೆಂಟ್ ಕಾಲೇಜ್ ಆರಂಭಿಸಿರುವ ಬಗ್ಗೆ ವಿವರಿಸಿದರು.
ಆಧುನಿಕ, ಅತ್ಯಾಧುನಿಕ ಯುಗದ ಶೈಕ್ಷಣಿಕ ಅಗತ್ಯವಾದ ವೃತ್ತಿಪರ ಕೋರ್ಸ್ ಮತ್ತು ಸಂಘದ ಆಡಳಿತ ವ್ಯಾಪ್ತಿಯ 7 ಮಹಾವಿದ್ಯಾಲಯಗಳಲ್ಲಿ ಅನುದಾನ ರಹಿತ ಸ್ನಾತಕೋತ್ತರ ಪದವಿ ಕೇಂದ್ರಗಳನ್ನು ಆರಂಭಿಸಲಾಯಿತು ಎಂದು ಅಲ್ಲಂ ಬಸವರಾಜ್, ಉಡೇದ ಬಸವರಾಜ್ ತಿಳಿಸಿದರಲ್ಲದೇ, ವೀ.ವಿ ಸಂಘ ಶಿಶುವಿಹಾರದಿಂದ (ಎಲ್‌ಕೆಜಿಯಿಂದ) ಸ್ನಾತಕೋತ್ತರ ಪಡೆಯುವವರೆಗೆ (ಪಿಜಿವರೆಗೆ) ಜೀವಮಾನ ಪೂರ್ಣ ಶಿಕ್ಷಣವನ್ನು ನೀಡುವ ಮಹಾಕಾರ್ಯ ಪೂರೈಸಿದೆ ಎಂದು ಅವರು ಹೇಳಿದರು.
ಎರಡು ದಿನಗಳ ಸಮಾರಂಭಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ, ವಿಚಾರಗೋಷ್ಠಿ, ಉಪನ್ಯಾಸ, ಮನರಂಜನೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ವೀ.ವಿ ಸಂಘದ ಜಂಟಿ ಕಾರ್ಯದರ್ಶಿ ಐಗೋಳ ಚಿದಾನಂದ, ಖಜಾಂಚಿ ಮುಂಡಾಸದ ಮುಪ್ಪಣ್ಣ, ಸ್ವಾಗತ ಸಮಿತಿಯ ಅಧ್ಯಕ್ಷ ಜಾನೆಕುಂಟೆ ಸಣ್ಣ ಬಸವರಾಜ ಸೇರಿದಂತೆ ಕಾರ್ಯಕಾರಿ ಮಂಡಳಿ ಸದಸ್ಯರು, ವೀವಿ ಸಂಘದ ಪ್ರಮುಖರು ಉಪಸ್ಥಿತರಿದ್ದರು.