ಹೊಸದಿಲ್ಲಿ : ರಫೇಲ್ ಫೈಟರ್ ಜೆಟ್ ವಹಿವಾಟನ್ನು ಪಡೆಯುವುದಕ್ಕೆ ರಿಲಯನ್ಸ್ ಗ್ರೂಪ್‌ಗೆ ಅಗತ್ಯವಿರುವ ಅನುಭವದ ಕೊರತೆ ಇದೆ ಎಂಬ ಆರೋಪವನ್ನು ಬಿಲಿಯಾಧಿಪತಿ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ತಿರಸ್ಕರಿಸಿದ್ದಾರೆ.
ರಫೇಲ್ ವಹಿವಾಟಿನ ಸಂದರ್ಭದಲ್ಲಿ ಡಸಾಲ್ಟ್ ಫ್ರೆಂಚ್ ಸಮೂಹ ಸ್ಥಳೀಯ ಪಾಲುದಾರನಾಗಿ ತನ್ನ ಕಂಪೆನಿಯನ್ನು ಆಯ್ಕೆ ಮಾಡುವಲ್ಲಿ ಕೇಂದ್ರ ಸರಕಾರದ ಯಾವ ಪಾತ್ರವೂ ಇಲ್ಲ ಎಂದು ಅನಿಲ್ ಅಂಬಾನಿ ಹೇಳಿದ್ದಾರೆ.
ಈ ವಿಷಯವನ್ನು ಅನಿಲ್ ಅಂಬಾನಿ ಅವರು ಎಂಟು ತಿಂಗಳ ಹಿಂದೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಎರಡು ಪುಟಗಳ ಪತ್ರ ಬರೆದು ತಿಳಿಸಿದ್ದಾರೆ ಮತ್ತು ಆ ಪತ್ರದಲ್ಲಿ ಅಂಬಾನಿ ಅವರು ಬಹು ಶತಕೋಟಿ ಡಾಲರ್ ಗಳ ಈ ವಹಿವಾಟನ್ನು ತನ್ನ ಕಂಪೆನಿ ಪಡೆಯುವುದಕ್ಕೆ ಕಾರಣವೇನೆಂಬುದನ್ನು ವಿವರಿಸಿದ್ದಾರೆ.
2017ರ ಡಿಸೆಂಬರ್ 12ರಂದು ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ಅನಿಲ್ ಅಂಬಾನಿ ಅವರು “ನಮ್ಮ ಕುಟುಂಬಕ್ಕೆ ಗಾಂಧಿ ಕುಟುಂಬದೊಂದಿಗೆ ತಲೆಮಾರುಗಳ ಗೌರವಯುತ ಸಂಬಂಧವಿದೆ; ಹಾಗಿದ್ದರೂ ಕಾಂಗ್ರೆಸ್ ಪಕ್ಷದ ಅನೇಕ ಪದಾಧಿಕಾರಿಗಳು ನನ್ನ ಹಾಗೂ ನನ್ನ ಕುಟುಂಬದವರ ವಿರುದ್ಧ ದುರದೃಷ್ಟಕರ ಹೇಳಿಕೆಗಳನ್ನು ನೀಡಿರುವುದು ನನಗೆ ಅತೀವ ನೋವುಂಟು ಮಾಡಿದೆ’ ಎಂದು ಹೇಳಿದ್ದಾರೆ.
ರಫೇಲ್ ವಹಿವಾಟನ್ನು ಪಡೆಯುವಲ್ಲಿ ನಮಗೆ ಅಗತ್ಯವಿರುವ ಅನುಭವ ಇರುವುದು ಮಾತ್ರವಲ್ಲದೆ ರಕ್ಷಣಾ ಉತ್ಪಾದನೆಯ ಅನೇಕ ಮುಖ್ಯ ವಿಷಯಗಳಲ್ಲಿ ನಾವು ನೇತಾರರೇ ಆಗಿದ್ದೇವೆ’ ಎಂದು ಅನಿಲ್ ಅಂಬಾನಿ ಪತ್ರದಲ್ಲಿ ಹೇಳಿದ್ದಾರೆ.