Advertisement

Waqf Act ತಿದ್ದುಪಡಿಗೆ ಕೇಂದ್ರ ಸರಕಾರ ಸಿದ್ಧತೆ?

12:14 AM Aug 05, 2024 | Team Udayavani |

ಹೊಸದಿಲ್ಲಿ: ವಕ್ಫ್ ಕಾಯ್ದೆಗೆ ಬದಲಾವಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೆಜ್ಜೆ ಇರಿಸಿದ್ದು, ಈ ಕುರಿತ ಮಸೂದೆಯನ್ನು ಸಂಸತ್ತಿನ ಹಾಲಿ ಅಧಿ ವೇಶನದಲ್ಲೇ ಮಂಡನೆ ಮಾಡುವ ಸಾಧ್ಯತೆಇದೆ. ದೇಶದಲ್ಲಿ ಇರುವ ವಕ್ಫ್ ಆಸ್ತಿ ರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎನ್ನಲಾಗುತ್ತಿದೆ. ವಕ್ಫ್ ಮಂಡಳಿಯ ಆಸ್ತಿಪಾಸ್ತಿಗಳ ಪರಿಶೀಲನೆ ಕಡ್ಡಾಯ, ವಿವಾದಿತ ಆಸ್ತಿಗೂ ಕಡ್ಡಾಯ ದೃಢೀಕರಣ, ಮಂಡಳಿಯಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ, ಆಡಳಿತ ಮಂಡಳಿಯಲ್ಲಿ ಬದಲಾವಣೆ ಸಹಿತ 40ಕ್ಕೂ ಅಧಿಕ ತಿದ್ದುಪಡಿಗಳನ್ನು ತರುವ ಬಗ್ಗೆ ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ. ಕಳೆದ ಶುಕ್ರವಾರ ನಡೆದಿದ್ದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತಿದ್ದುಪಡಿಗಳಿಗೆ ಅನುಮೋದನೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

Advertisement

ದೇಶದಲ್ಲಿ ಸದ್ಯ 30 ವಕ್ಫ್ ಮಂಡಳಿಗಳು ಇವೆ. ಅವುಗಳ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳನ್ನು ಸಮರ್ಪಕವಾಗಿ ಗುರುತಿಸುವಿಕೆ, ಅವುಗಳ ವ್ಯಾಪ್ತಿ ನಿಗದಿ ಮಾಡುವುದು ಕೂಡ ಉದ್ದೇಶಿತ ಮಸೂದೆಯಲ್ಲಿ ಇದೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಸದ್ಯ ವಕ್ಫ್ ಮಂಡಳಿಯ ವ್ಯಾಪ್ತಿಯಲ್ಲಿ ಬರುವ “ಆಸ್ತಿ’ಯನ್ನು ದೃಢೀಕರಿಸುವ ನಿಟ್ಟಿನಲ್ಲಿ ಅವುಗಳನ್ನು ಸೂಕ್ತವಾಗಿ ಗುರುತಿಸುವಿಕೆಯೂ ಇನ್ನು ಕಡ್ಡಾಯವಾಗಲಿದೆ. ಈ ಮೂಲಕ ಆಸ್ತಿಯ ವಿಚಾರದಲ್ಲಿ ಉಂಟಾಗುವ ಅನಗತ್ಯ ವಿವಾದಗಳನ್ನು ತಪ್ಪಿಸಲು ಉದ್ದೇಶಿಸಲಾಗಿದೆ. ಸದ್ಯ ವಕ್ಫ್ ಮಂಡಳಿಗಳಿಗೆ ದೇಶದ ಯಾವುದೇ ಆಸ್ತಿಯನ್ನು “ವಕ್ಫ್ ಮಂಡಳಿಗೆ ಸೇರಿದ್ದು’ ಎಂದು ಹೇಳಿಕೊಳ್ಳಲು ಅವಕಾಶ ಇದೆ. ಈಗಿನ ಅಂದಾಜಿನ ಪ್ರಕಾರ ದೇಶದಲ್ಲಿ 8.7 ಲಕ್ಷ ಆಸ್ತಿಗಳು ಮಂಡಳಿ ವ್ಯಾಪ್ತಿಯಲ್ಲಿವೆ. ಅದು 9.4 ಲಕ್ಷ ಎಕರೆಗೂ ಅಧಿಕವಾಗಿದೆ.

ಮಹಿಳೆಯರಿಗೆ ಪ್ರಾತಿನಿಧ್ಯ
ಉದ್ದೇಶಿತ ತಿದ್ದುಪಡಿ ಮಸೂದೆಯಲ್ಲಿ ಕೇಂದ್ರ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರ ಜತೆಗೆ ಜಿಲ್ಲಾಧಿಕಾರಿಗಳೇ ಜಿಲ್ಲಾ ಮಟ್ಟದಲ್ಲಿ ವಕ್ಫ್ ಮಂಡಳಿಯ ಆಸ್ತಿ ನೋಡಿಕೊಳ್ಳುವಂತೆ ಮಾಡುವ ಪ್ರಸ್ತಾವವೂ ಕೇಂದ್ರದ ಮುಂದೆ ಇದೆ ಮೂಲಗಳು ತಿಳಿಸಿವೆ.

