ಜೈಪುರ : ರಾಜಸ್ಥಾನ ತನ್ನ ಕೈತಪ್ಪಿ ಹೋಗುವುದನ್ನು ಚುನಾವಣೆಗೆ ಮೊದಲೇ ಅರಿತಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಲ್ಲಿ ಕೃತಕವಾಗಿ ಯೂರಿಯ ಕೊರತೆ ಉಂಟಾಗುವಂತೆ ಮಾಡಿದ್ದು ಆ ಬಗ್ಗೆ ನೂತನ ರಾಜ್ಯ ಸರಕಾರ ತನಿಖೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್‌ಲೋಟ್ ಹೇಳಿದ್ದಾರೆ.
ರಾಜಸ್ಥಾನದಂತೆ ಮಧ್ಯ ಪ್ರದೇಶವೂ ತನ್ನ ಕೈತಪ್ಪುವ ಭೀತಿಯಿಂದ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಇಲ್ಲಿಯೂ ಕೃತಕ ಯೂರಿಯಾ ಕೊರತೆ ಸೃಷ್ಟಿಸಿದೆ. ಈ ಎರಡು ರಾಜ್ಯಗಳಿಗೆಂದು ಗೊತ್ತುಪಡಿಸಲಾಗಿದ್ದ ಯೂರಿಯಾ rack ಗಳನ್ನು ಹರಿಯಾಣಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ರಾಜಸ್ಥಾನದ ಕಾಂಗ್ರೆಸ್ ಸರಕಾರ ಈಗ ತನಿಖೆ ನಡೆಸುತ್ತಿದೆ ಎಂದು ಗೆಹಲೋಟ್ ಅವರಿಂದು ರಾಜಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಈಚೆಗೆ ನಡೆದಿದ್ದ ಪಂಚರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ದಲ್ಲಿ ಸೋಲುಂಡಿತ್ತು.
ರಾಜಸ್ಥಾನದ ಯಾವುದೇ ಜಿಲ್ಲೆಯಲ್ಲಿ ಯೂರಿಯ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೆಹಲೋಟ್ ಹೇಳಿದರು.
ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ರಾಜಸ್ಥಾನದಲ್ಲಿ ಯೂರಿಯವನ್ನು ಪೊಲೀಸ್ ರಕ್ಷಣೆಯಲ್ಲಿ ವಿತರಿಸಲಾಗುತ್ತಿತ್ತು ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೆಹ್‌ಲೋಟ್ ಕಟುವಾಗಿ ಟೀಕಿಸಿದರು. 2008-13ರ ರಾಜಸ್ಥಾನದ ಕಾಂಗ್ರೆಸ್ ಸರಕಾರಾವಧಿಯಲ್ಲಿ ಎಂದೂ ಕೂಡ ಅಂತಹ ಘಟನೆ ನಡೆದೇ ಇಲ್ಲ ಎಂದು ಗೆಹ್‌ಲೋಟ್ ಹೇಳಿದರು.