ನವದೆಹಲಿ:18ರಿಂದ 44ವರ್ಷ ವಯಸ್ಸಿನವರು ಕೋವಿಡ್ 19 ಲಸಿಕೆ ಪಡೆಯಲು ಕೋವಿನ್ ಆ್ಯಪ್ ನಲ್ಲಿ ನೇರ (ಆನ್ ಸೈಟ್) ವಾಗಿ ನೋಂದಣಿ ಮತ್ತು ಅಪಾಯಿಂಟ್ ಮೆಂಟ್ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಮತ್ತೆ ಅವಕಾಶ ಕಲ್ಪಿಸಿಕೊಟ್ಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ಮೈಸೂರು ಜಿಲ್ಲೆಯಲ್ಲಿ 21 ಮಂದಿಯಲ್ಲಿ ಬ್ಲಾಕ್ ಫಂಗಸ್ ಪತ್ತೆ: ರೋಹಿಣಿ ಸಿಂಧೂರಿ
ಈ ಅವಕಾಶ ಕೇವಲ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಸಕ್ರಿಯಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ(ಮೇ 24) ಘೋಷಿಸಿದೆ.
ಇದು ಖಾಸಗಿ ಸಿವಿಸಿ(ಕೋವಿಡ್ ಲಸಿಕಾ ಕೇಂದ್ರ)ಗಳಿಗೆ ಅನ್ವಯಿಸುವುದಿಲ್ಲ. ಅವರು ತಮ್ಮ ಲಸಿಕಾ ನೋಂದಣಿಯನ್ನು ಆನ್ ಲೈನ್ ಅಪಾಯಿಂಟ್ ಗಳಿಗಾಗಿ ಸ್ಲಾಟ್ ಗಳೊಂದಿಗೆ ಪ್ರತ್ಯೇಕವಾಗಿ ಪ್ರಕಟಿಸಬೇಕಾಗುತ್ತದೆ. ಲಸಿಕೆ ವ್ಯರ್ಥವಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ 18ರಿಂದ 44 ವರ್ಷ ವಯಸ್ಸಿನವರಿಗೆ ಆನ್ ಸೈಟ್ ನೋಂದಣಿ ಮತ್ತು ಅಪಾಯಿಂಟ್ ಮೆಂಟ್ ನೀಡುವ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ನಿರ್ಧರಿಸಬೇಕು ಎಂದು ಸಚಿವಾಲಯ ಹೇಳಿಕೆಯಲ್ಲಿ ವಿವರಿಸಿದೆ.
18-44 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಾಗ ದಿನಾಂತ್ಯಕ್ಕೆ ಕೆಲವೊಮ್ಮೆ ಯಾವುದೇ ಅಪಾಯಿಂಟ್ ಮೆಂಟ್ ಇಲ್ಲದೆ ಡೋಸ್ ಗಳು ವ್ಯರ್ಥವಾಗುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ ಲಸಿಕಾ ಕೇಂದ್ರದಲ್ಲೇ ನೇರ ನೋಂದಣಿ ಮೂಲಕ ಲಸಿಕೆಗೆ ಅನುವು ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದೆ.