ಜಮ್ಮು: ಪೌರತ್ವ ತಿದ್ದುಪಡಿ ಕಾಯ್ದೆ 2019 ಹಾಗೂ ಪ್ರಸ್ತಾಪಿತ ದೇಶವ್ಯಾಪಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಜಾರಿ ವಿರುದ್ಧ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ದೇಶದಲ್ಲಿರುವ ರೋಹಿಂಗ್ಯಾಗಳನ್ನು ಗಡಿಪಾರು ಮಾಡುವುದು ಕೇಂದ್ರದ ಮುಂದಿನ ಹೆಜ್ಜೆಯಾಗಿದೆ ಎಂದು ಪ್ರಧಾನ ಮಂತ್ರಿ ಸಚಿವಾಲಯದ ಕೇಂದ್ರ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಮ್ಮು-ಕಾಶ್ಮೀರ ಸೇರಿದಂತೆ ಇಡೀ ದೇಶಕ್ಕೆ ಅನ್ವಯವಾಗಲಿದೆ. ಅದೇ ರೀತಿ ರೋಹಿಂಗ್ಯಾ ನಿರಾಶ್ರಿತರ ಕುರಿತು ಕೈಗೊಳ್ಳುವ ನಡೆ ಬಗ್ಗೆ ಮುಂದೇನು ನಡೆಯಲಿದೆ ಎಂಬುದು ತಿಳಿಯಲಿದೆ. ಅವರಿಗದು ತಿಳಿಯಲೇಬೇಕಾಗಿದೆ. ಈ ಕಾರ್ಯ ಅವರಿಗೆ ಅನುಕೂಲಕರವಾಗುವುದಿಲ್ಲ ಎಂದು ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
ಜಮ್ಮುವಿನ ಸಮಾರಂಭವೊಂದರಲ್ಲಿ ಮಾತನಾಡುತ್ತ ಜಿತೇಂದ್ರ ಸಿಂಗ್ ಈ ಹೇಳಿಕೆಯನ್ನು ನೀಡಿರುವುದಾಗಿ ಜೀ ನ್ಯೂಸ್ ವರದಿ ಮಾಡಿದೆ. ಜಮ್ಮುವಿನಲ್ಲಿ ರೋಹಿಂಗ್ಯಾಗಳು ಬೃಹತ್ ಪ್ರಮಾಣದಲ್ಲಿದ್ದಾರೆ ಎಂದಿರುವ ಸಿಂಗ್, ರೋಹಿಂಗ್ಯಾಗಳ ಪಟ್ಟಿಯನ್ನು ಸಿದ್ದಪಡಿಸುತ್ತಿದ್ದು, ಬಯೋಮೆಟ್ರಿಕ್ ಅನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರದಲ್ಲಿರುವ ಅಂಕಿ ಅಂಶದ ಪ್ರಕಾರ, ರೋಹಿಂಗ್ಯಾ ಮುಸ್ಲಿಮರು, ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ 13,700ಕ್ಕೂ ಅಧಿಕ ವಿದೇಶಿಯರು ಜಮ್ಮು ಮತ್ತು ಸಾಂಬಾ ಜಿಲ್ಲೆಯಲ್ಲಿದ್ದಾರೆ. ಇವರ ಜನಸಂಖ್ಯೆ 2006 ಮತ್ತು 2016ರ ನಡುವೆ ಆರು ಸಾವಿರಕ್ಕಿಂತಲೂ ಅಧಿಕವಾಗಿದೆ. ಮ್ಯಾನ್ಯಾರ್ ಸೇನೆ ರೋಹಿಂಗ್ಯಾಗಳ ವಿರುದ್ಧ ಕಿರುಕುಳ ನೀಡಲು ಆರಂಭಿಸಿದಾಗ ಭಾರತಕ್ಕೆ ಆಗಮಿಸಲು ಆರಂಭಿಸಿದ್ದರು ಎಂದು ಸಿಂಗ್ ತಿಳಿಸಿದ್ದಾರೆ.
ಗೃಹ ಸಚಿವಾಲಯದ ಪ್ರಕಾರ ಭಾರತದಲ್ಲಿ 14ಸಾವಿರಕ್ಕಿಂತಲೂ ಅಧಿಕ ರೋಹಿಂಗ್ಯಾ ನಿರಾಶ್ರಿತರು ಇದ್ದಾರೆ. ಆದರೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾಗಳ ಸಂಖ್ಯೆ 40 ಸಾವಿರ ಎಂದು ತಿಳಿಸಿದೆ.