ಶ್ರೀನಗರ : ಜಮಾತೆ ಎ ಇಸ್ಲಾಮಿ ಮೇಲೆ ಹೇರಿರುವ ನಿಷೇಧವನ್ನು ತುರ್ತಾಗಿ ಪುನರ್ ಪರಿಶೀಲಿಸುವಂತೆ ಜಮ್ಮು ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಈಗಾಗಲೇ ಈ ರೀತಿಯ ಆಗ್ರಹವನ್ನು ಕೇಂದ್ರ ಸರಕಾರಕ್ಕೆ ಮಾಡಿದ್ದಾರೆ.
ಜಮಾತ್ ಎ ಇಸ್ಲಾಮೀ ಸಂಘಟನೆಯನ್ನು ನಿಷೇಧಿಸುವುದರಿಂದ ಅದು ನಡೆಸುತ್ತಿರುವ ಹಲವಾರು ಶಾಲೆಗಳು, ಮಸೀದಿಗಳು ಮುಚ್ಚಿ ಹೋಗುವುದರಿಂದ ರಾಜ್ಯದಲ್ಲಿ ವ್ಯತಿರಿಕ್ತ ಸಾಮಾಜಿಕ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಉಮರ್ ಅಬ್ದುಲ್ಲ ಕೇಂದ್ರ ಸರಕಾರಕ್ಕೆ ಟ್ವಿಟರ್‌ನಲ್ಲಿ ಎಚ್ಚರಿಸಿದ್ದಾರೆ.
ಈ ನಡುವೆ ಜಮಾತ್ ಎ ಇಸ್ಲಾಮೀ ಸಂಘಟನೆಯ ಮೂವರು ಉನ್ನತ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ; ಜತೆಗೆ ಸಂಘಟನೆಗೆ ಸೇರಿದ ರಾಜ್ಯದ ಆರು ಜಿಲ್ಲೆಗಳಲ್ಲಿನ ಭಾರೀ ಪ್ರಮಾಣದ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಜಮಾತ್ ಎ ಇಸ್ಲಾಮೀ ಸಂಘಟನೆಯ ನಾಯಕರು ಮತ್ತು ಅದರ ಕಾರ್ಯಕರ್ತ ಕಚೇರಿಗಳು ಮತ್ತು ನಿವಾಸಗಳ ಮೇಲೆ ದಿನಪೂರ್ತಿ ನಡೆದಿದ್ದ ದಾಳಿಯಲ್ಲಿ ಅಕ್ರಮ ದಾಖಲೆ ಪತ್ರಗಳನ್ನು ಪರಿಶೀಲನೆಗಾಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ದಾಳಿಗಳು ಕಿಷ್‌ತ್‌ವಾರ್, ದೋಡಾ, ರಾಮಬನ, ಪೂಂಚ್, ರಜೌರಿ ಮತ್ತು ಜಮ್ಮು ಜಿಲ್ಲೆಗಳಲ್ಲಿ ನಡೆದಿದ್ದವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.