Advertisement

LTTE Ban Extended: ಮತ್ತೆ ಐದು ವರ್ಷಗಳ ಕಾಲ ನಿಷೇಧ ವಿಸ್ತರಿಸಿದ ಕೇಂದ್ರ ಸರ್ಕಾರ

04:50 PM May 14, 2024 | Team Udayavani |

ನವದೆಹಲಿ: ತಮಿಳುನಾಡು ಸೇರಿದಂತೆ ದೇಶದಲ್ಲಿ ಪ್ರತ್ಯೇಕ ದೇಶದ ಬೇಡಿಕೆಗೆ ಕುಮ್ಮಕ್ಕು ನೀಡುತ್ತಿದ್ದ ಹಾಗೂ ಭಾರತದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುತ್ತಿದ್ದ ಎಲ್‌ ಟಿಟಿಇ ಸಂಘಟನೆ ಮೇಲಿನ ನಿಷೇಧವನ್ನು ಇನ್ನೂ ಐದು ವರ್ಷಗಳ ಕಾಲ ಮುಂದುರಿಸಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ (ಮೇ 14) ತಿಳಿಸಿದೆ.

Advertisement

ಇದನ್ನೂ ಓದಿ:Chikkamagaluru; ಮಲೆನಾಡಿಗರಲ್ಲಿ ಮಂದಹಾಸ ಮೂಡಿಸಿದ ಮಳೆರಾಯ

ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ 1967ರ ಸೆಕ್ಷನ್‌ 3 ಹಾಗೂ ಸಬ್‌ ಸೆಕ್ಷನ್ಸ್‌ (1 ), (3)ರ ಪ್ರಕಾರ ಕೇಂದ್ರ ಗೃಹ ಸಚಿವಾಲಯ ಎಲ್‌ ಟಿಟಿಇ ಮೇಲೆ ನಿಷೇಧ ಹೇರಿರುವುದಾಗಿ ವರದಿ ವಿವರಿಸಿದೆ.

ಎಲ್‌ ಟಿಟಿಇ ಶ್ರೀಲಂಕಾ ಮೂಲದ್ದೇ ಆದರೂ ಕೂಡಾ ಅದರ ಬೆಂಬಲಿಗರು, ಸಹಾನುಭೂತಿ ಹೊಂದಿರುವವರು ಭಾರತದಲ್ಲಿದ್ದಾರೆ. ಇವರು ಈಗಲೂ ದೇಶದಲ್ಲಿ ಸಕ್ರಿಯರಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅಪಾಯ ಹೆಚ್ಚಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟನೆಯಲ್ಲಿ ತಿಳಿಸಿದೆ.

2009ರಲ್ಲಿ ಶ್ರೀಲಂಕಾದಲ್ಲಿನ ಸೇನಾ ಕಾರ್ಯಾಚರಣೆಯಲ್ಲಿ ಎಲ್‌ ಟಿಟಿಇ ಪರಾಭವಗೊಂಡ ನಂತರವೂ ಕೂಡಾ, ತಮಿಳರ ಪ್ರತ್ಯೇಕ ರಾಷ್ಟ್ರ(ಈಳಂ)ದ ಪರಿಕಲ್ಪನೆಯಿಂದ ದೂರವಾಗಿಲ್ಲ. ಈ ನಿಟ್ಟಿನಲ್ಲಿ ಪ್ರತ್ಯೇಕ ದೇಶಕ್ಕಾಗಿ ಅದರ ಚಟುವಟಿಕೆ ಮುಂದುವರಿಸಲು ದೇಣಿಗೆ ಸಂಗ್ರಹ ಮತ್ತು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದರ ಚಟುವಟಿಕೆ ಸ್ಥಳೀಯವಾಗಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಕ್ರಿಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Advertisement

ಎಲ್‌ ಟಿಟಿಇ ಪರವಾದ ಗುಂಪುಗಳು ಹಾಗೂ ಬೆಂಬಲಿಗರು ಪ್ರತ್ಯೇಕ ದೇಶದ ಸಂಚಿಗೆ ಭಾರತದಲ್ಲಿ ಬೆಂಬಲ ದೊರೆಯುತ್ತಿದೆ, ಅದರಲ್ಲೂ ಮುಖ್ಯವಾಗಿ ತಮಿಳುನಾಡಿನಲ್ಲಿ ಭಾರೀ ಪ್ರಭಾವ ಬೀರಿದ್ದು, ಎಲ್‌ ಟಿಟಿಇ ಸೋಲಿಗೆ ಭಾರತವೇ ಪ್ರಮುಖ ಕಾರಣ ಎಂಬ ದೇಶ ವಿರೋಧಿ ಹೇಳಿಕೆಗಳನ್ನು ಎಲ್‌ ಟಿಟಿಇ ಬೆಂಬಲಿಗರು ಹರಡುತ್ತಿದ್ದಾರೆ ಎಂದು ವರದಿ ವಿವರಿಸಿದೆ.

1976ರಲ್ಲಿ ಶ್ರೀಲಂಕಾದಲ್ಲಿ ವೇಲುಪಿಳ್ಳೈ ಪ್ರಭಾಕರನ್‌ ಎಲ್‌ ಟಿಟಿಇಯನ್ನು ಸ್ಥಾಪಿಸಿದ್ದು, ಇದು ಕೆಲವೇ ವರ್ಷಗಳಲ್ಲಿ ಬಹುದೊಡ್ಡ ಭಯೋತ್ಪಾದಕ ಸಂಘಟನೆಯಾಗಿ ಬೆಳೆದಿತ್ತು. 1991ರಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಯಾದ ನಂತರ ಭಾರತ ಎಲ್‌ ಟಿಟಿಇ ಮೇಲೆ ನಿಷೇಧ ಹೇರಿತ್ತು. ಆ ಬಳಿಕ ಪ್ರತಿ ಐದು ವರ್ಷಗಳಿಗೊಮ್ಮೆ ಸಂಘಟನೆ ಮೇಲಿನ ನಿಷೇಧವನ್ನು ವಿಸ್ತರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next