ತಿದ್ದುಪಡಿಗೆ ಒತ್ತಾಯವಿತ್ತು
ಮುಸ್ಲಿಂ ಬುದ್ಧಿಜೀವಿಗಳ ವಲಯ, ಮುಸ್ಲಿಂ ಸಮುದಾಯದ ಪಂಗಡಗಳಾಗಿರುವ ಶಿಯಾ, ಬೋಹ್ರಾ ಮತ್ತು ಇತರರಿಂದ ಕಾಯ್ದೆಯಲ್ಲಿ ಬದಲಾವಣೆಗೆ ಒತ್ತಾಯ ಕೇಳಿಬಂದಿತ್ತು. ಒಮಾನ್‌, ಸೌದಿ ಅರೇಬಿಯಾ ಮತ್ತು ಇತರ ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ಇರುವಂತೆ ವಕ್ಫ್ ಮಂಡಳಿ ಕಾಯ್ದೆಯಲ್ಲಿ ಬದಲು ಮಾಡಬೇಕು ಎಂಬ ಸಲಹೆಯೂ ವ್ಯಕ್ತವಾಗಿತ್ತು.

ಸದ್ಯ ಜಾರಿಯಲ್ಲಿರುವ 2013ರ ವಕ್ಫ್ ಕಾಯ್ದೆಗೆ ಯುಪಿಎ ಅವಧಿಯಲ್ಲಿ ತಿದ್ದುಪಡಿ ತರಲಾಗಿತ್ತು. ಅದರಲ್ಲಿ ಖಾಸಗಿ ಆಸ್ತಿಯನ್ನೂ ಮಂಡಳಿಗೆ ಸೇರಿದ್ದು ಎಂದು ಘೋಷಿಸುವ ವಿಚಾರ ತೀರಾ ಆಕ್ರೋಶಕ್ಕೆ ಕಾರಣವಾಗಿತ್ತು. ಇದಲ್ಲದೆ “ಔಕಾಫ್’ (ದಾನ ಮಾಡಲಾಗಿರುವ ಮತ್ತು ವಕ್ಫ್ ಆಸ್ತಿ ಎಂದು ಗುರುತಿಸಲಾಗಿರುವುದು) ವ್ಯವಸ್ಥೆಯನ್ನೂ ನಿಯಂತ್ರಿಸುವ ಉದ್ದೇಶ ಹೊಂದಲಾಗಿತ್ತು.

Advertisement

ಸಂಸದ ಒವೈಸಿ ಆಕ್ರೋಶ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಒವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದನದ ಕಲಾಪ ನಡೆಯುತ್ತಿರುವಾಗ ಸರಕಾರವು ಸಂಸತ್ತಿನ ಪಾರಮ್ಯವನ್ನು ಕಡೆಗಣಿಸುತ್ತಿದೆ. ಉದ್ದೇಶಿತ ತಿದ್ದುಪಡಿಯನ್ನು ಸರಕಾರ ಸಂಸತ್ತಿನ ಗಮನಕ್ಕೆ ತರಬೇಕಾಗಿತ್ತು. ಆದರೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಅಂಶಗಳನ್ನು ಗಮನಿಸಿದರೆ ಮೋದಿ ಸರಕಾರವು ಸಂಸತ್ತಿಗೆ ಇರುವ ಪಾರಮ್ಯವನ್ನು ಕಿತ್ತುಕೊಳ್ಳಲು ಮುಂದಾಗಿದೆ ಎನ್ನುವುದು ಸ್ಪಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಉದ್ದೇಶಿಸಿತ ತಿದ್ದುಪಡಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಉದ್ದೇಶ ಹೊಂದಿದೆ ಎಂದು ಒವೈಸಿ ಪ್ರತಿಕ್ರಿಯೆ ನೀಡಿದ್ದಾರೆ.

ಈಗಿನ ಕಾಯ್ದೆಯ ಇತಿಹಾಸ

-ದೇಶದಲ್ಲಿ ಮೊದಲು ವಕ್ಫ್ ಕಾಯ್ದೆ ಬಂದದ್ದು 1954ರಲ್ಲಿ

-1995ರಲ್ಲಿ ಅದಕ್ಕೆ ತಿದ್ದುಪಡಿ ತಂದು ಜಾರಿಗೊಳಿಸಲಾಯಿತು.

-ಅದರಲ್ಲಿ ಮುಸ್ಲಿಂ ಕಾಯ್ದೆ ಅನುಸಾರ ದಾನ ಮಾಡಲಾಗಿರುವ ಮತ್ತು ವಕ್ಫ್ ಆಸ್ತಿ ಯನ್ನು ನಿಯಂತ್ರಿಸುವ ವ್ಯವಸ್ಥೆ ಜಾರಿ

Advertisement

Udayavani is now on Telegram. Click here to join our channel and stay updated with the latest news.

Next