ಕೋಟ್ಟಯಂ : ಬೇನಾಮಿ ವ್ಯವಹಾರಗಳನ್ನು ತಡೆಯಲು ಹಾಗೂ ಚಿನ್ನದ ರೂಪದಲ್ಲಿ ಸಂಗ್ರಹಿಸಿಡಲಾಗಿರುವ ಕಾಳ ಸಂಪತ್ತನ್ನು ಬಯಲಿಗೆಳೆಯಲು ಸರಕಾರ ಕಠಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಇಂದಿಲ್ಲಿ ಹೇಳಿದರು.
ನೋಟು ಅಪನಗದೀಕರಣದ ಬಳಿಕ ಭ್ರಷ್ಟಾಚಾರ ಮತ್ತು ಕಪ್ಪು ಹಣ ವಿರುದ್ಧದ ಸಮರವನ್ನು ಸರಕಾರ ಮುಂದುವರಿಸಲಿದ್ದು ಶೀಘ್ರವೇ ಸರಕಾರ ಬೇನಾಮಿ ಆಸ್ತಿ ವಹಿವಾಟನ್ನು ತಡೆಯಲು ಕಠಿನ ಕಾನೂನನ್ನು ಅನುಷ್ಠಾನಿಸಲಿದೆ ಎಂದು ವೆಂಕಯ್ಯ ನಾಯ್ಡು ಎಚ್ಚರಿಸಿದರು.
ಈ ಸಂಬಂಧವಾಗಿ ಸರಕಾರವು 1988ರ ಬೇನಾಮಿ ವ್ಯವಹಾರಗಳ (ನಿಷೇಧ) ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲಿದೆ ಎಂದು ಸಚಿವ ನಾಯ್ಡು ಅವರು ಪಕ್ಷದ ರಾಜ್ಯ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ಈ ಕಾನೂನನ್ನು ಅನುಷ್ಠಾನಿಸಿರಲಿಲ್ಲ ಎಂದು ನಾಯ್ಡು ಹೇಳಿದರು. ಕಪ್ಪು ಹಣದ ವಿರುದ್ಧ ಸರಕಾರ ಕೈಗೊಂಡ ನೋಟು ಅಪನಗದೀಕರಣ ಕ್ರಮವು ವಿಫಲವಾಗಿದೆ ಎಂಬ ವಾದವನ್ನು ಅವರು ತಿರಸ್ಕರಿಸಿದರು.
ನೋಟು ಅಪನಗದೀಕರಣದ ಬಳಿಕ ಬ್ಯಾಂಕಿಗೆ ಮರಳಿರುವ ನಿಷೇಧಿತ ಹಣವು ಸಾಚಾ ಆಗಿದೆ ಎಂಬ ವಾದಕ್ಕೆ ಉತ್ತರಿಸಿದ ಸಚಿವ ನಾಯ್ಡು, ಕೂಲಂಕಷ ಪರಿಶೀಲನೆಯ ಬಳಿಕವೇ ಅದು ಶ್ರುತಪಡಲಿದೆ ಎಂದು ಹೇಳಿದರು. ನೋಟು ಅಪನಗದೀಕರಣ ಕ್ರಮದಿಂದ ದೇಶದ ಜನರಿಗೆ ಹಾಗೂ ಆರ್ಥಿಕತೆಗೆ ದೀರ್ಘ ಕಾಲದಲ್ಲಿ ಲಾಭವಾಗಲಿದೆ ಎಂದವರು ಹೇಳಿದರು.